2026ರ ಫಿಫಾ ವಿಶ್ವಕಪ್ ಮಹಾ ಟೂರ್ನಿಯಲ್ಲಿ ಬಳಕೆಯಾಗಲಿರುವ ಅಧಿಕೃತ ಫುಟ್‌ಬಾಲ್ ‘ಟ್ರಿಯೋಂಡಾ’ ಇದೀಗ ಅಂತರಿಕ್ಷವನ್ನು ತಲುಪಿ ಇತಿಹಾಸ ಸೃಷ್ಟಿಸಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸುತ್ತಿರುವ ವಿಶೇಷ ವೈಜ್ಞಾನಿಕ ಪ್ರಯೋಗದ ಅಂಗವಾಗಿ ಈ ಚೆಂಡನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸಲಾಗಿದೆ. ಕ್ರೀಡಾ ಜಗತ್ತು ಮತ್ತು ಬಾಹ್ಯಾಕಾಶ ವಿಜ್ಞಾನದ ಅಪರೂಪದ ಹಾಗೂ ವಿಸ್ಮಯಕಾರಿ ಸಂಯೋಜನೆಗೆ ಈ ಘಟನೆ ಸಾಕ್ಷಿಯಾಗಿದ್ದು, ವಿಜ್ಞಾನಿಗಳು ಮತ್ತು ಫುಟ್‌ಬಾಲ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಅಂತಾರಾಷ್ಟ್ರೀಯ ಕ್ರೀಡಾ ಸಾಮಗ್ರಿ ತಯಾರಕಾ ಸಂಸ್ಥೆ ಅಡಿಡಾಸ್ ಅಭಿವೃದ್ಧಿಪಡಿಸಿರುವ ಈ ಅತ್ಯಾಧುನಿಕ ಚೆಂಡನ್ನು ಶೂನ್ಯ ಗುರುತ್ವಾಕರ್ಷಣೆಯಲ್ಲಿ (ಮೈಕ್ರೋಗ್ರಾವಿಟಿ) ಪರೀಕ್ಷೆಗೆ ಒಳಪಡಿಸಲಾಗಿದೆ. ಚೆಂಡಿನ ಸಮತೋಲನ, ಅದರ ನಿರ್ದಿಷ್ಟ ಕೇಂದ್ರ ಬಿಂದು (ಸೆಂಟರ್ ಆಫ್ ಮಾಸ್) ಮತ್ತು ಗಾಳಿಯಲ್ಲಿನ ಅದರ ಚಲನೆಯ ಮೇಲೆ ಇವು ಬೀರುವ ನೇರ ಪ್ರಭಾವವನ್ನು ಆಳವಾಗಿ ಅಧ್ಯಯನ ಮಾಡುವುದು ಈ ಮಹತ್ವದ ಪ್ರಯೋಗದ ಪ್ರಮುಖ ಉದ್ದೇಶವಾಗಿದೆ. ಗಗನಯಾತ್ರಿಗಳು ಈ ಕುರಿತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಕ್ರೀಡಾ ವಿಜ್ಞಾನಿಗಳು ಚೆಂಡಿನ ಚಲನೆಯನ್ನು ನಿಖರವಾಗಿಸಲು ಅದರ ಸಮತೋಲನವನ್ನು ಬಹಳ ಎಚ್ಚರಿಕೆಯಿಂದ ವಿಶ್ಲೇಷಿಸುತ್ತಾರೆ. ಸಮತೋಲನದಲ್ಲಿ ಸಣ್ಣ ವ್ಯತ್ಯಾಸವಾದರೂ ಗಾಳಿಯಲ್ಲಿ ಚೆಂಡಿನ ಚಲನೆ ಹೇಗೆ ಬದಲಾಗುತ್ತದೆ ಎಂಬುದನ್ನು ಐಎಸ್‌ಎಸ್ ವಿಜ್ಞಾನಿಗಳು ಪ್ರಾಯೋಗಿಕವಾಗಿ ಸಾಬೀತುಪಡಿಸುತ್ತಿದ್ದಾರೆ. ಇದರ ಜೊತೆಗೆ, ಚೆಂಡಿನೊಳಗೆ ಅಳವಡಿಸಲಾಗಿರುವ ಅತ್ಯಾಧುನಿಕ ಮೈಕ್ರೋ ಸೆನ್ಸರ್‌ಗಳು ಮೈದಾನದಲ್ಲಿ ಅದರ ಹಾರಾಟದ ಗುಣಮಟ್ಟದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೆ ಎನ್ನುವುದನ್ನೂ ನಾಸಾ ನಿಖರವಾಗಿ ಅಧ್ಯಯನ ಮಾಡುತ್ತಿದೆ.
