ನೀಟ್ ಪರೀಕ್ಷಾ ವ್ಯವಸ್ಥೆಯ ವೈಫಲ್ಯದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಧರಣಿಯು ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಧರಣಿನಿರತರಿಗೆ ಸ್ವಯಂಪ್ರೇರಿತವಾಗಿ ಆಹಾರ ನೀಡುತ್ತಿರುವವರ, ಪ್ರತಿಭಟನೆಯಲ್ಲಿ ಭಾಗವಹಿಸುವವರ ಬಳಿ ದೆಹಲಿ ಪೊಲೀಸರು ಆಧಾರ್ ಕಾರ್ಡ್ ವಿವರ, ವಿಳಾಸ ಕೇಳಿ ಬೆದರಿಸುತ್ತಿದ್ದಾರೆ.
ದೆಹಲಿ ಪೊಲೀಸರು ಶನಿವಾರ ಸಂಜೆ 5 ಗಂಟೆಯ ನಂತರ ಪ್ರತಿಭಟನೆಗೆ ಇದ್ದ ಅನುಮತಿಯನ್ನು ನಿರಾಕರಿಸಿದರೂ, ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ನೂರಾರು ಯುವಕರು ಜಂತರ್ ಮಂತರ್‌ನಲ್ಲಿಯೇ ರಾತ್ರಿಯಿಡೀ ಕುಳಿತು ಧರಣಿ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ‘ಕಾಕ್ರೋಚ್ ಪಾರ್ಟಿ’ ಬೃಹತ್ ಪ್ರತಿಭಟನೆ
ಈ ಧರಣಿಗೆ ಬೆಂಬಲ ಸೂಚಿಸಿ ಹಲವಾರು ಮಂದಿ ಸ್ವಯಂಪ್ರೇರಿತವಾಗಿ ಕುಡಿಯುವ ನೀರು, ಹಣ್ಣು, ಊಟ ನೀಡುತ್ತಿದ್ದಾರೆ. ಆದರೆ ಈ ರೀತಿ ಆಹಾರ ನೀಡುವವರ ಬಳಿ ಆಧಾರ್ ಕಾರ್ಡ್ ಕೇಳಿ ಪೊಲೀಸರು ಬೆದರಿಸುತ್ತಿದ್ದಾರೆ.
ಈ ಬಗ್ಗೆ ಅಭಿಜೀತ್ ದೀಪ್ಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಪ್ರತಿಭಟನಾ ಸ್ಥಳದಲ್ಲಿ ನೀರು ಮತ್ತು ಬಾಳೆಹಣ್ಣುಗಳನ್ನು ತಂದು ನೀಡುವ ಜನರ ಆಧಾರ್ ಕಾರ್ಡ್ ವಿವರಗಳು ಮತ್ತು ವಿಳಾಸವನ್ನು ದೆಹಲಿ ಪೊಲೀಸರು ಕೇಳುತ್ತಿದ್ದಾರೆ. ಈ ಸರ್ಕಾರ ದೆಹಲಿ ಪೊಲೀಸರನ್ನು ಯಾವ ಕೀಳು ಮಟ್ಟಕ್ಕೆ ಇಳಿಸಿದೆ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“ಪ್ರತಿಭಟನೆಯಲ್ಲಿ ಭಾಗವಹಿಸಲು ಬಯಸುವ ಜನರ ಆಧಾರ್ ಕಾರ್ಡ್‌ಗಳು ದೆಹಲಿ ಪೊಲೀಸರಿಗೆ ಯಾಕೆ ಬೇಕು? ಪ್ರತಿಭಟನೆಯಲ್ಲಿ ಭಾಗವಹಿಸಲು ಆಧಾರ್ ಕಾರ್ಡ್ ಯಾವಾಗಿನಿಂದ ಕಡ್ಡಾಯವಾಯಿತು? ಬಿಜೆಪಿಯ ರಾಜಕೀಯ ರ್ಯಾಲಿಗಳಲ್ಲಿಯೂ ಅವರು ಆಧಾರ್ ಕಾರ್ಡ್‌ಗಳನ್ನು ಕೇಳುತ್ತಾರೆಯೇ” ಎಂದು ದೀಪ್ಕೆ ಪ್ರಶ್ನಿಸಿದ್ದಾರೆ. ಹಾಗೆಯೇ ಜಂತರ್ ಮಂತರ್ ಪ್ರತಿಭಟನೆಯಿಂದ ಜನರನ್ನು ದೂರವಿಡಲು ಪೊಲೀಸರು ಆಧಾರ್ ಕಾರ್ಡ್ ಅನ್ನು ನೆಪವಾಗಿ ಬಳಸುತ್ತಿದ್ದಾರೆ” ಎಂದು ದೂರಿದ್ದಾರೆ. ಈ ಸಂಬಂಧ ಪೊಲೀಸರನ್ನೂ ನೇರವಾಗಿ ಪ್ರಶ್ನಿಸಿದ್ದಾರೆ.
ಇನ್ನು ಪ್ರತಿಭಟನಾ ಸ್ಥಳದಲ್ಲಿನ ನೀರು ಸರಬರಾಜು ಸ್ಥಗಿತಗೊಳಿಸಿರುವುದರ ವಿರುದ್ಧ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಧ್ವನಿ ಎತ್ತಿದ್ದಾರೆ. ಶನಿವಾರ ರಾತ್ರಿ ಪ್ರತಿಭಟನಾನಿರತ ಯುವಕರಿಗೆ ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಬಳಿಕ ವಿದ್ಯುತ್ ಹಾಗೂ ನೀರಿನ ಸೌಕರ್ಯವನ್ನು ಮರುಸ್ಥಾಪಿಸಲಾಗಿದೆ. ಆದರೆ ಶೌಚಾಲಯಕ್ಕೆ ನೀರು ಪೂರೈಕೆ ಮಾಡಲಾಗಿಲ್ಲ.
ಶೌಚಾಲಯಗಳಿಗೆ ತಕ್ಷಣವೇ ನೀರು ಪೂರೈಕೆ ಮಾಡುವಂತೆ ದೀಪ್ಕೆ ಮನವಿ ಮಾಡಿದ್ದಾರೆ. ಧರಣಿ ನಿರತರ ಕನಿಷ್ಠ ಮಾನವೀಯ ಅಗತ್ಯಗಳನ್ನು ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಇನ್ನು ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ದೆಹಲಿ ಪೊಲೀಸ್ ಮತ್ತು ಕ್ಷಿಪ್ರ ಕಾರ್ಯ ಪಡೆ (RAF) ಯೋಧರನ್ನು ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಹಾಕಿ ಭದ್ರತೆಯನ್ನು ಬಲಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ವಿವಿಧ ರೈತ ಸಂಘಟನೆಗಳು ಕೂಡ ಈ ವಿದ್ಯಾರ್ಥಿ ಪರ ಹೋರಾಟಕ್ಕೆ ಕೈಜೋಡಿಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.




