ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ನ್ಯಾಯಮೂರ್ತಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನೆಲೆ ಸುಪ್ರೀಂ ಕೋರ್ಟ್ ವಕೀಲರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಈ ವಕೀಲರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಜಂತರ್ ಮಂತರ್ ಮತ್ತು ಸುಪ್ರೀಂ ಕೋರ್ಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ಭಾರಿ ಭದ್ರತೆಯನ್ನು ಕೈಗೊಂಡಿದ್ದು, ಈ ವೇಳೆ ವಕೀಲರನ್ನು ವಶಕ್ಕೆ ಪಡೆದಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ದೆಹಲಿ ಸಿಜೆಪಿ ಹೋರಾಟಕ್ಕೆ ಎಸ್‌ಐಆರ್ ವಿರೋಧಿ ಒಕ್ಕೂಟ ಬೆಂಬಲ: ರಾಜ್ಯಾದ್ಯಂತ ಪಂಜಿನ ಮೆರವಣಿಗೆಗೆ ಕರೆ
ವಕೀಲರ ಬಂಧನ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಕೂಡಲೇ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಸೂರ್ಯಕಾಂತ್ ಮನವಿ ಸಲ್ಲಿಸಿ ಮಧ್ಯಪ್ರವೇಶಿಸುವಂತೆ ಕೋರಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿರಿಯ ಮತ್ತು ಕಿರಿಯ ವಕೀಲರ (ವಿಶೇಷವಾಗಿ ಮಹಿಳಾ ವಕೀಲರ) ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿರುವುದನ್ನು ಎಸ್‌ಸಿಬಿಎ ತೀವ್ರವಾಗಿ ಖಂಡಿಸಿತ್ತು.
ವಕೀಲರ ಬಂಧನ ಮತ್ತು ಅವರ ಮೇಲಿನ ಕಠಿಣ ಕ್ರಮದ ವಿರುದ್ಧ ಕಾನೂನು ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್ ಆಡಳಿತ ಮಂಡಳಿಯು ಮಧ್ಯಪ್ರವೇಶಿಸಿದೆ. ವಶಕ್ಕೆ ಪಡೆದಿರುವ ವಕೀಲರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.




