ಇಂಡಿಯಾ ಒಕ್ಕೂಟದ ಬೃಹತ್ ರ್‍ಯಾಲಿಯಿಂದಾಗಿ ದೆಹಲಿಯ ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ತೊಂದರೆ ಉಂಟಾಗಲಿದೆ ಎಂದು ಬಿಜೆಪಿ ಮಾಡಿದ್ದ ಆರೋಪವು ಸಂಪೂರ್ಣವಾಗಿ ಸುಳ್ಳಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಹಾಗೆಯೇ ದೆಹಲಿ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿ ನಡೆದಿದ್ದು, ಬಿಜೆಪಿ ಅಪಪ್ರಚಾರದ ಬಲೂನ್ ಪಂಕ್ಚರ್ ಆಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ನವೆಂಬರ್ 1ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಬೃಹತ್ ರ್‍ಯಾಲಿಯಿಂದಾಗಿ ದೆಹಲಿಯ ಮಾರುಕಟ್ಟೆಗಳಲ್ಲಿ ವ್ಯಾಪಾರ ಸಂಪೂರ್ಣವಾಗಿ ಕಂಗೆಡಲಿದೆ, ವರ್ತಕರಿಗೆ ಭಾರಿ ನಷ್ಟವಾಗಲಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಪ್ರಧಾನ ಕಾರ್ಯದರ್ಶಿ (ಸಂಪರ್ಕ) ಜೈರಾಮ್ ರಮೇಶ್ ಅವರು ಸೋಮವಾರ (ನವೆಂಬರ್ 2) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಿಇಸಿ ವಿರುದ್ಧ ‘ಇಂಡಿಯಾ’ ಒಕ್ಕೂಟದ ಪ್ರತಿಭಟನೆ: ಉತ್ತರ ಪ್ರದೇಶದಲ್ಲಿ ಬಿಜೆಪಿ ಬೃಹತ್ ಪಾದಯಾತ್ರೆ
“ಬಿಜೆಪಿಯ ಸಂಪೂರ್ಣ ಪ್ರಚಾರ ತಂತ್ರವೇ ಕುಸಿದುಬಿದ್ದಿದೆ! ‘ಇಂಡಿಯಾ’ ಒಕ್ಕೂಟದ ರ್‍ಯಾಲಿಯನ್ನು ಅಪಖ್ಯಾತಿಗೊಳಿಸಲು, ಜನರು ದೆಹಲಿಗೆ ಬರುವುದನ್ನು ತಡೆಯಲು, ಒಂದು ಸುಳ್ಳು ಕಥನಗಳನ್ನು ಹರಡಲಾಗಿತ್ತು. ಈ ಕಾರ್ಯಕ್ರಮದಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ, ಮಾರುಕಟ್ಟೆಗಳು ಮುಚ್ಚಬೇಕಾಗುತ್ತದೆ ಎಂದು ಬಿಂಬಿಸಲಾಗಿತ್ತು. ದೇಶದ ವಿವಿಧ ಭಾಗಗಳಿಂದ ಬರುವ ಜನರು ಸಹಜವಾಗಿಯೇ ಇಲ್ಲಿ ಶಾಪಿಂಗ್ ಮಾಡುತ್ತಾರೆ. ಇದರಿಂದ ದೆಹಲಿಯ ಪ್ರತಿಯೊಬ್ಬ ವ್ಯಾಪಾರಿಗೂ ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ಲಾಭವಾಗುತ್ತದೆ ಎಂಬುದು ಯಾರಿಗಾದರೂ ತಿಳಿಯುವಂತಹ ವಿಷಯವೇ ಆಗಿದೆ” ಎಂದು ತಿಳಿಸಿದ್ದಾರೆ.
