ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ ದಾಳಿ ನಡೆಸಿದ್ದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ, 21 ವರ್ಷದ ಹೇಮಂತ್ ಅಲಿಯಾಸ್ ದಮ್ಮು ಎಂಬ ಆರೋಪಿಯು ಮರ ಕತ್ತರಿಸುವ ಚೈನ್ ಸಾ ಯಂತ್ರದೊಂದಿಗೆ ಶಾಲಾ ಆವರಣಕ್ಕೆ ನುಗ್ಗಿ, 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಭೀಕರವಾಗಿ ದಾಳಿ ನಡೆಸಿದ್ದ. ಈ ವೇಳೆ ಆಕೆಯನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿದ್ದವು. ದಾಳಿಯಿಂದ ತೀವ್ರವಾಗಿ ಗಾಯಗೊಂಡ ಬಾಲಕಿಗೆ ಭುಜದ ಭಾಗದಲ್ಲಿ ಆಳವಾದ ಗಾಯವಾಗಿ ಮೂಳೆ ಕಾಣಿಸುವಂತಾಗಿತ್ತು. ಅಲ್ಲದೆ ಮುಖಕ್ಕೂ ತೀವ್ರ ಗಾಯಗಳಾಗಿದ್ದವು.
ಆಕೆಯನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಧ್ರಪ್ರದೇಶದ ಶಿಕ್ಷಣ ಮತ್ತು ಐಟಿ ಸಚಿವ ನಾರಾ ಲೋಕೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದು, ಬಾಲಕಿಯ ಆರೋಗ್ಯ ಸ್ಥಿತಿ ಇನ್ನು 48 ಗಂಟೆಗಳ ಕಾಲ ಅತ್ಯಂತ ನಿರ್ಣಾಯಕವಾಗಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ಸಂಪೂರ್ಣ ನೆರವು ಹಾಗೂ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿರುವ ಸಚಿವರು, ಶಾಲೆಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವುದಾಗಿ ಹಾಗೂ ಮಹಿಳಾ ಕಿರುಕುಳ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಮತ್ತೊಂದೆಡೆ, ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿ ಹೇಮಂತ್‌ನನ್ನು ವಿಶೇಷ ಪೊಲೀಸ್ ತಂಡವು ಭಾನುವಾರ ಸಂಜೆ ಆತ್ಮಕೂರು ಅರಣ್ಯ ಪ್ರದೇಶದಲ್ಲಿ ಬಂಧಿಸಿತ್ತು. ಭಾನುವಾರ ರಾತ್ರಿ ಕೃತ್ಯ ನಡೆದ ಸ್ಥಳದ ಮಹಜರು ಹಾಗೂ ಮರುಸೃಷ್ಟಿಗಾಗಿ ಆತನನ್ನು ಕರೆದೊಯ್ಯುತ್ತಿದ್ದಾಗ, ಆರೋಪಿಯು ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ್ದು, ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಯನ್ನು ನಿಯಂತ್ರಿಸಲು ಮತ್ತು ತಪ್ಪಿಸಿಕೊಳ್ಳುವುದನ್ನು ತಡೆಯಲು ಪೊಲೀಸರು ಆತ್ಮರಕ್ಷಣೆಗಾಗಿ ಆರು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಆರೋಪಿ ಹೇಮಂತ್‌ನನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿಯೂ ಪ್ರಸ್ತುತ ಗಂಭೀರವಾಗಿದೆ ಎಂದು ಅನಂತಪುರ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



