ಭಾರತವು ವೆನೆಜುವೆಲಾದಿಂದ ತೈಲ ಆಮದನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುತ್ತಿದೆ. ಪ್ರಸ್ತುತ ಭಾರತಕ್ಕೆ ಅತಿ ಹೆಚ್ಚು ತೈಲ ನೀಡುತ್ತಿರುವ ದೇಶಗಳಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ. ಯುಎಇ ಎರಡನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಮತ್ತು ಅಮೆರಿಕವನ್ನೇ ಹಿಂದಿಕ್ಕಿರುವ ವೆನೆಜುವೆಲಾ ಇದೀಗ ಮೂರನೇ ಸ್ಥಾನದಲ್ಲಿದೆ. ನಿಧಾನವಾಗಿ ರಷ್ಯಾ ಬದಲು ವೆನೆಜುವೆಲಾದಿಂದ ಕಚ್ಚಾ ತೈಲ ಆಮದು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಜಾಗತಿಕ ಇಂಧನ ಬಿಕ್ಕಟ್ಟು, ದೇಶದಲ್ಲಿ ಹೆಚ್ಚುತ್ತಿರುವ ಎಲ್‌ಪಿಜಿ ಮತ್ತು ಇಂಧನ ಬೆಲೆಗಳ ಮಧ್ಯೆ, ಅಮೆರಿಕವು ಇತ್ತೀಚೆಗೆ 30 ದಿನಗಳ ವಿನಾಯಿತಿಯನ್ನು ವಿಸ್ತರಿಸಿದೆ. ಈ ನಡುವೆ ದೇಶಕ್ಕೆ ರಷ್ಯಾದ ಕಚ್ಚಾ ತೈಲ ಪೂರೈಕೆ ಕಡಿಮೆಯಾಗುವ ನಿರೀಕ್ಷೆಯಿದೆ. ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಪ್ರಕಾರ ಕಳೆದ 10 ವಾರಗಳಲ್ಲಿ ನಾಲ್ಕು ವಾರ ರಷ್ಯಾದಿಂದ ಭಾರತಕ್ಕೆ ತೈಲ ಆಮದು ದಿನಕ್ಕೆ 2 ಮಿಲಿಯನ್ ಬ್ಯಾರೆಲ್‌ಗಳನ್ನು (ಬಿಪಿಡಿ) ಮೀರಿದೆ. ಈ ಪೈಕಿ ಯುರೇಷಿಯನ್ ದೇಶವು ಏಪ್ರಿಲ್‌ನಲ್ಲಿ 1.8 ಮಿಲಿಯನ್ ಬಿಪಿಡಿ ಮತ್ತು ಮಾರ್ಚ್‌ನಲ್ಲಿ 1.6 ಮಿಲಿಯನ್ ಬಿಪಿಡಿ ರವಾನಿಸಿತ್ತು. ಆದರೆ ಮೇ ತಿಂಗಳಲ್ಲಿ ಅಮೆರಿಕದ ನಿರ್ಬಂಧ ಒತ್ತಡದಿಂದಾಗಿ ಆಮದು ತೀವ್ರವಾಗಿ 700,000 ಬಿಪಿಡಿಗಿಂತ ಕಡಿಮೆಯಾಗಿದೆ.
ಇದನ್ನು ಓದಿದ್ದೀರಾ? ಭಾರತವು ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ: ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆಯೇ ಹಲವು ಬಾರಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ವಿರುದ್ಧ, ಪ್ರಮುಖವಾಗಿ ಭಾರತದ ವಿರುದ್ಧ ಕಠಿಣ ಆರ್ಥಿಕ ಕ್ರಮಗಳ ಎಚ್ಚರಿಕೆಯನ್ನು ನೀಡಿದ್ದಾರೆ. “ಈ ವಿಷಯದಲ್ಲಿ ಭಾರತವು ಅಮೆರಿಕದೊಂದಿಗೆ ಸಹಕರಿಸದಿದ್ದರೆ, ನಾವು ಅವರ ಉತ್ಪನ್ನಗಳ ಮೇಲೆ ತಕ್ಷಣವೇ ಭಾರಿ ಸುಂಕವನ್ನು ಹೇರಬಹುದು” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆಗೆ ಮಣಿದ ಕೇಂದ್ರ ಸರ್ಕಾರವು ರಷ್ಯಾದಿಂದ ಆಮದನ್ನು ಕೊಂಚ ಕೊಂಚವೇ ಕಡಿತಗೊಳಿಸುತ್ತಿರುವಂತಿದೆ.
