೨೦27ರಲ್ಲಿ ನಡೆಯಲಿರುವ ರಾಷ್ಟ್ರೀಯ ಜನಗಣತಿಗಾಗಿ ಕೇಂದ್ರ ಸರ್ಕಾರವು ಒಟ್ಟು 40 ಪ್ರಶ್ನೆಗಳ ಪಟ್ಟಿಯನ್ನು ಅಧಿಸೂಚಿಸಿದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇದೇ ಮೊದಲ ಬಾರಿಗೆ ಜಾತಿಗೆ ಸಂಬಂಧಿಸಿದ ಪ್ರಶ್ನೆಯನ್ನೂ ಸೇರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ, ನಾಗರಿಕರ ಜಾತಿ ವಿವರಗಳನ್ನು ದಾಖಲಿಸಿಕೊಳ್ಳಲು ಗಣತಿಯಲ್ಲಿ ಅವಕಾಶ ನೀಡಲಾಗಿದೆ. 1931ರಲ್ಲಿ ಬ್ರಿಟಿಷರ ಆಡಳಿತಾವಧಿಯಲ್ಲಿ ಕೊನೆಯ ಬಾರಿಗೆ ದೇಶಾದ್ಯಂತ ಪೂರ್ಣ ಪ್ರಮಾಣದ ಜಾತಿ ಗಣತಿ ನಡೆದಿತ್ತು.
ಜನಗಣತಿಯ ಪ್ರಶ್ನಾವಳಿಯ 10ನೇ ಪ್ರಶ್ನೆಯು ‘ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಜಾತಿ’ ಎಂಬ ಕಾಲಂಅನ್ನು ಒಳಗೊಂಡಿದೆ. ಗಣತಿದಾರರ ಬಳಿ ಯಾವುದೇ ನಿರ್ದಿಷ್ಟ ಜಾತಿಗಳ ಪಟ್ಟಿ ಇರುವುದಿಲ್ಲ; ಬದಲಾಗಿ ಸಾರ್ವಜನಿಕರು ನೀಡುವ ಉತ್ತರವನ್ನು ನೇರವಾಗಿ ನಮೂದಿಸಿಕೊಳ್ಳಲಾಗುತ್ತದೆ. 2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ ಮಾದರಿಯಲ್ಲೇ ಈ ಪ್ರಕ್ರಿಯೆ ನಡೆಯಲಿದೆ.
ಆದರೆ, ಯಾವುದೇ ನಿರ್ದಿಷ್ಟ ವರ್ಗೀಕರಣ ಇಲ್ಲದ ಕಾರಣ 2011ರಂತೆಯೇ ಜಾತಿ ಉಪ-ಹೆಸರುಗಳು ದಾಖಲಾತಿ ದತ್ತಾಂಶ ಬಳಕೆಗೆ ತೊಡಕಾಗಬಹುದು ಎಂಬ ಕಳವಳವೂ ವ್ಯಕ್ತವಾಗಿದೆ.
2011ರ ಜನಗಣತಿಯಲ್ಲಿ 29 ಪ್ರಶ್ನೆಗಳಿದ್ದವು. ಈ ಬಾರಿ ಅವುಗಳ ಸಂಖ್ಯೆಯನ್ನು 40ಕ್ಕೆ ಏರಿಸಲಾಗಿದೆ. ಹಲವು ಆಧುನಿಕ ಮತ್ತು ವೈಯಕ್ತಿಕ ವಿವರಗಳನ್ನು ಸೇರಿಸಲಾಗಿದೆ. ಹೊಸ ಪ್ರಶ್ನಾವಳಿಯಲ್ಲಿ ಕೋವಿಡ್-19 ಲಸಿಕೆ ಪಡೆದ ಸ್ಥಳ, ಬ್ಯಾಂಕ್ ಖಾತೆಗಳ ವಿವರ, ಡಿಜಿಟಲ್ ಸಾಕ್ಷರತೆಯ ಮಟ್ಟ, ಮೊಬೈಲ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ, ಪಾಸ್‌ಪೋರ್ಟ್ ಹಾಗೂ ಚಾಲನಾ ಪರವಾನಗಿ ವಿವರಗಳನ್ನು ಸಂಗ್ರಹಿಸಲಾಗುತ್ತದೆ.
