ಬೆಲೆ ಏರಿಕೆ, ದುಬಾರಿ ಜೀವನ, ಕುಸಿಯುತ್ತಿರುವ ಖರೀದಿ ಸಾಮರ್ಥ್ಯ ಹಾಗೂ ಆರ್ಥಿಕ ಅನಿಶ್ಚಿತತೆ—ಇವು ಇತ್ತೀಚೆಗೆ ನಡೆದ ಅಮೆರಿಕದ ಮಧ್ಯಂತರ ಚುನಾವಣಾ ವಿಷಯಗಳಾಗಿದ್ದವು. ಇದು ರಾಷ್ಟ್ರೀಯತೆಯ ಆವೇಶ, ಬಲಿಷ್ಠ ನಾಯಕತ್ವವೆಂಬ ಪ್ರಚಾರ ಹಾಗೂ ರಾಜಕೀಯ ಧ್ರುವೀಕರಣಗಳ ಅಬ್ಬರಗಳ ನಡುವೆಯೂ ಜನರ ಹೊಟ್ಟೆಪಾಡಿನ ಪ್ರಶ್ನೆಗಳೇ ಚುನಾವಣೆಯ ದಿಕ್ಕನ್ನು ನಿರ್ಧರಿಸುತ್ತವೆ ಎಂಬುದನ್ನು ಒತ್ತಿ ಹೇಳಿದೆ!
2026ರ ನವೆಂಬರ್ 3ರಂದು ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಡೆಮಾಕ್ರಟಿಕ್ ಪಕ್ಷವು ಅಮೆರಿಕದ ಸಂಸತ್ತಿನ ಎರಡೂ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ನ ನಿಯಂತ್ರಣವನ್ನು ತನ್ನದಾಗಿಸಿಕೊಂಡಿದೆ. ಇದು ಅಮೆರಿಕದ ರಾಜಕೀಯದಲ್ಲಿ ನಿರ್ಣಾಯಕ ಅಧಿಕಾರ ಬದಲಾವಣೆಯೂ ಆಗಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರಿಗೆ ದೊರೆತಿದ್ದ ಅಪಾರ ಜನಬೆಂಬಲ, ಕೇವಲ ಎರಡು ವರ್ಷಗಳ ಅಂತರದಲ್ಲಿ ತೀವ್ರವಾಗಿ ಕುಸಿದಿದೆ ಎಂಬುದನ್ನೂ ಸ್ಪಷ್ಟಪಡಿಸಿದೆ.
ಈ ಚುನಾವಣೆಯಲ್ಲಿ ಹಣದುಬ್ಬರ, ಜೀವನ ವೆಚ್ಚ, ವಿದೇಶಾಂಗ ಬಿಕ್ಕಟ್ಟುಗಳು ಹಾಗೂ ಸರ್ಕಾರದ ಕಾರ್ಯನಿರ್ವಹಣೆ ಪ್ರಮುಖ ಚರ್ಚಾ ವಿಷಯಗಳಾಗಿದ್ದವು. ಅದರಲ್ಲೂ ವಿಶೇಷವಾಗಿ ಆಹಾರ ಪದಾರ್ಥಗಳು, ಇಂಧನ, ಮನೆಬಾಡಿಗೆ, ಆರೋಗ್ಯ ಸೇವೆಗಳು ಹಾಗೂ ಕುಟುಂಬಗಳ ಖರೀದಿ ಸಾಮರ್ಥ್ಯದ ಕುರಿತಾದ ಸಾರ್ವಜನಿಕ ಆಕ್ರೋಶವೇ ಮತದಾರರ ನಿರ್ಧಾರದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಅಮೆರಿಕದಲ್ಲಿ ನಡೆಸಲಾದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, 90%ರಷ್ಟು ಮತದಾರರು ‘ಜೀವನ ವೆಚ್ಚ’ ತಮ್ಮ ಮತದಾನದ ಆದ್ಯತೆಯ ಅಂಶವೆಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಸುಮಾರು 75% ಮಂದಿ ಈಗಿರುವ ದುಬಾರಿ ಬೆಲೆಗಳಿಗೆ ಟ್ರಂಪ್ ಆಡಳಿತದ ನೀತಿಗಳೇ ನೇರ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.