“ಬಿಜೆಪಿ ರೂಪಿಸಿದ ಈ ಸುಳ್ಳು ಮತ್ತು ತರ್ಕಹೀನ ಅಪಪ್ರಚಾರದ ಹಿಂದಿನ ಉದ್ದೇಶ ಸ್ಪಷ್ಟವಾಗಿತ್ತು. ‘ಮತ ಕಳ್ಳತನ’ದಂತಹ ಗಂಭೀರ ವಿಷಯಗಳು ಮತ್ತು ಚುನಾವಣಾ ಆಯೋಗದ ಹೊಣೆಗಾರಿಕೆ (ಗ್ಯಾನೇಶ್ ಕುಮಾರ್ ಅವರನ್ನು ರಕ್ಷಿಸುವ ಸಲುವಾಗಿ) ಕುರಿತಾದ ಚರ್ಚೆಗಳಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯುವುದು, ಜನರು ಈ ಬೃಹತ್ ರ್‍ಯಾಲಿಯಲ್ಲಿ ಭಾಗವಹಿಸದಂತೆ ತಡೆಯುವುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ನಡೆದಿದ್ದೇ ಬೇರೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
“ದೆಹಲಿಯ ಜನರು ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದವರು, ಈ ಅಪಪ್ರಚಾರಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದರು. ರಾಹುಲ್ ಗಾಂಧಿಯವರ ಮನವಿಗೆ ಸ್ಪಂದಿಸಿದ ಜನರು, ದೆಹಲಿಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡಿದರು. ಹಳೆಯ ದೆಹಲಿಯ ಸಗಟು ಮಾರುಕಟ್ಟೆಗಳಲ್ಲಿ ಅಂಗಡಿಗಳು ತೆರೆದಿದ್ದವು, ಅಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು. ಅಷ್ಟೇ ಅಲ್ಲದೆ, ಸಣ್ಣ ವ್ಯಾಪಾರಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಂದಲೂ ಜನರು ವಸ್ತುಗಳನ್ನು ಖರೀದಿಸಿದರು. ಪತ್ರಿಕಾ ವರದಿಗಳೇ ಈ ಸುಳ್ಳು ಕಥನದ ಪೊಳ್ಳುತನವನ್ನು ಬಯಲುಗೊಳಿಸಿವೆ” ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.
ಇದನ್ನೂ ಓದಿ: ಮತಕಳವು ಸಾಮಾನ್ಯ ಕಳ್ಳತನವಲ್ಲ, ಇದು ದೇಶದ್ರೋಹ: ಗ್ಯಾನೇಶ್, ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ
“ಈ ಮನವಿಗೆ ಸ್ಪಂದಿಸಿ, ಪ್ರಜಾಸತ್ತಾತ್ಮಕ ಪ್ರತಿಭಟನೆಗೆ ಬೆಂಬಲ ನೀಡಿದ್ದಲ್ಲದೆ, ಸ್ಥಳೀಯ ಆರ್ಥಿಕತೆಗೂ ಚೈತನ್ಯ ತುಂಬಿದ ದೆಹಲಿಯ ವ್ಯಾಪಾರಿಗಳಿಗೆ ಮತ್ತು ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಹೇಳಿದರು. “ಪ್ರಜಾಪ್ರಭುತ್ವದ ಧ್ವನಿಯನ್ನು ಭಯ ಹುಟ್ಟಿಸುವ ಮೂಲಕವಾಗಲಿ ಅಥವಾ ಅಪಪ್ರಚಾರದ ಮೂಲಕವಾಗಲಿ ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು” ಎಂದು ಹೇಳಿದರು.
“ವಂಚನೆಯ ಸಚಿವರು ಮತ್ತು ಬಿಜೆಪಿ ಪಕ್ಷದವರು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಕಳೆದ 12 ವರ್ಷಗಳಿಂದ ಈ ದೇಶದ ಜನರು ಇಂತಹ ತಂತ್ರಗಳನ್ನು ನೋಡುತ್ತಲೇ ಬಂದಿದ್ದಾರೆ, ಇನ್ನು ಮುಂದೆ ಜನರು ಬಿಜೆಪಿಯ ಮೋಸದ ಜಾಲಕ್ಕೆ ಬಲಿಯಾಗುವುದಿಲ್ಲ. ಜನರು ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳುತ್ತಾರೆ, ವ್ಯಾಪಾರ-ವಹಿವಾಟುಗಳು ಸಮೃದ್ಧವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ. ಹೊಣೆಗಾರಿಕೆಯನ್ನು ಜನರು ಬಯಸುತ್ತಾರೆ. ಮತ ಕದಿಯುವವರೇ – ನಿಮ್ಮ ಸ್ಥಾನಗಳನ್ನು ಖಾಲಿ ಮಾಡಿ” ಎಂದಿದ್ದಾರೆ.




