ಕೇಂದ್ರ ಚುನಾವಣಾ ಆಯೋಗದಲ್ಲಿ (ECI) ಕಾರ್ಯ ಹಂಚಿಕೆ ಆದೇಶಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಮತ್ತು ಉಳಿದ ಇಬ್ಬರು ಚುನಾವಣಾ ಆಯುಕ್ತರ ನಡುವೆ ಎದ್ದಿದ್ದ ತೀವ್ರ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಆಡಳಿತಾತ್ಮಕ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಮಾಹಿತಿ ತಂತ್ರಜ್ಞಾನ (IT) ವಿಭಾಗದ ಮೇಲುಸ್ತುವಾರಿಯಲ್ಲಿ ತರಲಾಗಿದ್ದ ಬದಲಾವಣೆಯನ್ನು ಹಿಂಪಡೆದಿರುವ ಆಯೋಗ, ಹಿರಿಯ ಉಪ ಚುನಾವಣಾ ಆಯುಕ್ತರಿಗೆ ಪೂರ್ಣ ಅಧಿಕಾರ ನೀಡುವ ಹಳೆಯ ಶ್ರೇಣೀಕೃತ ವ್ಯವಸ್ಥೆಯನ್ನೇ ಬುಧವಾರ ಹೊರಡಿಸಿದ ಹೊಸ ಆದೇಶದಲ್ಲಿ ಮರುಸ್ಥಾಪಿಸಿದೆ.
ಕಳೆದ ಜುಲೈ 28 ರಂದು ಜಾರಿಯಾದ ಆಡಳಿತಾತ್ಮಕ ಆದೇಶದ ಪ್ರಕಾರ, ಐಟಿ ಮತ್ತು ಐಸಿಟಿ (ICT) ವಿಭಾಗದ ಮೇಲುಸ್ತುವಾರಿಯನ್ನು ಅಂದಿನ ಉಪ ಚುನಾವಣಾ ಆಯುಕ್ತ ಸಂಜಯ್ ಕುಮಾರ್ ಅವರಿಂದ ತೆರವುಗೊಳಿಸಲಾಗಿತ್ತು. ಬದಲಿಗೆ, ನೇರವಾಗಿ ಐಟಿ ವಿಭಾಗದ ಡೈರೆಕ್ಟರ್ ಜನರಲ್ (DG) ಸೀಮಾ ಖನ್ನಾ ಅವರ ಸುಪರ್ದಿಗೆ ನೀಡಲಾಗಿತ್ತು.
ಇದರಿಂದಾಗಿ ಸೀಮಾ ಖನ್ನಾ ಅವರು ಮಧ್ಯಂತರ ಅಧಿಕಾರಿಗಳಿಗೆ (ಉಪ ಚುನಾವಣಾ ಆಯುಕ್ತರು – DEC) ಮಾಹಿತಿ ನೀಡುವ ಅಥವಾ ಕಡತ ರವಾನಿಸುವ ಅಗತ್ಯವಿಲ್ಲದೇ, ನೇರವಾಗಿ ಸಿಇಸಿ ನೇತೃತ್ವದ ಆಯೋಗಕ್ಕೇ ಕಡತಗಳನ್ನು ಸಲ್ಲಿಸುವ ಅಧಿಕಾರ ಪಡೆದಿದ್ದರು. ಅಂದರೆ, ಐಟಿ ವಿಭಾಗದ ಮೇಲಿದ್ದ ಉಪ ಚುನಾವಣಾ ಆಯುಕ್ತರ ಹಂತದ ಪರಿಶೀಲನಾ ಸ್ತರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು.