ಇದು, ದೇಶದ ಒಟ್ಟು ಆರ್ಥಿಕತೆ ಬೆಳೆಯುತ್ತಿದೆ ಎಂದು ಸರ್ಕಾರ ಪ್ರಚಾರ ಮಾಡಬಹುದು, ಷೇರು ಮಾರುಕಟ್ಟೆ ಗಗನಕ್ಕೇರಬಹುದು, ಕಾರ್ಪೊರೇಟ್ ದೈತ್ಯರ ಲಾಭ ದುಪ್ಪಟ್ಟಾಗಬಹುದು. ಆದರೆ, ದೇಶದ ಸಾಮಾನ್ಯ ಕುಟುಂಬವೊಂದು ತನ್ನ ಗಳಿಕೆಯಲ್ಲಿ ಆಹಾರ, ವಸತಿ, ಶಿಕ್ಷಣ, ಆರೋಗ್ಯ ಹಾಗೂ ಸಾರಿಗೆಯ ಕನಿಷ್ಠ ವೆಚ್ಚವನ್ನು ಭರಿಸಲು ಹೆಣಗಾಡುತ್ತಿದ್ದರೆ, ಆ ಆರ್ಥಿಕ ಅಭಿವೃದ್ಧಿಯ ಪ್ರಚುರವು ಮತದಾರರನ್ನು ಸೆಳೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಆಡಳಿತವು ಆರ್ಥಿಕತೆಯನ್ನು ಹಳಿಗೆ ತರುವ ಮತ್ತು ಹಣದುಬ್ಬರವನ್ನು ನಿಯಂತ್ರಿಸುವ ಭಾರೀ ಭರವಸೆಗಳನ್ನು ನೀಡಿತ್ತು. ಆದರೆ, ವಾಸ್ತವದಲ್ಲಿ ಅನೇಕ ಕುಟುಂಬಗಳು ದಿನನಿತ್ಯದ ಖರ್ಚುಗಳನ್ನು ಸರಿದೂಗಿಸಲು ಪರದಾಡುತ್ತಿದ್ದವು. ಇಂಧನ ಬೆಲೆ ಏರಿಕೆ ಮತ್ತು ಆಮದು ಸುಂಕದ ನೀತಿಗಳು ಸಾಮಾನ್ಯ ಜನರ ಮೇಲಿನ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದ್ದವು.
ಅಂತೆಯೇ, ಟ್ರಂಪ್ ಆಡಳಿತವು ಷೇರು ಮಾರುಕಟ್ಟೆಯ ಅಭಿವೃದ್ಧಿ, ವಿದೇಶಿ ಹೂಡಿಕೆ ಹಾಗೂ ಬೃಹತ್ ವ್ಯಾಪಾರ ಸಾಧನೆಗಳನ್ನು ತನ್ನ ಆರ್ಥಿಕ ಯಶಸ್ಸಿನ ಪ್ರಮಾಣಪತ್ರವನ್ನಾಗಿ ಬಿಂಬಿಸುತ್ತಿತ್ತು. ಆದರೆ, ಷೇರು ಮಾರುಕಟ್ಟೆ ಎಷ್ಟೇ ಎತ್ತರಕ್ಕೆ ಬೆಳೆದರೂ, ದಿನನಿತ್ಯದ ಆಹಾರ ವಸ್ತುಗಳು, ಇಂಧನ, ಬಡ್ಡಿದರ ಹಾಗೂ ವಸತಿ ವೆಚ್ಚಗಳ ಭರಾಟೆಯಲ್ಲಿ ಸಾಮಾನ್ಯ ಜನರ ಬದುಕು ಹೈರಾಣಾಗಿತ್ತು. ಇದೆಲ್ಲದರ ಫಲವಾಗಿ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಅವರ ಪಕ್ಷ ಹೀನಾಯವಾಗಿ ಸೋಲುಂಡಿದೆ.
