ಶಿವಮೊಗ್ಗ ನಗರದ ವಾದಿ-ಹುದಾ ಸಮೀಪ 8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ, ಅರಣ್ಯ ಇಲಾಖೆ ಸಿಬ್ಬಂದಿ ರಶೀದ್ ಎಂಬಾತನ ಮನೆ ಮೇಲೆ ಸಾರ್ವಜನಿಕರು ದಾಳಿ ನಡೆಸಿದ ಘಟನೆ ಬುಧವಾರ ಮಧ್ಯರಾತ್ರಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು.
ಆರೋಪದ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ಜನರು ಗುಂಪುಗೂಡಿ ರಶೀದ್ ಮನೆಗೆ ಹಲ್ಲೆ ನಡೆಸಲು ಮುಂದಾದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮಾಹಿತಿ ತಿಳಿದ ತಕ್ಷಣ ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ನಂತರ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ರಶೀದ್‌ನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಬಾಲಕಿಯ ಹೇಳಿಕೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.





