ಬೀದರ್ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿರುವ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವು ಅತ್ಯಂತ ಚುರುಕಿನಿಂದ ಸಾಗುತ್ತಿದೆ .
ಜಿಲ್ಲಾಧಿಕಾರಿ ಆದ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ಅವರು ಗುರುವಾರ ಹುಮನಾಬಾದ್ ತಾಲೂಕಿನ ಮಾಣಿಕನಗರ, ರಾಜೇಶ್ವರ ಮತ್ತು ಬಸವಕಲ್ಯಾಣ ತಾಲೂಕಿನ ತ್ರಿಪುರಾಂತದ ಭೀಮಾನಗರ, ಅರಿವಿನ ಮನೆ, ಸಸ್ತಾಪುರ ಗ್ರಾಮದ ಮನೆ-ಮನೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಎನುಮರೇಷನ್ ಅರ್ಜಿ ನಮೂನೆಗಳನ್ನು ವಿತರಿಸುವ ಪ್ರಕ್ರಿಯೆಯನ್ನು ವೀಕ್ಷಿಸಿದ ಅವರು, ಪರಿಷ್ಕರಣೆ ಕಾರ್ಯವನ್ನು ಯಾವುದೇ ಲೋಪದೋಷಗಳಿಲ್ಲದೆ ನಿಖರವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ಬಳಿಕ ಡಿಸಿ ಶಿಲ್ಪಾ ಶರ್ಮಾ ಮಾತನಾಡಿ, “ಬೀದರ್ ಜಿಲ್ಲೆಯಲ್ಲಿ ಪ್ರಸ್ತುತ ಜೂ.2ರ ವರೆಗಿನ ಅಂಕಿ-ಅಂಶಗಳ ಪ್ರಕಾರ ಒಟ್ಟು 1,77,548 ಅರ್ಜಿ ನಮೂನೆಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಈ ಪೈಕಿ ಸ್ವೀಕೃತವಾದ ಅರ್ಜಿಗಳಲ್ಲಿ 6,854 ನಮೂನೆಗಳ ಡಾಟಾ ಎಂಟ್ರಿ ಪ್ರಕ್ರಿಯೆಯನ್ನು ಈಗಾಗಲೇ ಕಂಪ್ಯೂಟರ್‌ನಲ್ಲಿ ದಾಖಲಿಸಿ ಪೂರ್ಣಗೊಳಿಸಲಾಗಿದೆ” ಎಂದರು.
ಇದನ್ನೂ ಓದಿ : ಭಾಲ್ಕಿ | ಅರ್ಹರ ಹೆಸರು ಕೈತಪ್ಪದಂತೆ ಎಚ್ಚರ ವಹಿಸಿ : ಸಂಸದ ಸಾಗರ್ ಖಂಡ್ರೆ
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಇದೇ ಜುಲೈ 29ವರೆಗೆ ಮತದಾರರ ಮನೆ-ಮನೆಗಳಿಗೆ ಭೇಟಿ ನೀಡಿ ಎನುಮರೇಶನ್ ಅರ್ಜಿಗಳನ್ನು ವಿತರಿಸುವ ಬೃಹತ್ ಕಾರ್ಯವನ್ನು ಕೈಗೊಳಲಾಗುತ್ತಿದ್ದು, ಅಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಸಾರ್ವಜನಿಕರು ತಪ್ಪು ಮಾಹಿತಿಗೆ ಆಸ್ಪದ ನೀಡದೆ, ಅಗತ್ಯ ವಿವರಗಳನ್ನು ಭರ್ತಿ ಮಾಡಿ ಎನುಮರೇಶನ್ ಫಾರ್ಮ್ಗಳನ್ನು ನೀಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.




