ಚುನಾವಣೆಯ ಫಲಿತಾಂಶ ಹೊರಬೀಳುವವರೆಗೂ ಸುಮ್ಮನಿದ್ದ ಕೇಂದ್ರ ಸರ್ಕಾರವು ಕಳೆದ ಹತ್ತು ದಿನಗಳಲ್ಲಿ ಮೂರು ಬಾರಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಬಿಜೆಪಿ ಜನರ ಗಳಿಕೆಯನ್ನು ‘ಕಂತು-ಕಂತಾಗಿ’ ಲೂಟಿ ಮಾಡುತ್ತಿದೆ. ಬಿಜೆಪಿ ಹಸಿವು ಇನ್ನೂ ತಣಿದಿಲ್ಲ” ಎಂದು ಟೀಕಿಸಿದ್ದಾರೆ.
ಶನಿವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಕಳೆದ ಮಂಗಳವಾರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ 90 ಪೈಸೆ ಹೆಚ್ಚಿಸಿತ್ತು. ಅದಕ್ಕೂ ಹಿಂದೆ ಮೂರು ರೂಪಾಯಿ ಬೆಲೆ ಏರಿಸಲಾಗಿತ್ತು. ಅಂದರೆ ಕಳೆದ ಹತ್ತು ದಿನಗಳ ಅವಧಿಯಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94 ಪೈಸೆ ಏರಿಕೆಯಾಗಿದೆ, ಡೀಸೆಲ್ ಬೆಲೆ 98 ಪೈಸೆ ಏರಿಕೆಯಾಗಿದೆ. ಹೊಸ ದರದ ಅನ್ವಯ ಪೆಟ್ರೋಲ್ ಲೀಟರ್‌ಗೆ 107.12 ರೂಪಾಯಿ, ಡೀಸೆಲ್ ಬೆಲೆ 95.04 ರೂ.ಗಳಿಗೆ ಏರಿಕೆಯಾಗಿದೆ.
ಇದನ್ನು ಓದಿದ್ದೀರಾ? 10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ: ಬೆಂಗಳೂರಿನಲ್ಲಿ ಬೆಲೆ ಎಷ್ಟು?
ಹೀಗೆ ಪದೇ ಪದೇ ಇಂಧನ ಬೆಲೆ ಏರಿಸುತ್ತಿರುವ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಪೆಟ್ರೋಲ್ ಈಗ ₹100ರ ಗಡಿ ದಾಟಿದೆ. ಸಾರ್ವಜನಿಕರು ಕಷ್ಟಪಟ್ಟು ಸಂಪಾದಿಸಿದ ಆದಾಯದ ವ್ಯವಸ್ಥಿತ ಲೂಟಿ ಇದು! ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ದೈನಂದಿನ ₹1,000 ಕೋಟಿ ಕೇಂದ್ರ ತೆರಿಗೆ ವಿಧಿಸಿದ ನಂತರವೂ ಬಿಜೆಪಿಯ ಹಸಿವು ತಣಿದಿಲ್ಲ” ಎಂದು ದೂರಿದ್ದಾರೆ.
This video cannot be played in your browser. Open the video directly
“ಅಂತಾರಾಷ್ಟ್ರೀಯ ಬೆಲೆಗಳು ಕಡಿಮೆಯಾದಾಗ, ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ನೀಡಲ್ಲ. (ಬೆಲೆ ಇಳಿಕೆ ಮಾಡಲ್ಲ) ಆದರೆ ಈಗ ನಿರ್ದಯವಾಗಿ ಜನರನ್ನು ದೋಚುತ್ತಿದ್ದಾರೆ. ಬಿಕ್ಕಟ್ಟು ಎದುರಾದಾಗ, ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾದರು. ಚುನಾವಣೆಗಳು ಮುಗಿದ ನಂತರ, ‘ತ್ಯಾಗ’ ಸದ್ಗುಣಗಳ ಬೋಧನೆಗೆ ಇಳಿದರು. ಅದಾದ ಬಳಿಕ ಕೇವಲ 8 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮೂರು ಬಾರಿ ಹೆಚ್ಚಿಸಿದ್ದಾರೆ” ಎಂದು ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
“ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಇಂಧನ ಬೆಲೆಗಳು ಅತ್ಯಂತ ಕಡಿಮೆಯಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ನಂತರ ಮೋದಿ ಅವರು ನಮ್ಮಲ್ಲಿ ಎನೂ ತೊಂದರೆಯಿಲ್ಲ, ಎಲ್ಲವೂ ಇದೆ ಎಂದು ಪದೇ ಪದೇ ಹೇಳೀದರು. ಆದರೆ ಇತರ ರಾಷ್ಟ್ರಗಳು ತಮ್ಮ ನಾಗರಿಕರಿಗೆ ಪರಿಹಾರವನ್ನು ಒದಗಿಸುವಲ್ಲಿ ತೊಡಗಿತ್ತು” ಎಂದು ಹೇಳಿದ್ದಾರೆ.
