ಪಾಕಿಸ್ತಾನದಲ್ಲಿರುವ ಐತಿಹಾಸಿಕ ತಕ್ಷಶಿಲಾ (Taxila) ವಿಶ್ವ ಪಾರಂಪರಿಕ ತಾಣದಲ್ಲಿ ಸಿಮೆಂಟ್ ಬಳಸಿ ಸಂರಕ್ಷಣಾ ಕಾಮಗಾರಿ ಮಾಡಿರುವ ಬಗ್ಗೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬದಲಾವಣೆಗಳನ್ನು ಹಿಂಪಡೆಯದಿದ್ದರೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಿಂದಲೇ ಕೈಬಿಡುವುದಾಗಿ ಎಚ್ಚರಿಕೆ ನೀಡಿದೆ.
ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಮತ್ತು ಪಾಕಿಸ್ತಾನದ ಪ್ರಮುಖ ದೈನಿಕ ‘ಡಾನ್’ (Dawn) ವರದಿ ಮಾಡಿರುವ ಪ್ರಕಾರ, ತಕ್ಷಶಿಲಾ ಸಂಕೀರ್ಣದ ಭಾಗವಾಗಿರುವ ‘ಮೊಹ್ರಾ ಮೊರಾಡು’ ಮತ್ತು ‘ಸಿರ್ಕಾಪ್’ ಎಂಬ ಎರಡು ಪ್ರಮುಖ ಐತಿಹಾಸಿಕ ತಾಣಗಳಲ್ಲಿ ನಿಯಮಾವಳಿಗಳನ್ನು ಮೀರಿ ನವೀಕರಣ ಕಾರ್ಯ ನಡೆಸಲಾಗಿದೆ. ಇದು 2026ರ ಮಾರ್ಚ್ ತಿಂಗಳಿನಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಯುನೆಸ್ಕೋ ಪಟ್ಟಿಗೆ ಲಕ್ಕುಂಡಿ ಸೇರ್ಪಡೆ ಪ್ರಸ್ತಾಪ ಬೆನ್ನಲ್ಲೇ 200ಕ್ಕೂ ಹೆಚ್ಚು ಅವಶೇಷಗಳು ಪತ್ತೆ
ಪ್ರವಾಸಿಗರೊಬ್ಬರು ಪ್ಯಾರಿಸ್‌ನಲ್ಲಿರುವ ಯುನೆಸ್ಕೋದ ಪಾಕಿಸ್ತಾನಿ ಪ್ರತಿನಿಧಿಗೆ ಕೆಲವು ಚಿತ್ರಗಳು ಹಾಗೂ ಸಾಕ್ಷ್ಯಗಳನ್ನು ರವಾನಿಸಿದ್ದರು. ಪಾಕ್‌ನ ಪಂಜಾಬ್ ಪ್ರಾಂತ್ಯದ ಪುರಾತತ್ವ ಇಲಾಖೆಯು ತಕ್ಷಶಿಲಾದ ಪುರಾತನ ಗೋಡೆಗಳನ್ನು ಕೆಡವಿ, ಆಧುನಿಕ ಸಿಮೆಂಟ್ ಮತ್ತು ನಯಗೊಳಿಸಿದ ಏಕರೂಪದ ಇಟ್ಟಿಗೆಗಳನ್ನು ಬಳಸಿ ಗೋಡೆಗಳ ಎತ್ತರವನ್ನು ಹೆಚ್ಚಿಸುತ್ತಿರುವುದನ್ನು ಆ ಚಿತ್ರಗಳು ಬಹಿರಂಗಪಡಿಸಿದ್ದವು.
ಇತಿಹಾಸ ತಜ್ಞರ ಪ್ರಕಾರ, ಪುರಾತನ ಕಾಲದ ಅನಿಯಮಿತ ಆಕಾರದ ಕಲ್ಲುಗಳಿಗೂ ಮತ್ತು ಈಗ ಬಳಸಲಾಗಿರುವ ಆಧುನಿಕ ಸಿಮೆಂಟ್ ಕಾಮಗಾರಿಗೂ ಸ್ಪಷ್ಟ ವ್ಯತ್ಯಾಸ ಕಾಣಿಸುತ್ತಿದ್ದು, ಇದು ತಾಣದ ನೈಜತೆಗೆ ಧಕ್ಕೆ ತಂದಿದೆ.
ಈ ಸಂಬಂಧ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯುನೆಸ್ಕೋ ಅಧಿಕಾರಿಗಳು ಪಾಕಿಸ್ತಾನದ ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ. ಅನಗತ್ಯ ಹಸ್ತಕ್ಷೇಪ ಹಾಗೂ ಪುನರ್ನಿರ್ಮಾಣ ಕಾಮಗಾರಿಗಳನ್ನು ತಕ್ಷಣವೇ ಹಿಂಪಡೆಯಬೇಕು, ಇಲ್ಲದಿದ್ದರೆ ತಕ್ಷಶಿಲಾವನ್ನು ಯುನೆಸ್ಕೋದ ‘ಅಪಾಯದಲ್ಲಿರುವ ಪಾರಂಪರಿಕ ತಾಣಗಳ ಪಟ್ಟಿ’ಗೆ (Danger List) ಸೇರಿಸಲಾಗುವುದು. ಅಂತಿಮವಾಗಿ ಪಟ್ಟಿಯಿಂದಲೇ ತೆಗೆದುಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ. ಹಾಗೆಯೇ ಇದೇ ರೀತಿಯ ನಿಯಮ ಉಲ್ಲಂಘನೆಗಾಗಿ ಈ ಹಿಂದೆ ಜರ್ಮನಿಯ ವಿಶ್ವ ಪಾರಂಪರಿಕ ತಾಣವೊಂದನ್ನು ಪಟ್ಟಿಯಿಂದ ಕೈಬಿಟ್ಟಿರುವುದನ್ನು ಯುನೆಸ್ಕೋ ಅಧಿಕಾರಿಗಳು ನೆನಪಿಸಿದ್ದಾರೆ.
ತಕ್ಷಶಿಲಾದ ಐತಿಹಾಸಿಕ ಮಹತ್ವ
ದಕ್ಷಿಣ ಏಷ್ಯಾದ ಅತ್ಯಂತ ಪ್ರಮುಖ ಪುರಾತತ್ವ ತಾಣಗಳಲ್ಲಿ ತಕ್ಷಶಿಲಾ (ಪ್ರಾಚೀನ ತಕ್ಷಶಿಲೆ) ಕೂಡ ಒಂದು. ಇದರ ಇತಿಹಾಸವು ವೈದಿಕ ಕಾಲಕ್ಕೆ ಸೇರಿದ್ದಾಗಿದ್ದು, ಹಿಂದೂ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲೂ ಇದರ ಉಲ್ಲೇಖವಿದೆ. ನಂತರದ ದಿನಗಳಲ್ಲಿ ಇದು ಬೌದ್ಧ ಧರ್ಮದ ಪ್ರಮುಖ ಕೇಂದ್ರವಾಗಿ ಹಾಗೂ ಗಾಂಧಾರ ಕಲೆಯ ನೆಲೆಬೀಡಾಗಿ ಜಾಗತಿಕ ಮನ್ನಣೆ ಪಡೆಯಿತು. ಇದನ್ನು 1980ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿತ್ತು.




