ಚುನಾವಣಾ ಆಯೋಗದ SIR ವಿವಾದ ಹಾಗೂ INDIA ಮೈತ್ರಿಕೂಟದ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಗ್ಯಾನೇಶ್ ಕುಮಾರ್ ಅವರು Z-plus ಭದ್ರತಾ ವಲಯದಲ್ಲಿದ್ದಾರೆ. ಆದಾಗ್ಯೂ, ಇತ್ತೀಚಿನ ಗುಪ್ತಚರ ಮಾಹಿತಿಯ ಬೆದರಿಕೆಗಳು ಹಾಗೂ ನವದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಜಿಲ್ಲಾ ಪೊಲೀಸರಿಗೂ ಕೂಡ ಭದ್ರತಾ ಸಿಬ್ಬಂದಿಯ ನಿಯೋಜನೆಯನ್ನು ಹೆಚ್ಚಿಸಲು ಸೂಚಿಸಲಾಗಿದ್ದು, ನವದೆಹಲಿ ಜಿಲ್ಲೆಯಲ್ಲಿ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಎಲ್ಲಾ ಭದ್ರತಾ ಸಂಸ್ಥೆಗಳು ಪರಸ್ಪರ ನಿಕಟ ಸಮನ್ವಯದಿಂದ ಕೆಲಸ ಮಾಡುವಂತೆ ನಿರ್ದೇಶಿಸಲಾಗಿದೆ.
ಪ್ರಧಾನಮಂತ್ರಿ ಮತ್ತು ಅವರ ಕುಟುಂಬದವರಿಗೆ ನೀಡಲಾಗುವ ‘ಎಸ್‌ಪಿಜಿ’ ಭದ್ರತೆಯ ನಂತರದ ದೇಶದ ಎರಡನೇ ಅತ್ಯುನ್ನತ ಭದ್ರತಾ ವರ್ಗವಾಗಿರುವ ‘ಜೆಡ್-ಪ್ಲಸ್’ ಭದ್ರತೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳು ಪಾಳಿಯಲ್ಲಿ ಕಾರ್ಯನಿರ್ವಹಿಸುವುದಲ್ಲದೆ, ರಕ್ಷಿತ ವ್ಯಕ್ತಿಯ ನಿವಾಸ ಮತ್ತು ಬೆಂಗಾವಲು ವಾಹನಗಳಿಗೆ ವಿಶೇಷ ರಕ್ಷಣೆ ಇರುತ್ತದೆ. ಚುನಾವಣಾ ಆಯೋಗದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಪ್ರತಿಭಟನೆ ನಡೆಸುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಶನಿವಾರ ದೆಹಲಿಯಲ್ಲಿ ಸಿಜೆಪಿ 2ನೇ ಬೃಹತ್ ಪ್ರತಿಭಟನೆ
ಈ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಧಿಕ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಅಕ್ಟೋಬರ್ 8ರಿಂದ 12ರವರೆಗೆ ದೆಹಲಿ ಪೊಲೀಸರ ಸಹಾಯಕ್ಕಾಗಿ ಗೃಹ ಸಚಿವಾಲಯವು 221 ಕೇಂದ್ರ ಅರೆಸೇನಾಪಡೆಗಳ ಕಂಪನಿಗಳನ್ನು ಅಂದರೆ ಸುಮಾರು 23,000 ಸಿಬ್ಬಂದಿಯನ್ನು ಒದಗಿಸಿದೆ. ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಹಾಗೂ ಛತ್ತೀಸ್‌ಗಢದಿಂದ ಸಿಆರ್‌ಪಿಎಫ್ ಕಂಪನಿಗಳನ್ನು ದೆಹಲಿಗೆ ಕರೆತರಲಾಗುತ್ತಿದ್ದು, ಈ ಹೆಚ್ಚುವರಿ ಭದ್ರತಾ ಪಡೆಗಳು ದೆಹಲಿ ಪೊಲೀಸರಿಗೆ ಪ್ರತಿಭಟನೆಗಳನ್ನು ನಿರ್ವಹಿಸಲು, ಪ್ರಮುಖ ಸರ್ಕಾರಿ ಕಟ್ಟಡಗಳನ್ನು ರಕ್ಷಿಸಲು ಮತ್ತು ಕೇಂದ್ರ ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನೆರವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ಖಾತರಿಪಡಿಸುವ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆ. ಸಂವಿಧಾನದ 324ನೇ ವಿಧಿಯಡಿ ಸಂಪೂರ್ಣ ಸ್ವಾಯತ್ತತೆಯೊಂದಿಗೆ ಕಾರ್ಯನಿರ್ವಹಿಸಲು ರೂಪಿಸಲಾದ ಈ ಆಯೋಗದ ಮುಖ್ಯಸ್ಥರ ಮೇಲೆ ಇಂದು ಅಂತಹ ತೀವ್ರ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಗಂಭೀರ ಬೆಳವಣಿಗೆ. ಜತೆಗೆ ಕೇಂದ್ರ ಸರ್ಕಾರದ ಈ ಕ್ರಮ, ವಿರೋಧ ಪಕ್ಷಗಳ ಹಾಗೂ ಯುವಜನತೆಯ ಆಕ್ರೋಶಕ್ಕೆ ಸಣ್ಣಗೆ ನಡುಗುತ್ತಿದೆ ಎಂಬುದನ್ನು ತೋರಿಸುತ್ತದೆ, ಹಾಗಾಗಿಯೇ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಸಾರ್ವಜನಿಕ ಟೀಕೆಗೂ ಗುರಿಯಾಗುತ್ತಿದೆ.