ಆಯೋಗದ ಶ್ರೇಣೀಕೃತ ನಿಯಮಗಳ ಪ್ರಕಾರ, ಯಾವುದೇ ಪ್ರಮುಖ ಕಾರ್ಯ ಹಂಚಿಕೆ ಅಥವಾ ಆಡಳಿತಾತ್ಮಕ ಬದಲಾವಣೆಗಳನ್ನು ಮುಖ್ಯ ಚುನಾವಣಾ ಆಯುಕ್ತರು ಮತ್ತು ಉಳಿದ ಇಬ್ಬರು ಚುನಾವಣಾ ಆಯುಕ್ತರು (ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ) ಒಟ್ಟಾಗಿ ಚರ್ಚಿಸಿ, ಸರ್ವಾನುಮತದಿಂದ ನಿರ್ಧಾರ ಕೈಗೊಳ್ಳಬೇಕು. ಆದರೆ ಈ ಪ್ರಕರಣದಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರಮುಖ ಆರೋಪಗಳು ಕೇಳಿಬಂದಿದ್ದವು.
ಜುಲೈ 28 ರಂದು ಹೊರಡಿಸಲಾದ ಆದೇಶದಲ್ಲಿ ಇತರ ಇಬ್ಬರು ಆಯುಕ್ತರನ್ನು ಸಂಪೂರ್ಣವಾಗಿ ಕಡೆಗಣಿಸಿ, ಸಿಇಸಿ ಜ್ಞಾನೇಶ್ ಕುಮಾರ್ ಅವರ ಹಂತದಲ್ಲೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿತ್ತು.
ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾಗಿರುವ ಇವಿಎಂ (EVM), ಮತದಾರರ ಪಟ್ಟಿ ಹಾಗೂ ಡೇಟಾ ನಿರ್ವಹಿಸುವ ಐಟಿ ವಿಭಾಗದ ನೇರ ಅಧಿಕಾರವನ್ನು ಜ್ಞಾನೇಶ್ ಕುಮಾರ್ ತಮ್ಮ ಬಳಿಯೇ ಇಟ್ಟುಕೊಳ್ಳಲು ಈ ರೀತಿ ಮಾಡಿದ್ದರು ಎಂಬ ಆರೋಪ ವ್ಯಕ್ತವಾಗಿತ್ತು.
ಈ ವಿವಾದಾತ್ಮಕ ಆದೇಶವನ್ನು ಆಯೋಗದ ಪೂರ್ಣ ಸಮ್ಮತಿಯಿಲ್ಲದೆ ಹೆಚ್ಚುವರಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿ ಮಾನೀಶ್ ಗಾರ್ಗ್ ಅವರಿಂದ ಹೊರಡಿಸಲಾಗಿತ್ತು. ಸಿಇಸಿ ಬೆಂಬಲವಿಲ್ಲದೆ ಕೆಳಹಂತದ ಅಧಿಕಾರಿಯೊಬ್ಬರು ಇಂತಹ ನಿರ್ಧಾರ ಹೊರಡಿಸಲು ಸಾಧ್ಯವಿಲ್ಲ ಎಂಬುದು ಆಯುಕ್ತರ ಆಕ್ಷೇಪವಾಗಿತ್ತು.
ಸಿಇಸಿ ಜ್ಞಾನೇಶ್ ಕುಮಾರ್ ಅವರ ಈ ನಡೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಜುಲೈ 29 ರಂದು ಅವರು ತಕ್ಷಣವೇ ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರಿಗೆ ಪತ್ರ ಬರೆದು, ಆಯೋಗದ ಅಧಿಕೃತ ಅನುಮೋದನೆ ಇಲ್ಲದೆ ಆದೇಶ ಹೊರಡಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಸಂಜಯ್ ಕುಮಾರ್ ಆಯೋಗ ತೊರೆದಾಗ, ಮಾನೀಶ್ ಗಾರ್ಗ್ ಅವರೇ ಲಿಂಕ್ ಅಧಿಕಾರಿಯಾಗಿ ಐಟಿ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು.
