ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಬಹಿರಂಗ ಚರ್ಚೆಯ ಸವಾಲು ಎಸೆದಿದ್ದಾರೆ. ವಿದೇಶಿ ಪ್ರಭಾವ, ಅದಾನಿ ಪ್ರಕರಣ, ವೋಟ್ ಚೋರಿ, ಎಪ್ಸ್ಟೀನ್ ಫೈಲ್ಸ್ ಸೇರಿದಂತೆ ಗಂಭೀರ ವಿಚಾರಗಳನ್ನು ಚರ್ಚೆಗೆ ಎಳೆದಿದ್ದಾರೆ. ಸರ್ಕಾರ ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ. ಬಿಜೆಪಿಯೂ ಸವಾಲು ಸ್ವೀಕರಿಸಿ ತೊಡೆ ತಟ್ಟಿದೆ. ಈಗ ಒಪ್ಪಿಕೊಂಡಂತೆ ಆರೋಪ-ಪ್ರತ್ಯಾರೋಪಗಳ ನೇರ ಚರ್ಚೆಗೆ ಬಿಜೆಪಿ ಸಿದ್ಧವಾಗಬೇಕು. ವಿಪಕ್ಷಗಳ ಒತ್ತಡಕ್ಕಷ್ಟೇ ಅಲ್ಲ, ಸ್ವತಃ ಬಿಜೆಪಿಗೂ ಇದು ಒಳ್ಳೆಯ ಅವಕಾಶ.
ಒಂದೂವರೆ ದಶಕದಿಂದ ಹತಾಶೆಯಲ್ಲಿದ್ದವರು ಈಗ ಹೊರಬಂದಿದ್ದಾರೆ. ವಿದೇಶಗಳಲ್ಲಿ ಯಾರ್ಯಾರನ್ನ ಗುಪ್ತವಾಗಿ ಭೇಟಿಯಾಗುತ್ತಿದ್ದಾರೆ? ಭಾರತದ ವಿರೋಧಿ ಶಕ್ತಿಗಳು ಯಾರನ್ನು ಬೆಂಬಲಿಸುತ್ತಿವೆ? ಭಾರತದ ಶತೃಗಳ ಭಾಷೆಯಲ್ಲಿ ಯಾರು ಮಾತನಾಡುತ್ತಿದ್ದಾರೆ? ಎಂಬುದನ್ನ ನಾವು ಗುರುತಿಸಬೇಕಿದೆ ಎಂದು ಅದೇ ಹಳೇ ಆರೋಪವೊಂದನ್ನು ಮಾಡುತ್ತಾ ಮೋದಿ ಗುಜರಾತಿನ ನೆಲದಲ್ಲಿ ನಿಂತು. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಅಬ್ಬರಿಸಿದ್ದಾರೆ.
ಈ ಆರೋಪಕ್ಕೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ವಿದೇಶಿ ಸಹಾಯದಿಂದಲೇ ನೀವು ಪ್ರಧಾನಿಯಾಗಿದ್ದೀರಿ, ಅದರಿಂದಲೇ ಮುಂದುವರೆದಿದ್ದೀರಿ, ನಿಮ್ಮ ಆರ್ಥಿಕ ವ್ಯವಸ್ಥೆಯೇ ವಿದೇಶಿ ನಿಯಂತ್ರಣದಲ್ಲಿದೆ. ಈ ಕುರಿತ ಬಹಿರಂಗ ಚರ್ಚೆಗೆ ಆಹ್ವಾನಿಸುತ್ತೇನೆ. ಯಾವುದೇ ವೇದಿಕೆ, ಯಾವುದೇ ಸಮಯದಲ್ಲಾದರೂ ಬರಲು ಸಿದ್ಧ. ಬೇಕಿದ್ದರೆ ನಿಮ್ಮವರೇ ಆದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೇ ತೀರ್ಪುಗಾರರನ್ನಾಗಿ ಕೂರಿಸಿ, ಆದರೆ ಚರ್ಚೆಗೆ ಬರುವುದರಿಂದ ತಪ್ಪಿಸಿಕೊಳ್ಳಬೇಡಿ ಎಂದು ಸವಾಲೆಸೆದರು.