ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು ಎಸ್ಎಫ್‌ಐ (SFI) ಸಂಘಟನೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆಯು, ಶುಲ್ಕ ಕಡಿಮೆ ಇರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಪ್ರವೇಶ ಮಾಡುವರು. ಆದರೆ ಸರಕಾರ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳಿಗೆ ಅನುದಾನ ನೀಡದೇ ಶಿಕ್ಷಕರು ದಿನನಿತ್ಯದ ನಿರ್ವಹಣಾ ವೆಚ್ಚವನ್ನು ಭರಿಸಲು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಶಾಲಾ ನಿರ್ವಹಣೆಗೆ ಶುಲ್ಕವೆಂದು ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿರುವ ಕುರಿತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳ ನಿರ್ವಹಣಾ ವೆಚ್ಚವನ್ನು ಭರಿಸಲು ಅನುದಾನದ ಕೊರತೆ ಎದುರಾಗಿದ್ದು, ಶಾಲೆಯ ಶಿಕ್ಷಕರು ನಿತ್ಯದ ಖರ್ಚು ವೆಚ್ಚಗಳನ್ನು ಸರಿದೂಗಿಸಲು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಕೆಲವು ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ 200ರಿಂದ 600ರೂ ಗಳವರೆಗೆ ಹಣ ವಸೂಲಿಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಶಾಲೆಗಳಲ್ಲಿ ಪರೀಕ್ಷೆಗೆ ಹಾಗೂ ನಿರ್ವಹಣಾ ವೆಚ್ಚಕ್ಕೆ ವಿದ್ಯಾರ್ಥಿಗಳು ಪಾಲಕರಿಂದ ಹಣವನ್ನು ಪಡೆದುಕೊಂಡು ಶಿಕ್ಷಕರಿಗೆ ತಂದು ಕೊಡುತ್ತಿದ್ದಾರೆ. ಈ ವಸೂಲಿಯನ್ನು ಗಮನಿಸಿದ ಎಸ್ಎಫ್ಐ ಸಂಘಟನೆಗಳು ಹಾವೇರಿ ಪಟ್ಟಣದ ಅಶ್ವಿನಿ ನಗರದಲ್ಲಿ ಇರುವ ಸರಕಾರಿ ಉರ್ದು ಶಾಲೆಯಲ್ಲಿ ವೈಭವ ಲಕ್ಷ್ಮೀ ಪಾರ್ಕ್ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಪ್ರವೇಶ ಶುಲ್ಕ ನೆಪ ಹೇಳಿ ಹಣ ವಸೂಲಿ ಮಾಡುತ್ತಿರುವುದ ಖಂಡಿಸಿ ಶಾಲೆ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ.

ಕೆಲವು ಶಾಲೆಗಳಲ್ಲಿ ಶಾಲೆಯ ನಿರ್ವಹಣಾ ವೆಚ್ಚವನ್ನು ಶಿಕ್ಷಕರು ಸಂಬಳದಲ್ಲಿಯೇ ಎತ್ತಿಟ್ಟು ಖರ್ಚುವೆಚ್ಚಗಳನ್ನು ನಿಭಾಯಿಸುವರು. ಇನ್ನೂ ಕೆಲ ಶಿಕ್ಷಕರು ಶಾಲಾ ನಿರ್ವಹಣೆ ಭರಿಸಲು ಅಂಗಡಿಗಳಲ್ಲಿ ಸಾಲ ಮಾಡುತ್ತಿದ್ದು, ಉದ್ರಿ ರೂಪದಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಸ್ತುಗಳನ್ನು ತೆಗೆದುಕೊಂಡು ಬರುವಂತಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಸರಕಾರಿ ಶಾಲೆಗಳ ಶಿಕ್ಷಕರು ಶಾಲಾ ನಿರ್ವಹಣಾ ವೆಚ್ಚ, ಪರೀಕ್ಷಾ ಶುಲ್ಕ ವೆಚ್ಚವೆಂದು ಹೇಳಿ ವಿದ್ಯಾರ್ಥಿಗಳಿಂದ ಹಣ ಪಡೆದು ನಿರ್ವಹಣೆ ಮಾಡುವಂತಹ ಪರಿಸ್ಥಿತಿ ಶಿಕ್ಷಕರಿಗೆ ಎದುರಾಗಿದೆ.
ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಅನುಗುಣವಾಗಿ ಸರಕಾರ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಹತ್ತು ಸಾವಿರದಿಂದ ಎರಡು ಲಕ್ಷದ ವರೆಗೂ ನಿರ್ವಹಣಾ ವೆಚ್ಚದ ಅನುದಾನ ನೀಡಲಾಗುತ್ತಿದೆ. ಆದರೆ ಪ್ರಸಕ್ತ ವರ್ಷದಲ್ಲಿ ನಿರ್ವಹಣಾ ವೆಚ್ಚದ ಅನುದಾನ ನೀಡದೇ ಇರುವುದರಿಂದ ಶಿಕ್ಷಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಶಾಲೆಗಳಲ್ಲಿ ನಿರ್ವಹಣಾ ವೆಚ್ಚಕ್ಕೆ ಅನುದಾನವನ್ನು ಸರ್ಕಾರ ನೀಡದೆ ಇರುವುದರಿಂದ ಶಿಕ್ಷಕರು ಶಾಲೆಯ ದಿನನಿತ್ಯದ ಖರ್ಚುವೆಚ್ಚಗಳನ್ನು ತಮ್ಮ ಸಂಬಳದಲ್ಲಿಯೇ ಎತ್ತಿಡುತ್ತಿದ್ದಾರೆ. ಕೆಲವರು ಸಾಲದ ರೂಪದಲ್ಲಿ ಆಥವಾ ವಿದ್ಯಾರ್ಥಿಗಳ ನಿರ್ವಹಣಾ ವೆಚ್ಚದ ಶುಲ್ಕವೆಂದೋ ಹೇಳುತ್ತಾ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ನಿರ್ವಹಣೆ ಮಾಡುವಂತ ಪರಿಸ್ಥಿತಿ ಎದುರಾಗಿದೆ.
ಈದಿನ.ಕಾಮ್ ಜೊತೆಗೆ ಸರಕಾರಿ ಶಾಲೆಯೊಂದರ ಮುಖ್ಯೋಪಾಧ್ಯರು ಮಾತನಾಡಿ, “ಎರಡು ನೂರಕ್ಕೂ ಹೆಚ್ಚಿರುವ ನಮ್ಮ ಶಾಲೆಯಲ್ಲಿ ಶಾಲೆಯ ನಿರ್ವಹಣಾ ವೆಚ್ಚವನ್ನು ಭರಿಸಲು ಶಿಕ್ಷಕರ ಸಂಬಳದಲ್ಲಿಯೇ ಸ್ವಲ್ಪ ಹಣವನ್ನು ಇರಿಸಿಕೊಂಡು, ನಿಭಾಯಿಸುತ್ತಿದ್ದೇವು. ಒಮ್ಮೊಮ್ಮೆ ಸ್ವಂತ ಹಣ ಹಾಕುತ್ತಿದ್ದೆ. ನಿರಂತರ ಸ್ವಂತ ಖರ್ಚು ಮಾಡಲು ಆಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ, ಶಾಲೆಗೆ ಬೇಕಾಗುವ ಅವಶ್ಯ ಸಲಕರಣಗಳನ್ನು,ಅಡುಗೆ ಮಾಡಲು ತರಕಾರಿಗಳನ್ನು ತರಲು ಹೋದಾಗ ಉದ್ರಿ ಹೇಳಿ ತೆಗೆದುಕೊಂಡು ಬರುವಂತಾಗಿದೆ” ಎಂದು ಹೇಳಿದರು.
ಈ ಕುರಿತು ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್ ನಗವತ್ ಮಾತನಾಡಿ, “ನಮ್ಮ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ವಿವಿಧ ಶುಲ್ಕಗಳ ನೆಪ ಹೇಳಿ ವಿದ್ಯಾರ್ಥಿಗಳ ಕಡೆಯಿಂದ ಹಣ ವಸೂಲಿ ಮಾಡುತ್ತಿರುವುದು ಖಂಡನೀಯ. ಈ ಕುರಿತು ಡಿ.ಡಿ.ಪಿ.ಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇದನ್ನು ಪರೀಶಿಲಿಸಬೇಕು. ಶಾಲೆಗಳ ನಿರ್ವಹಣಾ ವೆಚ್ಚಕ್ಕಾಗಿ ಸರಕಾರ ಅನುದಾನ ಬಿಡುಗಡೆ ಮಾಡಬೇಕು. ಆಗ ಶಾಲೆಗಳ ಶಿಕ್ಷಕರು ಶಾಲಾ ನಿರ್ವಹಣೆಗೆಂದು ವಿದ್ಯಾರ್ಥಿಗಳಿಂದ ಹಣ ಪಡೆಯುವುದು, ಉದ್ರಿ ಹೇಳುವುದು ತಪ್ಪುತ್ತದೆ” ಎಂದು ಹೇಳಿದರು.
ಸರಕಾರಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳಲ್ಲಿ ನಿರ್ವಹಣಾ ವೆಚ್ಚ ಪರಿಸಲು ಶಿಕ್ಷಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರ ಸರಕಾರಿ ಶಾಲೆಗಳ ನಿರ್ವಹಣಾ ವೆಚ್ಚಕ್ಕಾಗಿ ಅನುದಾನ ಬಿಡುಗಡೆ ಮಾಡಿದರೆ ಶಿಕ್ಷಕರು ಶಾಲೆಗಳ ನಿರ್ವಹಣೆಗೆ ಸರಾಗವಾಗಿ ಮಾಡಲು ಅನುಕೂಲವಾಗಲಿದ್ದು, ವಿದ್ಯಾರ್ಥಿಗಳಿಗೂ ಒಳ್ಳೆಯ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