ಟ್ರಂಪ್ ಪಕ್ಷದ ಈ ದಾರುಣ ಸೋಲು ಭಾರತದ ಭವಿಷ್ಯವನ್ನೂ ಸೂಚಿಸುವಂತಿದೆ. ಭಾರತದ ಒಟ್ಟು ಆಂತರಿಕ ಉತ್ಪನ್ನ (GDP) ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಈ ಬೆಳವಣಿಗೆಯ ಹಣ್ಣುಗಳು ಸಮಾಜದ ಎಲ್ಲ ಸ್ತರಗಳಿಗೂ ಸಿಗುತ್ತಿಲ್ಲ ಎಂಬುದು ವಾಸ್ತವ. ತಿಂಗಳ ಸಂಬಳವನ್ನು ನಂಬಿ ಬದುಕುತ್ತಿರುವ ಮಧ್ಯಮ ವರ್ಗ, ದಿನಗೂಲಿ ಕಾರ್ಮಿಕರು, ಸಣ್ಣ ರೈತರು ಹಾಗೂ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸ್ಥಿತಿ ದುಸ್ಥರವಾಗಿದೆ. ಅವರೆಲ್ಲರೂ ಉದ್ಯೋಗ ಭದ್ರತೆ, ನೈಜ ವೇತನ, ತೀರಾ ಕಡಿಮೆ ಜೀವನ ವೆಚ್ಚ ಹಾಗೂ ಸಾರ್ವಜನಿಕ ಸೇವೆಗಳನ್ನೇ ಅವಲಂಬಿಸಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ಚಿಲ್ಲರೆ ಹಣದುಬ್ಬರವು 5.54%ರ ಗಡಿ ದಾಟಿದ್ದರೆ, ಅದರಲ್ಲಿಯೂ ನಿರ್ದಿಷ್ಟವಾಗಿ ಆಹಾರ ಹಣದುಬ್ಬರವು 7.74%ರಷ್ಟು ಭೀಕರ ಮಟ್ಟದಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು 8.06%ರಷ್ಟಿದ್ದು, ಬಡವರ ಬದುಕನ್ನು ನೇರವಾಗಿ ಹೈರಾಣಾಗಿಸಿದೆ.
ಇದು ಕೇವಲ ಅರ್ಥಶಾಸ್ತ್ರಜ್ಞರು ಕೂತು ಚರ್ಚಿಸುವ ಟೇಬಲ್ ಲೆಕ್ಕಾಚಾರವಲ್ಲ; ಬದಲಾಗಿ ದೇಶದ ಕೋಟ್ಯಂತರ ಕುಟುಂಬಗಳ ಅಡುಗೆಮನೆಯ ಬಜೆಟ್ ಅನ್ನು ಬುಡಮೇಲು ಮಾಡುತ್ತಿರುವ ನೈಜ ದುಸ್ಥಿತಿ. ಕೇಂದ್ರ ಸರ್ಕಾರದ ಇತ್ತೀಚಿನ ಬಳಕೆ ವೆಚ್ಚದ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಭಾರತದಲ್ಲಿ ಒಟ್ಟು ಆದಾಯದ 47%ರಷ್ಟು ಭಾಗ ಆಹಾರಕ್ಕಾಗಿಯೇ ವ್ಯಯವಾಗುತ್ತಿದೆ. ಹೀಗಿರುವಾಗ, ಆಹಾರ ಪದಾರ್ಥಗಳ ಬೆಲೆ ದಿಢೀರ್ ಏರಿಕೆಯಾದರೆ, ಅದು ದಿನಗೂಲಿ ನೌಕರನ ಮಕ್ಕಳ ಶಿಕ್ಷಣ, ಆರೋಗ್ಯ ತುರ್ತು ಪರಿಸ್ಥಿತಿಗಾಗಿನ ಉಳಿತಾಯವನ್ನು ಬರಿದುಮಾಡುತ್ತದೆ.