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ವೋಟ್ ಚೋರಿ ಆರೋಪಗಳಿಗೆ ಉತ್ತರಿಸುವ ಧೈರ್ಯವಿದ್ದರೆ, ರಾಹುಲ್ ಅವರ ಸವಾಲನ್ನು ಸ್ವೀಕರಿಸಲಿ ಎಂದು ಗುಡುಗಿದ್ದಾರೆ. ಭಾರತದ ಹಿತಾಸಕ್ತಿಗಳನ್ನು ವಿದೇಶಿ ಶಕ್ತಿಗಳ ಮುಂದೆ ಅಡಮಾನವಿಟ್ಟಿರುವ ಆರೋಪಗಳಿಗೂ, ಮತಗಳ್ಳತನದ ಆರೋಪಗಳಿಗೂ ಮೋದಿ ಬಳಿ ಉತ್ತರವಿಲ್ಲ ಎಂದು ಟೀಕಿಸಿದ್ದಾರೆ. ಹೀಗೆ ರಾಹುಲ್ ಗಾಂಧಿ, ಖರ್ಗೆ ಸವಾಲೆಸೆದಿದ್ದೇ ತಡ, ನಿರ್ಮಲಾ ಸೀತಾರಾಮನ್, ಅಮಿತ್ ಶಾ, ಪಿಯೂಶ್ ಗೋಯಲ್, ರೇಖಾ ಗುಪ್ತ ಸೇರಿದಂತೆ ಬಿಜೆಪಿ ನಾಯಕರು ಒಂದೇ ಸಮನೆ ತಿರುಗಿಬಿದ್ದರು. ಚರ್ಚೆ ನಡೆಸಲೆಂದೇ ಸಂಸತ್ತಿನ ಅಧಿವೇಶನ ಎನ್ನುವುದು ಇದೆಯಲ್ಲವೇ ಎಂದು ಹೇಳುತ್ತ, ಅಧಿವೇಶನ ನಡೆಯುವ ಬಹುಪಾಲು ಅವಧಿಯಲ್ಲಿ ವಿದೇಶಿ ಪ್ರವಾಸದಲ್ಲಿ ನಿರತರಾಗುವ ಮೋದಿಯವರ ಪರವಾಗಿ ಬ್ಯಾಟ್ ಬೀಸಿದ್ದಾರೆ.
ರಾಜಕೀಯದಲ್ಲಿ ಸವಾಲು-ಪ್ರತಿಸವಾಲುಗಳೇನೂ ಹೊಸದಲ್ಲ. ವಾಕ್ಸಮರಗಳು ಕಾವೇರಿದಂತೆ, ನಾಯಕರು ಬಹಿರಂಗ ಚರ್ಚೆಗೆ ಆಹ್ವಾನ ನೀಡುವುದು ಸಾಮಾನ್ಯ. ಆದರೆ ಯಾರು ಸವಾಲೆಸೆದರು? ಯಾವುದರ ಬಗ್ಗೆ ಪ್ರಶ್ನಿಸಿದರು? ಯಾರು ಸವಾಲು ಸ್ವೀಕರಿಸಿದರು? ಯಾರು ಸವಾಲಿಗೆ ಜವಾಬು ಕೊಟ್ಟರು? ಕೊಟ್ಟ ಜವಾಬು ಸಮರ್ಥನೀಯವೇ ಎಂಬುದಷ್ಟೇ ಮುಖ್ಯ. ಈಗ ಬಿಜೆಪಿ ಮುಂದಿರುವ ಸವಾಲು ಇದೇ ಸ್ವರೂಪದ್ದು. ಆರೋಪಿಸಿ ಸುಮ್ಮನಾದ ಮೋದಿಯವರನ್ನು ರಕ್ಷಿಸಲು ಹೆಣಗಾಡುವುದ ಬಿಟ್ಟು ಮೋದಿಯವರನ್ನೂ ಸೇರಿಸಿಕೊಂಡು ಚರ್ಚೆಗೆ ಬಂದು ಕೂರಬೇಕು. ಸತ್ಯ ಯಾವುದು, ಸುಳ್ಳು ಯಾವುದು ಎಂಬುದನ್ನು ಹೊರಗಿಡಬೇಕು. ತಪ್ಪು ಮಾಡಿದವರು ಯಾರು ಎಂಬುದನ್ನು ಸಾಕ್ಷ್ಯಾಧಾರಗಳ ಮೂಲಕ ಸ್ಪಷ್ಟಪಡಿಸಬೇಕು.
ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿಯವರು ರಾಜಕೀಯ ಎದುರಾಳಿಗಳ ಮೇಲೆ ‘ದೇಶದ್ರೋಹ’ದಂತಹ ಗಂಭೀರ ಆರೋಪಗಳನ್ನು ಹೊರಿಸುವುದು ಹೊಣೆಗಾರಿಕೆಯ ರಾಜಕಾರಣವೇ? ಜವಾಬ್ದಾರಿಯುತ ಸರ್ಕಾರದ ನಡೆ ಹೇಗಿರಬೇಕು? ವಿಪಕ್ಷಗಳು ನಿಜಕ್ಕೂ ದೇಶದ ಹಿತಾಸಕ್ತಿಗೆ ದ್ರೋಹ ಬಗೆದಿದ್ದರೆ, ಅವರ ಸವಾಲನ್ನು ಎದುರಿಸಿ ಸತ್ಯವನ್ನು ಜಗಜ್ಜಾಹೀರು ಮಾಡುವುದು ನೈತಿಕ ಕರ್ತವ್ಯವಲ್ಲವೇ? ಆದರೆ, ಇಲ್ಲಿ ಬಿಜೆಪಿ ಆಪಾದನೆಗಳನ್ನಷ್ಟೇ ಮಾಡಿ ಸುಮ್ಮನಾಗುತ್ತಿದೆ, ಮುಖಾಮುಖಿಯಾಗಲು ಹಿಂಜರಿಯುತ್ತಿದೆ. ಅಲ್ಲದೆ, ರಾಹುಲ್ vs ಮೋದಿ ಎಂದಿರಬೇಕಾದ ಜಟಾಪಟಿ, ರಾಹುಲ್ vs ಬಿಜೆಪಿ ನಾಯಕರು, ರಾಹುಲ್ vs ಆರ್‌ಎಸ್‌ಎಸ್ ಎನ್ನುವಂತಾಗಿದೆ. ಮೋದಿಯವರನ್ನು ಪ್ರಶ್ನಿಸಿದರೆ ಅಮಿತ್ ಶಾ ಉತ್ತರಿಸುತ್ತಾರೆ. ಆರ್‌ಎಸ್‌ಎಸ್ ಅಜೆಂಡಾಗಳ ವಿರುದ್ಧ ಆರೋಪಿಸಿದರೆ, ಬಿಜೆಪಿ ನಾಯಕರು ಉತ್ತರಿಸುತ್ತಾರೆ.
ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸುವುದನ್ನೇ ನಿತ್ಯದ ಪರಿಪಾಠ ಮಾಡಿಕೊಂಡಂತೆ ಕಾಣುತ್ತಿದೆ. ಮಹತ್ವದ ವಿಶ್ವ ಶೃಂಗಸಭೆಯೊಂದರ ವೇದಿಕೆೆಯಲ್ಲಿ ನಿಂತು ದೇಶದ ಅಭಿವೃದ್ಧಿ ಹಾಗೂ ಭವಿಷ್ಯದ ಬಗ್ಗೆ ಮಾತನಾಡಬೇಕಿದ್ದವರು, ವಿಪಕ್ಷವನ್ನು ಟೀಕಿಸುವುದರಲ್ಲೇ ಅರ್ಧ ಭಾಷಣ ಮುಗಿಸಿದ್ದಾರೆ. ಜಾಗತಿಕ ವೇದಿಕೆಯಲ್ಲಿ ನಿಂತು ವಿಪಕ್ಷವನ್ನು ಹೀಗೆ ನಿರಂತರವಾಗಿ ದೂರುವುದು, ದೇಶದಲ್ಲಿ ನಡೆಯುವ ಎಲ್ಲ ಅನಾಹುತಗಳಿಗೂ ವಿಪಕ್ಷ ನಾಯಕನೇ ಕಾರಣ ಎಂಬಂತೆ ಬಿಂಬಿಸುವುದು ‘ವಿಶ್ವಗುರು’ ಎನಿಸಿಕೊಳ್ಳುವ ನಾಯಕನಿಗೆ ಶೋಭಿಸುವುದಿಲ್ಲ. ಒಂದೊಮ್ಮೆ ‘ಕೌನ್ ರಾಹುಲ್?’ ಎಂದು ಹೀಯಾಳಿಸುತ್ತಿದ್ದವರು, ಇಂದು ಹೋದಲ್ಲಿ-ಬಂದಲ್ಲಿ ರಾಹುಲ್ ಗಾಂಧಿ ಹೆಸರನ್ನೇ ಜಪಿಸುತ್ತಿರುವುದು ಅವರ ಆತಂಕವನ್ನು ತೆರೆದಿಡುತ್ತಿದೆ. ಇಲ್ಲಿ ತೋರುವ ಬದ್ಧತೆಯನ್ನು ವಿಪಕ್ಷಗಳ ಮೇಲೆ ಆರೋಪ ಹೊರಿಸಿ, ಅದನ್ನು ಸಾಬೀತುಪಡಿಸುವಲ್ಲಿಯೂ ತೋರಬೇಕು.