ಸೆಪ್ಟೆಂಬರ್ 23 ರಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆಯ ತನಿಖಾ ವರದಿ ಈ ಆಂತರಿಕ ಸಂಘರ್ಷವನ್ನು ಬಯಲಿಗೆಳೆಯಿತು. ಇದರ ಬೆನ್ನಲ್ಲೇ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಸಲ್ಲಿಕೆಯಾದವು.
ಅಕ್ಟೋಬರ್ 26 ರಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಆಯೋಗ, “ಇಬ್ಬರು ಚುನಾವಣಾ ಆಯುಕ್ತರು ಜುಲೈ 30, ರಂದು ನೀಡಿದ ಜಂಟಿ ನಿರ್ದೇಶನದ ಹಿನ್ನೆಲೆಯಲ್ಲಿ ಜುಲೈ 28ರ ಕಾರ್ಯ ಹಂಚಿಕೆ ಆದೇಶವನ್ನು ಎಂದಿಗೂ ಅನುಷ್ಠಾನಕ್ಕೆ ತಂದಿರಲಿಲ್ಲ” ಎಂದು ಸ್ಪಷ್ಟಪಡಿಸಿತು. ಅಲ್ಲಿಯವರೆಗೆ ಸೀಮಾ ಖನ್ನಾ ಅವರು ಮಾನೀಶ್ ಗಾರ್ಗ್ ಅವರ ಮೂಲಕವೇ ಕಡತಗಳನ್ನು ರವಾನಿಸುತ್ತಿದ್ದರು ಎಂದು ತಿಳಿಸಲಾಯಿತು.
ಸುಮಾರು ಮೂರು ತಿಂಗಳ ಗೊಂದಲ ಹಾಗೂ ಆಂತರಿಕ ಸಂಘರ್ಷದ ನಂತರ ಬುಧವಾರ ಆಯೋಗವು ಹೊಸ ಆದೇಶ ಹೊರಡಿಸಿದ್ದು, ಹಳೆಯ ಶ್ರೇಣೀಕೃತ ವ್ಯವಸ್ಥೆಯನ್ನು ಮರುಸ್ಥಾಪಿಸಿದೆ.
ಹಿರಿಯ ಉಪ ಚುನಾವಣಾ ಆಯುಕ್ತ ಪವನ್ ಕುಮಾರ್ ಶರ್ಮಾ ಅವರಿಗೆ ಐಟಿ/ಐಸಿಟಿ ವಿಭಾಗದ ಪೂರ್ಣ ಉಸ್ತುವಾರಿ ವಹಿಸಲಾಗಿದೆ.
ಐಟಿ ಡೈರೆಕ್ಟರ್ ಜನರಲ್ ಸೀಮಾ ಖನ್ನಾ ಅವರು ಇನ್ಮುಂದೆ ಎಲ್ಲಾ ಕಡತಗಳನ್ನು ಹಿರಿಯ ಉಪ ಚುನಾವಣಾ ಆಯುಕ್ತ ಪವನ್ ಕುಮಾರ್ ಶರ್ಮಾ ಅವರ ಮೂಲಕವೇ ಸಲ್ಲಿಸುವುದು ಕಡ್ಡಾಯವಾಗಿದೆ. “ಈ ಕಾರ್ಯ ಹಂಚಿಕೆ ಆದೇಶವು ಆಯೋಗದ ಸರ್ವಾನುಮತದ ನಿರ್ಧಾರವಾಗಿದೆ. ಡಿಜಿ (ಐಟಿ) ಅವರ ವರದಿ ಮಾಡುವ ಶ್ರೇಣಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಅವರು ಯಾವಾಗಲೂ ಉಪ ಚುನಾವಣಾ ಆಯುಕ್ತರ ದರ್ಜೆಯ ಅಧಿಕಾರಿಗೆ ವರದಿ ಮಾಡುತ್ತಿದ್ದರು” ಎಂದು ಆಯೋಗದ ಮೂಲಗಳು ತಿಳಿಸಿದೆ.





