ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಫ್ದರ್‌ಜಂಗ್ ವಿಮಾನ ನಿಲ್ದಾಣದ ಮೇಲ್ಸೇತುವೆ ಬಳಿ ನೇಹಾ ಬೋರಾ ಸೇರಿದಂತೆ ವಿದ್ಯಾರ್ಥಿ ನಾಯಕರು ಮತ್ತು ವಶಕ್ಕೆ ಪಡೆದಿದ್ದ ಪ್ರತಿಭಟನಾಕಾರರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬಸ್ ಅನ್ನು ಪ್ರತಿಭಟನಾಕಾರರು ಸುತ್ತುವರಿದಿದ್ದಾರೆ. ಬಸ್ ಅಲ್ಲಿಂದ ತೆರಳದಂತೆ ತಡೆಯಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಚುನಾವಣಾ ಅಕ್ರಮಗಳ ಆರೋಪ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದ ಪೊಲೀಸರು, ಪ್ರತಿಭಟನಾಕಾರರು ಸ್ಥಳಕ್ಕೆ ತಲುಪದಂತೆ ದೆಹಲಿಯಾದ್ಯಂತ ಭದ್ರತೆ ಬಿಗಿಗೊಳಿಸಿದ್ದರು.
ನಗರದಾದ್ಯಂತ ಸಾವಿರಾರು ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಲವು ಕಡೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಪ್ರತಿಭಟನೆಗೆ ತೆರಳುತ್ತಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದಿದ್ದಾರೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ವೇಳೆ ವಕೀಲರ ಬಂಧನ: ಮಧ್ಯಪ್ರವೇಶಿಸಿ ಬಿಡುಗಡೆಗೆ ಸೂಚಿಸಿದ ಸುಪ್ರೀಂ ಕೋರ್ಟ್
CJP ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನೂ ದೆಹಲಿಗೆ ಬಂದಿಳಿದ ಕೂಡಲೇ ವಶಕ್ಕೆ ಪಡೆಯಲಾಗಿತ್ತು. ಗುರುತಿನ ಚೀಟಿ ಪ್ರದರ್ಶಿಸಿದ್ದರೂ ಹಲವು ಪತ್ರಕರ್ತರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸೂಕ್ತ ಮುನ್ಸೂಚನೆ ನೀಡದಿರುವುದು, ನಿಗದಿತ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಹಾಗೂ ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಆತಂಕಗಳನ್ನು ಉಲ್ಲೇಖಿಸಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು. ಭದ್ರತಾ ಕ್ರಮಗಳ ಭಾಗವಾಗಿ ಕೆಲವು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ಮಧ್ಯ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಅಕ್ಟೋಬರ್ 4ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲೂ ಅವರನ್ನು ಇತರ ಪ್ರತಿಭಟನಾಕಾರರೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದರು.
ದೇಶದ ಅತ್ಯುನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ಒಂದಾದ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿ ಧ್ವನಿ ಎತ್ತುವ ನಾಗರಿಕರು ಮತ್ತು ವಿದ್ಯಾರ್ಥಿಗಳ ಹಕ್ಕುಗಳಿಗೆ ತಡೆ ಒಡ್ಡುತ್ತಿರುವ ದೆಹಲಿ ಪೊಲೀಸರು ಹಾಗೂ ಅವರಿಗೆ ಅನುಮತಿ ಕೊಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿವೆ. ವರದಿಗಾರಿಕೆಯಲ್ಲಿ ತೊಡಗಿದ್ದ ಪತ್ರಕರ್ತರನ್ನು ಸಹ ವಶಕ್ಕೆ ಪಡೆದು ಪತ್ರಿಕಾ ಸ್ವಾತಂತ್ರ್ಯನ್ನೂ ಹತ್ತಿಕ್ಕಲಾಗುತ್ತಿದೆ. ಅಕ್ಟೋಬರ್ 4ರಂದೂ ಕೂಡ ಜಂತರ್ ಮಂತರ್‌ನಲ್ಲಿ ನಡೆದ ಇದೇ ರೀತಿಯ ಪ್ರತಿಭಟನೆಯಲ್ಲಿ ನಾಯಕರನ್ನು ವಶಕ್ಕೆ ಪಡೆಯಲಾಗಿತ್ತು. ಪ್ರತಿಭಟನೆ ನಡೆಯುತ್ತಿರುವುದು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿ, ಆದರೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ದಮನಕಾರಿ ಕ್ರಮಕ್ಕೆ ಆದೇಶಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ. ಹಾಗಾದರೆ ಚುನಾವಣಾ ಆಯೋಗ ಎಂದರೆ ಬಿಜೆಪಿಯ ಅಂಗ ಸಂಸ್ಥೆಯೇ? ಎಂದು ಪ್ರಶ್ನಿಸಲಾಗುತ್ತಿದೆ.




