ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧ್ಯಕ್ಷರಾಗಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಶಿಕ್ಷಣ, ಸಹಕಾರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವ ಕೌಜಲಗಿ ಅವರಿಗೆ ರಾಜ್ಯಮಟ್ಟದ ಮಹತ್ವದ ಜವಾಬ್ದಾರಿ ದೊರೆತಿರುವುದಕ್ಕೆ ಬೈಲಹೊಂಗಲ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ಹರ್ಷ ವ್ಯಕ್ತವಾಗಿದೆ.ಕೌಜಲಗಿ ಅವರ ತಂದೆ ದಿವಂಗತ ಶಿವಾನಂದ ಕೌಜಲಗಿ ಅವರು ಈ ಹಿಂದೆ ಲೋಕೋಪಯೋಗಿ ಸಚಿವರಾಗಿ ರಸ್ತೆ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದರು.
ಇದೀಗ ಪುತ್ರ ಮಹಾಂತೇಶ ಕೌಜಲಗಿ ಅವರಿಗೂ ರಸ್ತೆ ಅಭಿವೃದ್ಧಿಯ ಹೊಣೆಗಾರಿಕೆ ದೊರೆತಿರುವುದು ವಿಶೇಷವಾಗಿದೆ.ನೇಮಕಾತಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಶಾಸಕ ಬಾಬಾಸಾಹೇಬ ಪಾಟೀಲ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.



