ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವತಿಯಿಂದ ನಡೆಯುತ್ತಿರುವ ಬೃಹತ್ ಪ್ರತಿಭಟನೆಯ ನಡುವೆ ಕೇಂದ್ರ ಸರ್ಕಾರವು ಮೆಟ್ರೋ ಸೇವೆ ಸ್ಥಗಿತಗೊಳಿಸಿದೆ. ಹಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಿದೆ. ಇದರಿಂದಾಗಿ ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್ ಸರ್ಕಾರ ಮತ್ತು ದೆಹಲಿ ಆಡಳಿತಕ್ಕೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ.
ಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ವಿಚಾರಣೆಯನ್ನು ನಡೆಸಿದೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಪಿಐಎಂ ನಾಯಕ ಎಂ ಎ ಬೇಬಿ
ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ, ಅನಗತ್ಯವಾಗಿ ಹಾಕಲಾಗಿರುವ ಎಲ್ಲಾ ರಸ್ತೆ ಬ್ಯಾರಿಕೇಡ್‌ಗಳನ್ನು ತಕ್ಷಣವೇ ತೆರವುಗೊಳಿಸಬೇಕು. ನೊಣ ಕೊಲ್ಲಲು ಸುತ್ತಿಗೆ ಬಳಸುವಂತೆ ಸಣ್ಣ ವಿಷಯಗಳಿಗೆ ಕಠಿಣ ನಿರ್ಬಂಧ ವಿಧಿಸುವುದು ಸೂಕ್ತವಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ದೆಹಲಿ ಮೆಟ್ರೋ ಮತ್ತು ರೈಲ್ವೆ ಸೇವೆಗಳನ್ನು ಪೂರ್ಣವಾಗಿ ಬಂದ್ ಮಾಡಬಾರದು. ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ದೈನಂದಿನ ಸಂಚಾರಕ್ಕೆ ಅಡಚಣೆಯಾಗದಂತೆ ಮೆಟ್ರೋ ರೈಲುಗಳ ಚಲನವಲನವನ್ನು ಸಾಮಾನ್ಯ ಸ್ಥಿತಿಯಲ್ಲಿಡಬೇಕು ಅಥವಾ ನಿಯಂತ್ರಿಸಬೇಕ ಹೊರತು ಪೂರ್ಣ ಸ್ಥಗಿತಗೊಳಿಸಬಾರದು ಎಂದು ತಿಳಿಸಿದೆ.
ರಸ್ತೆ ಮೂಲಕ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ಗೊಂದಲವಾಗದಂತೆ ಕಾಲಕಾಲಕ್ಕೆ ಸಂಚಾರ ಮುನ್ನೆಚ್ಚರಿಕೆ ಮಾಹಿತಿ ನೀಡಬೇಕು ಎಂದು ಆದೇಶಿಸಿದೆ. ಅಲ್ಲದೆ, ಮೆಟ್ರೋ ನಿಲ್ದಾಣಗಳನ್ನು ಮುಚ್ಚಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನೂ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.