ಇದನ್ನು ಓದಿದ್ದೀರಾ? ಮೈದಾನದಲ್ಲಿ ಮಾಸದ ಮೋಡಿ: 39ರ ವಯಸ್ಸಿನಲ್ಲೂ ಮಿಂಚುತ್ತಿರುವ ಮೆಸ್ಸಿ; ಫುಟ್‌ಬಾಲ್ ದಿಗ್ಗಜರ ಸ್ವಾರಸ್ಯಗಳು
ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಐತಿಹಾಸಿಕ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2026ರ ಫಿಫಾ ವಿಶ್ವಕಪ್ ಪಂದ್ಯಾವಳಿಗಾಗಿ ‘ಟ್ರಿಯೋಂಡಾ’ ಹೆಸರಿನ ಈ ವಿಶೇಷ ಚೆಂಡನ್ನು ವಿನ್ಯಾಸಗೊಳಿಸಲಾಗಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ‘ಟ್ರಿಯೋಂಡಾ’ ಎಂದರೆ ‘ಮೂರು ಅಲೆಗಳು’ ಎಂದರ್ಥ. ಈ ಚೆಂಡು ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳ ಸುಂದರ ವಿನ್ಯಾಸವನ್ನು ಹೊಂದಿದ್ದು, ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿರುವ ಮೂರು ಪ್ರಬಲ ರಾಷ್ಟ್ರಗಳ ಒಗ್ಗಟ್ಟು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅದ್ಭುತವಾಗಿ ಪ್ರತಿನಿಧಿಸುತ್ತದೆ.

ಈ ಚೆಂಡಿನ ಮೇಲ್ಮೈಯಲ್ಲಿ ಆತಿಥೇಯ ದೇಶಗಳ ರಾಷ್ಟ್ರೀಯ ಸಂಕೇತಗಳನ್ನು ಅತ್ಯಂತ ಆಕರ್ಷಕವಾಗಿ ಮೂಡಿಸಲಾಗಿದೆ. ಕೆನಡಾ ದೇಶದ ಮೇಪಲ್ ಎಲೆ, ಮೆಕ್ಸಿಕೊದ ಹದ್ದು ಹಾಗೂ ಅಮೆರಿಕದ ನಕ್ಷತ್ರದ ಚಿಹ್ನೆಗಳು ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತವೆ. ಮಳೆಯಂತಹ ಪ್ರತಿಕೂಲ ಹವಾಮಾನದಲ್ಲಿ ಆಟಗಾರರಿಗೆ ಉತ್ತಮ ಹಿಡಿತ ಸಿಗುವಂತೆ ಮತ್ತು ಗಾಳಿಯಲ್ಲಿ ಚೆಂಡು ಸ್ಥಿರವಾಗಿ ವೇಗವಾಗಿ ಚಲಿಸಲು ನೆರವಾಗುವಂತೆ ಇದರ ಮೇಲ್ಮೈ ವಿನ್ಯಾಸ ಹಾಗೂ ಹೊಲಿಗೆಗಳನ್ನು ಬಹಳ ವೈಜ್ಞಾನಿಕವಾಗಿ ರೂಪಿಸಲಾಗಿದೆ.
ಟ್ರಿಯೋಂಡಾ ಚೆಂಡಿನ ಒಳಭಾಗದಲ್ಲಿ 500 ಹರ್ಟ್ಜ್ ಸಾಮರ್ಥ್ಯದ ಅತ್ಯಾಧುನಿಕ ‘ಮೋಷನ್ ಸೆನ್ಸರ್ ಚಿಪ್’ ಅಳವಡಿಸಲಾಗಿದೆ. ಇದು ಮೈದಾನದಲ್ಲಿ ಚೆಂಡಿನ ಪ್ರತಿಯೊಂದು ಸೂಕ್ಷ್ಮ ಚಲನೆಯ ಕ್ಷಣಕ್ಷಣದ ಡೇಟಾವನ್ನು ‘ವಿಡಿಯೊ ಅಸಿಸ್ಟೆಂಟ್ ರೆಫರಿ’ (ವಿಎಆರ್) ವ್ಯವಸ್ಥೆಗೆ ವೇಗವಾಗಿ ರವಾನಿಸುತ್ತದೆ. ಮೈದಾನದಲ್ಲಿ ಆಫ್‌ಸೈಡ್ ನಿಯಮದ ಉಲ್ಲಂಘನೆ ಸೇರಿದಂತೆ ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ರೆಫರಿಗಳಿಗೆ ತ್ವರಿತ, ನಿಖರ ಹಾಗೂ ದೋಷರಹಿತ ತೀರ್ಪು ನೀಡಲು ಈ ವಿನೂತನ ತಂತ್ರಜ್ಞಾನವು ದೊಡ್ಡ ಮಟ್ಟದಲ್ಲಿ ನೆರವು ನೀಡಲಿದೆ.