ಜೊತೆಗೆ, ಒಂದೆಡೆ – ನಿರುದ್ಯೋಗವೂ ತಾಂಡವವಾಡುತ್ತಿದೆ. ಮತ್ತೊಂದೆಡೆ – ಅಸಂಘಟಿತ ವಲಯದ ಕಾರ್ಮಿಕರು, ಗುತ್ತಿಗೆ ನೌಕರರು ಹಾಗೂ ಸ್ವಯಂ ಉದ್ಯೋಗಿಗಳು ಅಸ್ಥಿರತೆ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಉತ್ಪಾದನೆ ಹೆಚ್ಚುತ್ತಿದ್ದರೂ, ಕಾರ್ಮಿಕರ ಆದಾಯ ಮಾತ್ರ ಬೆಲೆ ಏರಿಕೆಗೆ ತಕ್ಕಂತೆ ಏರಿಕೆಯಾಗುತ್ತಿಲ್ಲ. ಕಾರ್ಮಿಕರು ತಮ್ಮ ದುಡಿಮೆಯಿಂದ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ.
ಈ ಲೇಖನ ಓದಿದ್ದೀರಾ?: ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು; ಭಾರತೀಯ ವಲಸಿಗರ ರಾಜಕೀಯ ಆಷಾಢಭೂತಿತನ!
ಜನರ ಬದುಕು ದುಸ್ಥರವಾಗಿರುವಾಗ ಕಾಲ್ಪನಿಕ ‘ರಾಷ್ಟ್ರೀಯವಾದ’ದ ಪ್ರಚಾರ ಅಮೆರಿಕವೇ ಆಗಿದ್ದರೂ, ಭಾರತವೂ ಆಗಿದ್ದರೂ ಮತದಾರರನ್ನು ಆಕರ್ಷಿಸುವುದಿಲ್ಲ. ಈ ಹಿಂದೆ, ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಯಶಸ್ಸಿನ ಮೂಲವೇ ಆಕ್ರಮಣಕಾರಿ ರಾಷ್ಟ್ರೀಯತೆಯಾಗಿತ್ತು. ‘ಅಮೆರಿಕಾ ಫಸ್ಟ್’, ಕಠಿಣ ವಲಸೆ ನೀತಿಗಳು ಹಾಗೂ ವ್ಯಾಪರ ಸಂರಕ್ಷಣೆಗಳು ಅವರ ಪ್ರಮುಖ ಅಜೆಂಡಾಗಳಾಗಿದ್ದವು. ಆದರೆ, 2026ರ ಮಧ್ಯಂತರ ಚುನಾವಣೆಯು “ರಾಷ್ಟ್ರೀಯತೆಯ ಭಾಷಣಗಳು ಅಥವಾ ದೇಶದ ಜಾಗತಿಕ ಪ್ರಾಬಲ್ಯದ ಹೆಮ್ಮೆಯು ಸಾಮಾನ್ಯ ನಾಗರಿಕನ ದಿನನಿತ್ಯದ ಬದುಕಿನ ಸಂಕಷ್ಟಗಳನ್ನು ಎಂದಿಗೂ ಮುಚ್ಚಿಹಾಕಲಾರದು” ಎಂಬ ಸ್ಪಷ್ಟ ಸಂದೇಶವನ್ನು ನೀಡಿವೆ.
ಭಾರತದಲ್ಲೂ ಮೋದಿ ಮತ್ತು ಅವರ ಬಿಜೆಪಿ/ಆರ್ಎಸ್ಎಸ್ನ ರಾಜಕೀಯ ಚರ್ಚೆಗಳು ಹೆಚ್ಚಾಗಿ ರಾಷ್ಟ್ರೀಯ ಭದ್ರತೆ, ಸಾಂಸ್ಕೃತಿಕ ಅಸ್ಮಿತೆ ಕುರಿತಾದ ಪ್ರಚಾರವನ್ನೇ ಸುತ್ತುವರಿದಿವೆ. ಇದೇ ಚರ್ಚೆಗಳು 2019ರ ಲೋಕಸಭಾ ಚುನಾವಣೆ ಮೇಲೂ ಭಾರೀ ಪ್ರಭಾವ ಬೀರಿದ್ದವು, ಬಿಜೆಪಿ ಗೆಲುವಿಗೂ ಕಾರಣವಾಗಿದ್ದವು. ಆದರೆ, ಈಗ ಕಾಲಚಕ್ರ ಉರುಳಿದಂತೆ, ರಾಷ್ಟ್ರೀಯವಾದದ ಚರ್ಚೆಗಳು ಹಳತಾಗುತ್ತಿವೆ. ಸಾಮಾನ್ಯ ಕುಟುಂಬಗಳ ಆದಾಯ, ಉದ್ಯೋಗ ಖಾತ್ರಿ, ಕೃಷಿಯ ಲಾಭದಾಯಕತೆ ಹಾಗೂ ಶಿಕ್ಷಣ-ಆರೋಗ್ಯದ ಕೈಗೆಟುಕುವಿಕೆಯ ಪ್ರಶ್ನೆಗಳು ರಾಜಕೀಯವಾಗಿಯೂ ಚರ್ಚಾ ವಿಷಯಗಳಾಗಿವೆ.