ಒಂದು ವೇಳೆ ತಾವು ನುಣುಚಿಕೊಳ್ಳುತ್ತಿಲ್ಲ ಎಂದಾದರೆ, ರಾಹುಲ್ ಗಾಂಧಿ ಎಸೆದಿರುವ ಬಹಿರಂಗ ಚರ್ಚೆಯ ಸವಾಲನ್ನು ಬಿಜೆಪಿ ಮತ್ತು ಪ್ರಧಾನಿಯವರು ಪೂರ್ಣಮನಸ್ಸಿನಿಂದ ಸ್ವೀಕರಿಸಬೇಕು. ನೇರ ಚರ್ಚೆಯ ಮೇಜಿನ ಬಳಿ ಬಂದು ಕೂತು, ತಾವು ನಿಜಕ್ಕೂ ‘ವಿಶ್ವಗುರು’ ಎಂಬುದನ್ನು, ವಿಪಕ್ಷಗಳು ದೇಶದ ಹಿತಾಸಕ್ತಿಗೆ ಮಾರಕವಾಗಿವೆ ಎಂಬುದನ್ನು ಮತ್ತು ತಮ್ಮ ಮೇಲಿನ ಸಕಲ ಆರೋಪಗಳೂ ಆಧಾರರಹಿತ ಪಿತೂರಿಗಳು ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತುಪಡಿಸಿ ತೋರಿಸಲಿ! ಅಮೆರಿಕದೊಂದಿಗಿನ ದ್ವಿಪಕ್ಷೀಯ ರಹಸ್ಯ ಒಪ್ಪಂದಗಳು, ಸಂಪುಟವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಕೈಗೊಂಡ ನಿರ್ಧಾರಗಳು, ಅದಾನಿ ಪ್ರಕರಣದ ತನಿಖೆ ಮುಕ್ತಾಯಗೊಂಡ ಬಗೆ, ಅಮೆರಿಕ ನಾಯಕ ಬಹಿರಂಗವಾಗಿ ಭಾರತವನ್ನು ತನ್ನ ಕೈಯಾಳಿನಂತೆ ನಡೆಸಿಕೊಳ್ಳುವಾಗಲೂ ತಾವು ವಹಿಸಿದ ಮೌನ, ಕುಖ್ಯಾತ ಸ್ತ್ರೀ ಪೀಡಕ ಎಪ್ಸ್‌ಸ್ಟೀನನ ಫೈಲ್‌ನಲ್ಲಿ ತಮ್ಮ ಹಾಗೂ ತಮ್ಮ ಪಟಾಲಂ ಸದಸ್ಯರ ಹೆಸರು ತಳುಕು ಹಾಕಿಕೊಂಡಿರುವುದರ ಬಗ್ಗೆ ಮುಕ್ತ ಚರ್ಚೆ ಮಾಡಲಿ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಲೈಂಗಿಕ ಹಗರಣದ ಆರೋಪಿಗಳಿಗೆ ಸ್ಥಾನಮಾನ; ನಗೆಪಾಟಲಿಗೀಡಾದ ಮೋದಿಯ ʼಬೇಟಿ ಬಚಾವೋʼ ಘೋಷಣೆ
