ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲಿನ ಹಲ್ಲೆ ನಡೆಸಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಭಗತ್ ಸಿಂಗ್ ಪುಸ್ತಕಗಳನ್ನು ಎಸೆದಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ. ಈ ಘಟನೆಗೆ ಕಾರಣರಾದ ಸಹಾಯಕ ಪೊಲೀಸ್ ಕಮಿಷನರ್ (ACP) ಅಜಯ್ ಶರ್ಮಾ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಶೈಕ್ಷಣಿಕ ಅವಾಂತರಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಹಲವು ದಿನಗಳಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ದೆಹಲಿಯ ಜಂತರ್‌ಮಂತರ್‌ನಲ್ಲಿ ಧರಣಿ ನಡೆಸುತ್ತಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಆಗಾಗೇ ದೂರುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಪೊಲೀಸರೆದುರೇ ‘ಕಾಕ್ರೋಚ್’ಗಳನ್ನು ಥಳಿಸಿದ ಬಿಜೆಪಿ ಕಾರ್ಯಕರ್ತರು: ಅಭಿಜೀತ್ ದೀಪ್ಕೆ ಆರೋಪ
ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕರಿಗಾಗಿ ತಾತ್ಕಾಲಿಕ ಉಚಿತ ಗ್ರಂಥಾಲಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಎಸಿಪಿ ಅಜಯ್ ಶರ್ಮಾ ಮತ್ತು ಅವರ ತಂಡವು ಗ್ರಂಥಾಲಯವನ್ನು ತೆರವುಗೊಳಿಸಲು ಯತ್ನಿಸಿದೆ. ಈ ವೇಳೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಭಗತ್ ಸಿಂಗ್ ಅವರ ಕುರಿತಾದ ಪುಸ್ತಕಗಳನ್ನು ನೆಲಕ್ಕೆ ಎಸೆದು ಅಪಮಾನಿಸಲಾಗಿದೆ ಎಂದು ದೀಪ್ಕೆ ಆರೋಪಿಸಿದ್ದಾರೆ.
ಗ್ರಂಥಾಲಯ ಸ್ಥಾಪಿಸುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಗಾಯಗೊಂಡ ವಿದ್ಯಾರ್ಥಿಗಳ ಚಿತ್ರಗಳನ್ನು ದೀಪ್ಕೆ ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಜ್ಞಾನದ ಸಂಕೇತವಾಗಿರುವ ಪುಸ್ತಕಗಳನ್ನು ಕಸದಂತೆ ಎಸೆದಿದ್ದಾರೆ. ದೆಹಲಿಯ ಮಣ್ಣಿನಲ್ಲಿ ಶಿವಾಜಿ ಮಹಾರಾಜ್ ಮತ್ತು ಭಗತ್ ಸಿಂಗ್ ಅವರಿಗೆ ಮಾಡಿದ ಈ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಕಿಡಿಕಾರಿರುವ ಅಭಿಜೀತ್ ದೀಪ್ಕೆ, ಎಸಿಪಿ ಅಜಯ್ ಶರ್ಮಾ ಅವರನ್ನು ತಕ್ಷಣವೇ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.