ಇದರ ಜೊತೆಗೆ; ತಂದೆ ಮತ್ತು ತಾಯಿಯ ಪ್ರತ್ಯೇಕ ವಿವರಗಳು, ಮಾತೃಭಾಷೆಯ ಹೊರತಾಗಿ ತಿಳಿದಿರುವ ಇತರ ಭಾಷೆಗಳು, ಶೈಕ್ಷಣಿಕ ವಿಭಾಗ, ಕಳೆದೆರಡು ವರ್ಷಗಳಲ್ಲಿ ಕೈಗೊಂಡ ಕೆಲಸ, ಆರ್ಥಿಕ ಚಟುವಟಿಕೆಯ ಸ್ವರೂಪ, ಕೆಲಸದ ಸ್ಥಳಕ್ಕೆ ತಲುಪುವ ಸಾರಿಗೆ ವಿಧಾನ, ವಲಸೆಗೆ ಕಾರಣಗಳನ್ನೂ ಸಹ ಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ.
ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಹಿಮಾವೃತ ಪ್ರದೇಶಗಳಲ್ಲಿ ಇದೇ ವರ್ಷದ (2026) ಸೆಪ್ಟೆಂಬರ್ 1 ರಿಂದ 30 ರವರೆಗೆ ಎಣಿಕೆ ಕಾರ್ಯ ನಡೆಯಲಿದ್ದು, ಆನ್‌ಲೈನ್ ಮೂಲಕ ಸ್ವಯಂ-ಮಾಹಿತಿ ದಾಖಲಿಸುವ ಪ್ರಕ್ರಿಯೆಗೆ ಆಗಸ್ಟ್ 17 ರಿಂದ ಅವಕಾಶ ಕಲ್ಪಿಸಲಾಗಿದೆ. ದೇಶದ ಉಳಿದ ಭಾಗಗಳಲ್ಲಿ 2027ರ ಫೆಬ್ರವರಿಯಲ್ಲಿ ಜನಗಣತಿ ಪ್ರಕ್ರಿಯೆ ನಡೆಯಲಿದೆ.
ಕೇಂದ್ರ ಸರ್ಕಾರದ ಈ ಕ್ರಮದ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ಪ್ರತಿಕ್ರಿಯಿಸಿದ್ದು, “ಬಿಹಾರ ಮತ್ತು ತೆಲಂಗಾಣದಲ್ಲಿ ನಡೆದ ಜಾತಿ ಸಮೀಕ್ಷೆಗಳಂತೆ ಇಲ್ಲೂ ಸಹ ರಾಜ್ಯವಾರು ಮುಂಚಿತವಾಗಿಯೇ ಸಿದ್ಧಪಡಿಸಿದ ಪಟ್ಟಿಯನ್ನು ಆಧರಿಸಿ, ಗಣತಿ ಪತ್ರಿಕೆಯಲ್ಲಿ ಸೂಕ್ತವಾದ ಉತ್ತರವನ್ನು ಆಯ್ಕೆ ಮಾಡಿ ಗುರುತು (ಟಿಕ್) ಹಾಕುವ ರೀತಿಯಲ್ಲಿ ಜಾತಿ ಕುರಿತ ಪ್ರಶ್ನೆಯನ್ನು ಕೇಳಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ದುರದೃಷ್ಟವಶಾತ್, ಹಾಗೆ ಮಾಡಲಾಗಿಲ್ಲ. ಇದು ಸರ್ಕಾರದ ಉದ್ದೇಶದ ಮೇಲೆಯೇ ತೀವ್ರ ಅನುಮಾನಗಳನ್ನು ಹುಟ್ಟುಹಾಕಿದೆ,” ಎಂದು ಹೇಳಿದ್ದಾರೆ.