ಇನ್ನು ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂದು ಟ್ರಂಪ್ ಘೋಷಣೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ವೆನೆಜುವೆಲಾದಿಂದ ತೈಲ ಆಮದು ಅಧಿಕವಾಗಿದೆ. ಅಂದರೆ ನಮ್ಮ ದೇಶದ ವಿದೇಶಾಂಗ ನೀತಿ, ಆಮದು-ರಫ್ತು ಅಮೆರಿಕದ ಟ್ರಂಪ್ ನಿರ್ಧರಿಸುವುದೇ?
ಈ ನಡುವೆ ಮೇ ತಿಂಗಳಲ್ಲಿ ಸೌದಿ ಅರೇಬಿಯಾ ಮತ್ತು ಅಮೆರಿಕವನ್ನು ಹಿಂದಿಕ್ಕಿ ವೆನೆಜುವೆಲಾ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುವ ಮೂರನೇ ಅತಿದೊಡ್ಡ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ. ದಕ್ಷಿಣ ಅಮೆರಿಕದ ದೇಶದಿಂದ ಹೆಚ್ಚಿನ ಕಚ್ಚಾ ತೈಲ ಖರೀದಿಗೆ ಯುಎಸ್ ಒತ್ತಾಯಿಸುತ್ತಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ. ವೆನೆಜುವೆಲಾ ಈ ತಿಂಗಳು ಈವರೆಗೆ ದೇಶಕ್ಕೆ 417,000 ಬಿಪಿಡಿ ತೈಲ ಪೂರೈಸಿದೆ. ಏಪ್ರಿಲ್‌ನಲ್ಲಿ 283,000 ಬಿಪಿಡಿ ಪೂರೈಸಿದೆ. ಅದಕ್ಕೂ ಹಿಂದೆ ಒಂಬತ್ತು ತಿಂಗಳಲ್ಲಿ ಯಾವುದೇ ಪೂರೈಕೆ ಮಾಡಿರಲಿಲ್ಲ ಎಂದು ಎಕಾನಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ವೆನೆಜುವೆಲಾವು ವಿಶ್ವದ ಅತಿ ದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ. ಚೀನಾ ಇದರ ತೈಲದ ಅತಿ ದೊಡ್ಡ ಖರೀದಿದಾರನಾಗಿದ್ದು, ಈ ಪ್ರದೇಶದಲ್ಲಿ ಅಮೆರಿಕ ತನ್ನ ಪ್ರಾಬಲ್ಯ ಮರುಸ್ಥಾಪಿಸಲು ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿಯೇ ಜನವರಿಯಲ್ಲಿ ಅಮೆರಿಕ ಸೇನೆಯು ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ತೀವ್ರ ವಾಯುದಾಳಿ ನಡೆಸಿ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆ ಹಿಡಿದಿದೆ. ಜಾಗತಿಕ ತೈಲ ಮಾರುಕಟ್ಟೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಅಂದುಕೊಂಡಿರುವ ಟ್ರಂಪ್ ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಇರಾನ್ ಬದಲು ವೆನೆಜುವೆಲಾದಿಂದ ಭಾರತ ತೈಲ ಖರೀದಿ ಮಾಡಲಿದೆ ಎಂಬ ಘೋಷಣೆಯನ್ನೂ ಮಾಡಿದ್ದಾರೆ!