“ಇಟಲಿ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ಜನರಿಗೆ ಸಹಾಯವಾಗಿದೆ. ಆಸ್ಟ್ರೇಲಿಯಾ ತನ್ನ ಅಬಕಾರಿ ಸುಂಕವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಅಲ್ಲಿ ಪೆಟ್ರೋಲ್ ಬೆಲೆಯಲ್ಲಿ ಸುಮಾರು ₹17ರಷ್ಟು ಇಳಿಕೆಯಾಗಿದೆ. ಜರ್ಮನಿ ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದೆ. ಇದರಿಂದಾಗಿ ಇಂಧನ ಬೆಲೆಗಳು ಲೀಟರ್‌ಗೆ ₹17–₹19 ರಷ್ಟು ಇಳಿಕೆಯಾಗಿದೆ. ಯುಕೆ ಮನೆಗಳಿಗೆ £100 ತೈಲ ಸಂಬಂಧಿತ ಆರ್ಥಿಕ ಸಹಾಯವನ್ನು ನೀಡಿದೆ. ಇಂಧನ ಮತ್ತು ವಿದ್ಯುತ್ ಎರಡರ ಮೇಲಿನ ತೆರಿಗೆಗಳನ್ನೂ ಕಡಿಮೆ ಮಾಡಿದೆ. ಐರ್ಲೆಂಡ್‌ನಲ್ಲಿ €250 ಮಿಲಿಯನ್ ಪರಿಹಾರ ಪ್ಯಾಕೇಜ್ ನೀಡಿರುವುದಕ್ಕೆ ಧನ್ಯವಾದಗಳು. ಇದರಿಂದಾಗಿ ಪೆಟ್ರೋಲ್ ಬೆಲೆಗಳು ಲೀಟರ್‌ಗೆ ಸುಮಾರು €0.15 ರಷ್ಟು ಮತ್ತು ಡೀಸೆಲ್ ಬೆಲೆಗಳು ಲೀಟರ್‌ಗೆ €0.20 ರಷ್ಟು ಇಳಿದಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
“ಆದರೆ ಪ್ರಧಾನಿ ನರೇಂದ್ರ ಮೋದಿ ಅವರೆ ದಯವಿಟ್ಟು ವಿವರಿಸಿ. ಈ ವ್ಯವಸ್ಥಿತ ಲೂಟಿಯ ಆದಾಯವು ನಿಜವಾಗಿಯೂ ಯಾರಿಗೆ ಹರಿಯುತ್ತಿದೆ? ನೀವು ಏಕೆ ರಾಜಿ ಮಾಡಿಕೊಂಡಂತೆ ಕಾಣುತ್ತೀರಿ? ಈ ಸರ್ಕಾರದೊಳಗಿನ ‘ನಾಯಕತ್ವ ಬಿಕ್ಕಟ್ಟು’ ತುಂಬಾ ನಿಜ. 140 ಕೋಟಿ ಭಾರತೀಯರಿಗೆ ಇದು ತಿಳಿದಿದೆ” ಎಂದು ಹೇಳಿದ್ದಾರೆ.





