ಅಹಮದಾಬಾದ್ನ ವಸ್ತ್ರಾಪುರ ಪ್ರದೇಶದಲ್ಲಿರುವ ‘ಔಡಾ’ ಸಾರ್ವಜನಿಕ ಉದ್ಯಾನವನದಲ್ಲಿ ಶಾಂತಿಯುತವಾಗಿ ಪುಸ್ತಕ ಓದುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಯುವಕ-ಯುವತಿಯರ ಗುಂಪಿನ ಮೇಲೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರ ಗುಂಪು ದಾಳಿ ನಡೆಸಿದೆ. ಘಟನೆಯಲ್ಲಿ ಕನಿಷ್ಠ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ನೆಟ್ಟಿಗರು ಬಜರಂಗದಳದವರನ್ನು ಅಕ್ಷರದ್ರೋಹಿಗಳೆಂದು ಟೀಕಿಸಿದ್ದಾರೆ.
ಖಾಸಗಿ ಶಾಲೆಯೊಂದರ ಪಠ್ಯಕ್ರಮದಿಂದ ನೊಬೆಲ್ ಪುರಸ್ಕೃತ ನಾಯಕಿ ಮಲಾಲಾ ಯೂಸುಫ್ಝಾಯಿ ಅವರ ‘ಐ ಆಮ್ ಮಲಾಲಾ’ ಮತ್ತು ಎನ್ನಿ ಫ್ರಾಂಕ್ ಅವರ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’ ಪುಸ್ತಕಗಳನ್ನು ತೆಗೆದುಹಾಕಿದ ವಿವಾದದ ಹಿನ್ನೆಲೆಯಲ್ಲಿ, “ಸ್ಟೂಡೆಂಟ್ ಆಂಡ್ ಯೂತ್ ಕಲೆಕ್ಟಿವ್” ಎಂಬ ಸಂಘಟನೆಯು ಸಾರ್ವಜನಿಕವಾಗಿ ಈ ಪುಸ್ತಕಗಳನ್ನು ಓದುವ ಶಾಂತಿಯುತ ಕಾರ್ಯಕ್ರಮ ಆಯೋಜಿಸಿತ್ತು.
ಇದನ್ನೂ ಓದಿ: ‘ಪಂಜಾಬ್ 95’ ಸಿನಿಮಾಕ್ಕೆ 120 ಕಡೆ ಕತ್ತರಿ: ಜಸ್ವಂತ್ ಸಿಂಗ್ ಖಲ್ರಾ ಬಗ್ಗೆ ಸರ್ಕಾರ ಹೆದರುತ್ತಿರುವುದೇಕೆ?
ಸಂಜೆ ವೇಳೆ ಉದ್ಯಾನವನದಲ್ಲಿ ಯುವಕರು, ವಿದ್ಯಾರ್ಥಿಗಳು ಹಾಗೂ ವಕೀಲರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿ ಸಾಹಿತ್ಯ ಓದಿನಲ್ಲಿ ತೊಡಗಿದ್ದರು. ಈ ವೇಳೆ ಕೋಲುಗಳನ್ನು ಹಿಡಿದು ಬಂದ 20ಕ್ಕೂ ಹೆಚ್ಚು ಜನರ ಗುಂಪು ದಾಳಿ ನಡೆಸಿದೆ. ಮಲಾಲಾ ಯೂಸುಫ್ಝಾಯಿ ಅವರ ಪುಸ್ತಕವನ್ನು ಓದುತ್ತಿರುವುದನ್ನು ಪ್ರಶ್ನಿಸಿದ ದಾಳಿಕೋರರು, ನೂಕಾಟ-ತೂಕಾಟ ನಡೆಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಹಿಳೆಯರ ಕೂದಲನ್ನು ಎಳೆದು ನಿಂದಿಸಲಾಗಿದೆ. ಓದುಗರ ಮೇಲೆ ದೈಹಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಜಯಕುಮಾರ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ವಸ್ತ್ರಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ದಂಗೆ ಮತ್ತು ಅಕ್ರಮ ಕೂಟ ಸೇರಿದಂತೆ ಹಲವು ಕಾಯ್ದೆಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಗುರುತು ಪತ್ತೆ ಹಚ್ಚಲಾಗುತ್ತಿದ್ದು, ತನಿಖೆ ಮುಂದುವರಿದಿದೆ.