ವಿರೋಧ ಪಕ್ಷದ ನಾಯಕನ ಮೇಲೆ ನಿರಂತರವಾಗಿ ಮಾನನಷ್ಟ ಮೊಕದ್ದಮೆ ಹೂಡುವ ಬಿಜೆಪಿ ಸರ್ಕಾರವನ್ನು, ಅದೇ ವಿಪಕ್ಷದಿಂದ ಗಂಭೀರ ಪ್ರಶ್ನೆಗಳು ಎದುರಾದಾಗ ಕಿವುಡು ಕಾಡುತ್ತದೆ. ಪ್ರಧಾನಿ ಮೋದಿಯವರು ವಿಪಕ್ಷಗಳ ಮೇಲೆ ಮಾಡುತ್ತಿರುವ ಆರೋಪಗಳಲ್ಲಿ ಹುರುಳಿದ್ದರೆ, ಅದನ್ನು ಸಂಸತ್ತಿನಲ್ಲೋ ಅಥವಾ ಬಹಿರಂಗ ವೇದಿಕೆಯಲ್ಲೋ ಜನರೆದುರು ಬಿಚ್ಚಿಡಲಿ. ಅದೇ ರೀತಿ, ವಿಪಕ್ಷಗಳು ಎತ್ತುತ್ತಿರುವ ಆರ್ಥಿಕ ಹಾಗೂ ಸಾಂವಿಧಾನಿಕ ಪ್ರಶ್ನೆಗಳಿಗೂ ಸರ್ಕಾರ ಉತ್ತರಿಸಲಿ. ಮಾಧ್ಯಮಗಳ ಸಮ್ಮುಖದಲ್ಲಿ, ದೇಶದ ಯುವಕರ ಎದುರು, ಸ್ವತಃ ಆರೆಸ್ಸೆಸ್ ಮುಖ್ಯಸ್ಥರನ್ನೇ ತೀರ್ಪುಗಾರರನ್ನಾಗಿ ಕೂರಿಸಿ ಚರ್ಚೆ ಮಾಡೋಣ ಎನ್ನುವ ರಾಹುಲ್ ಗಾಂಧಿ ಅವರ ಆಹ್ವಾನವನ್ನು ಅಷ್ಟೇ ಹುರುಪಿನಿಂದ ಸ್ವಾಭಿಮಾನದ ಪ್ರಶ್ನೆಯಾಗಿ ತೆಗೆದುಕೊಳ್ಳಲಿ. ಮೂರು ಬಾರಿ ಪ್ರಧಾನಿಯಾದರೂ ಒಮ್ಮೆಯಾದರೂ ವಿಪಕ್ಷಗಳೊಂದಿಗೆ ಒಂದು ಬಹಿರಂಗ ಸಭೆ ಮಾಡಿಲ್ಲ, ಒಂದಾದರೂ ಮಾಧ್ಯಮಗೋಷ್ಠಿ ಮಾಡಿಲ್ಲ ಎನ್ನುವ ವಿಪಕ್ಷದ ಟೀಕೆಯನ್ನು ಸುಳ್ಳು ಮಾಡಲಿ. ತನ್ನನ್ನು ತಾನು ನೇರವಂತನೆಂದು ಸಾಬೀತುಪಡಿಸಲು ವೇದಿಕೆ ಯಾವುದಾದರೇನು?
ಜನತಂತ್ರ ವ್ಯವಸ್ಥೆಯಲ್ಲಿ ಸವಾಲು ಹಾಕುವುದು ವಿಪಕ್ಷಗಳ ಹಕ್ಕು. ಅದನ್ನು ಎದುರಿಸಿ ಸತ್ಯ ನಿರೂಪಿಸುವುದು ಸರ್ಕಾರದ ಜವಾಬ್ದಾರಿ. ಪ್ರಶ್ನೆಗಳಿಂದ ವಿಮುಖರಾಗುವುದು ದೇಶವಾಸಿಗಳಿಗೆ ಮಾಡುವ ದ್ರೋಹ. ಬರೀ ಅಬ್ಬರದ ಭಾಷಣಗಳಿಂದ, ವಿಪಕ್ಷಗಳನ್ನು ಆಧಾರವಿಲ್ಲದೆ ಟೀಕಿಸುವುದರಿಂದ, ಎದುರಾಳಿಗಳ ಮೇಲೆ ವೃಥಾ ಆರೋಪ ಹೊರಿಸುವುದರಿಂದ ದೇಶ ಮುನ್ನಡೆಯುವುದಿಲ್ಲ. ಬಿಜೆಪಿ ಈಗಲಾದರೂ ರಾಹುಲ್- ಖರ್ಗೆ ಸವಾಲನ್ನು ಒಪ್ಪಿಕೊಂಡು ತಕ್ಕ ಜವಾಬು ನೀಡುವ ಬದ್ಧತೆ ತೋರಲಿ. ಈ ಬಾರಿ ‘ದೂಧ್ ಕಾ ದೂಧ್, ಪಾನಿ ಕಾ ಪಾನಿ’ ಆಗಿಯೇಬಿಡಲಿ!