ಪ್ರಸ್ತುತದ ಸಂದರ್ಭದಲ್ಲಿ, ಸಾಮಾನ್ಯ ಕುಟುಂಬದ ಆರ್ಥಿಕ ಬದುಕು ಅತ್ಯಂತ ಸರಳವಾದ ಲೆಕ್ಕಾಚಾರವನ್ನು ಅವಲಂಬಿಸಿದೆ: ತಿಂಗಳ ಆದಾಯ ಎಷ್ಟು, ಮನೆಬಾಡಿಗೆ ಎಷ್ಟು, ಅಡುಗೆಮನೆಯ ಖರ್ಚು ಎಷ್ಟು, ಮಕ್ಕಳ ವಿದ್ಯಾಭ್ಯಾಸಕ್ಕೆ ಎಷ್ಟು ಬೇಕು ಹಾಗೂ ತುರ್ತು ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವೇ ಎಂಬಿತ್ಯಾದಿ ಮೂಲಭೂತ ಸಂಗತಿಗಳು ದಿನದಿನ್ಯ ಜನರನ್ನು ಕಾಡುತ್ತಿವೆ. ಇವುಗಳಿಗೆ ಉತ್ತರ ಸಿಗದ ಹೊರತು, ಜಿಡಿಪಿಯ ಉನ್ನತ ದರಗಳು ಅಥವಾ ಶತಕೋಟಿ ಡಾಲರ್ಗಳ ಬಂಡವಾಳ ಹೂಡಿಕೆಯ ದೊಡ್ಡ ಅಂಕಿಅಂಶಗಳು ಬಡವರ ಬಾಳಿನಲ್ಲಿ ಬೆಳಕು ಮೂಡಿಸಲಾರವು.
ಅಮೆರಿಕದ 2026ರ ಮಧ್ಯಂತರ ಚುನಾವಣೆಯು, “ಸರ್ಕಾರದ ಅಧಿಕೃತ ಪ್ರಚಾರದ ಮಾತುಗಳು ಮತ್ತು ಮತದಾರರು ತಮ್ಮ ಬದುಕಿನಲ್ಲಿ ಅನುಭವಿಸುವ ದೈನಂದಿನ ವಾಸ್ತವಗಳ ನಡುವೆ ಕಂದಕ ಸೃಷ್ಟಿಯಾದಾಗ, ಸಾರ್ವಜನಿಕ ಆಕ್ರೋಶ ಹೆಚ್ಚುವುದು ಖಚಿತ. ಧರ್ಮ, ಜಾತಿ, ಭಾಷೆ ಅಥವಾ ತೀವ್ರ ರಾಷ್ಟ್ರೀಯತೆಯ ಅತಿರೇಕಗಳು ಜನರನ್ನು ತಾತ್ಕಾಲಿಕವಾಗಿ ಭಾವನಾತ್ಮಕವಾಗಿ ಸೆಳೆಯಬಹುದೇ ಹೊರತು, ಅವರ ಹಸಿವನ್ನು ನೀಗಿಸಲಾರವು” ಎಂಬ ಸಂದೇಶವನ್ನು ಜಗತ್ತಿನ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳಿಗೂ ರವಾನಿಸಿದೆ. ಇದು ಭಾರತಕ್ಕೂ ಅನ್ವಯಿಸುತ್ತದೆ.




