ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಾಡಲಾಗಿರುವ ಭಾರಿ ಭದ್ರತಾ ವ್ಯವಸ್ಥೆ ಮತ್ತು ನಿರ್ಬಂಧಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದಾರೆ. “ಮೋದಿ ಸರ್ಕಾರವು ದೆಹಲಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿದೆ. ಇದು ಅಪಮಾನಕರ ಮತ್ತು ಅಸಮರ್ಥನೀಯ” ಎಂದು ಬಣ್ಣಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತರೂರ್, “ದೆಹಲಿಯ ರಸ್ತೆಗಳಲ್ಲಿ ಹಾಕಲಾದ ತಪಾಸಣಾ ಕೇಂದ್ರಗಳು, ಕಾಂಕ್ರೀಟ್ ಬ್ಯಾರಿಕೇಡ್‌ಗಳು, ಮೊಳೆಗಳಿರುವ ಪಟ್ಟಿಗಳು ಹಾಗೂ ಸೈನಿಕ ಯುದ್ಧದ ವಾತಾವರಣವನ್ನು ಹೋಲುವಂತೆ 22,000ಕ್ಕೂ ಹೆಚ್ಚು ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗಳ ನಿಯೋಜಿಸಲಾಗಿದೆ. ಇಂತಹ ಪರಿಸ್ಥಿತಿಯನ್ನು ನಾನು ಈ ಹಿಂದೆ ಎಂದಿಗೂ ನೋಡಿರಲಿಲ್ಲ” ಎಂದಿದ್ದಾರೆ.
“250 ರೈಲುಗಳನ್ನು ರದ್ದು ಮಾಡಲಾಗಿದೆ. 45 ಮೆಟ್ರೋ ನಿಲ್ದಾಣಗಳ ಮುಚ್ಚಲಾಗಿದೆ. ಯುವಜನರನ್ನು ಮನೆಗಳು ಮತ್ತು ಬೀದಿಗಳಿಂದ ವಶಕ್ಕೆ ಪಡೆಯಲಾಗಿದೆ. ದೆಹಲಿ ಕೇಂದ್ರ ಭಾಗದಲ್ಲಿ ಇಂಟರ್ನೆಟ್ ಸೇವೆ ಕಡಿತಗೊಳಿಸಲಾಗಿದೆ. ಇದೆಲ್ಲವೂ ಪ್ರತಿಗಾಮಿ ಹಾಗೂ ದಮನಕಾರಿ ಕೃತ್ಯ. ಜನರ ಸಂಚಾರ ಸ್ವಾತಂತ್ರ್ಯವನ್ನೂ ಸಂಪೂರ್ಣವಾಗಿ ಮೊಟಕುಗೊಳಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಮ್ಮ ಜೆನ್-ಜಿ ಯುವ ಸಮುದಾಯಕ್ಕೆ ತುರ್ತು ಪರಿಸ್ಥಿತಿಯನ್ನು ಹೋಲುವ ಈ ಪರಿಸ್ಥಿತಿಗಿಂತ ಉತ್ತಮವಾದ ಜೀವನ ಸಿಗಬೇಕಿದೆ. ಸರ್ಕಾರವು ಬಲಪ್ರಯೋಗ ಮಾಡುವ ಬದಲು ಸೂಕ್ತ ಉತ್ತರ ನೀಡಬೇಕು. ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯ ಕುರಿತು ಸಾರ್ವಜನಿಕರ ಕಳಕಳಿಗೆ ಚುನಾವಣಾ ಆಯೋಗವು ಸ್ಪಂದಿಸಬೇಕು” ಎಂದು ಆಗ್ರಹಿಸಿದ್ದಾರೆ.



