ಪಂಜಾಬ್‌ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಾದಕ ದ್ರವ್ಯ (ಡ್ರಗ್ಸ್) ಸಮಸ್ಯೆಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಆಮ್ ಆದ್ಮಿ ಪಾರ್ಟಿ (ಎಎಪಿ) ಸರ್ಕಾರ ವಿಫಲವಾಗಿದೆ. ಸಂಸತ್ತಿನಲ್ಲಿ ಭಗವಂತ್ ಉಸಿರಿನಲ್ಲಿ ಮದ್ಯದ ವಾಸನೆ ಬರುತ್ತಿತ್ತು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬ್‌ನ ಸಂಗ್ರೂರ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವೈಯಕ್ತಿಕ ನಡವಳಿಕೆಯನ್ನು ಉಲ್ಲೇಖಿಸಿ ಗಂಭೀರ ಆರೋಪ ಮಾಡಿದರು.
“ನಾನು ಮತ್ತು ಭಗವಂತ್ ಮಾನ್ ಒಟ್ಟಿಗೆ ಲೋಕಸಭೆಯಲ್ಲಿದ್ದೆವು. ಅವರು ನಮ್ಮ ಜತೆಯೇ ಕುಳಿತು ಜೋಕ್ಸ್ ಹೇಳುತ್ತಿದ್ದರು. ಬೆಳಿಗ್ಗೆ 11 ಗಂಟೆಯಾಗುವಷ್ಟರಲ್ಲಿ ಅವರ ಉಸಿರಿನಲ್ಲಿ ಮದ್ಯದ ವಾಸನೆ ಬರುತ್ತಿತ್ತು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯಿಂದ ದೇಶ ರಕ್ಷಿಸಲು ವಿಪಕ್ಷಗಳೊಂದಿಗೆ ಒಟ್ಟಿಗೆ ಹೋರಾಟ: ರಾಹುಲ್ ಗಾಂಧಿ
ಮುಂದುವರಿದು ಮಾತನಾಡಿದ ಅವರು, “ಮದ್ಯಪಾನ ಮಾಡುವುದು ಅವರ ವೈಯಕ್ತಿಕ ವಿಚಾರ, ಅದರಲ್ಲಿ ನನಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಮಾದಕ ವ್ಯಸನ ಹಾಗೂ ಡ್ರಗ್ಸ್ ಸಮಸ್ಯೆಯಿಂದ ಬಳಲುತ್ತಿರುವ ಪಂಜಾಬ್‌ನಂತಹ ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ನಡೆದುಕೊಳ್ಳುವುದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಕಳವಳಕಾರಿ ವಿಚಾರ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಪಂಜಾಬ್ ಜನತೆ ಎಎಪಿ ಮತ್ತು ಭಗವಂತ್ ಮಾನ್ ಅವರನ್ನು ನಂಬಿ ಅಧಿಕಾರ ಕೊಟ್ಟರು. ಪಂಜಾಬ್‌ನಿಂದ ಡ್ರಗ್ಸ್ ನಿರ್ಮೂಲನೆ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದರು. ಆದರೆ ಇಂದಿಗೂ ರಾಜ್ಯದ ಯಾವ ಮೂಲೆಯಲ್ಲೂ ಡ್ರಗ್ ಸಮಸ್ಯೆ ಕಡಿಮೆಯಾಗಿಲ್ಲ, ಅದನ್ನು ನಿಯಂತ್ರಿಸುವ ಶಕ್ತಿ ಈ ಸರ್ಕಾರಕ್ಕಿಲ್ಲ” ಎಂದು ರಾಹುಲ್ ಕಿಡಿಕಾರಿದ್ದಾರೆ.
ಅಲ್ಲದೆ, ಪಂಜಾಬ್ ಸರ್ಕಾರವನ್ನು ಮುಖ್ಯಮಂತ್ರಿ ಭಗವಂತ್ ಮಾನ್ ನಡೆಸುತ್ತಿಲ್ಲ, ಬದಲಿಗೆ ಅರ್ಧ ಸರ್ಕಾರವನ್ನು ಅಮಿತ್ ಶಾ ಮತ್ತು ಇನ್ನರ್ಧವನ್ನು ಅರವಿಂದ್ ಕೇಜ್ರಿವಾಲ್ ದೆಹಲಿಯಿಂದ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 3 ವರ್ಷಗಳಲ್ಲಿ ಪಂಜಾಬ್‌ನ ಡ್ರಗ್ಸ್ ಮುಕ್ತಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನೂ ರಾಹುಲ್ ಗಾಂಧಿ ಈ ವೇಳೆ ಪ್ರಶ್ನಿಸಿದ್ದಾರೆ.





