ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ರಾಜ್ಯಗಳು (ರಾಜ್ಯ ಸರ್ಕಾರ) ಕಾನೂನು ಪ್ರಕಾರ ಹಿಂಪಡೆಯಬಹು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದಾಗ್ಯೂ, ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಮಾತ್ರ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ವ್ಯಾಖ್ಯಾನವು ಮತ್ತೆ ಪ್ರತಿಭಟನಾಕಾರರ ವಿಚಾರದಲ್ಲಿ ‘ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ’ ಆಗಿದೆ.
ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್‌ಗಳನ್ನು ಹಿಂಪಡೆಯುವ ಬಗ್ಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಆದರೆ, ಗಂಭೀರ ಅಪರಾಧ ಹಿನ್ನೆಲೆ ಹೊಂದಿರುವವರ ವಿರುದ್ಧದ ಪ್ರಕರಣಗಳನ್ನು ಮಾತ್ರ ಹಿಂಪಡೆಯುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ತನ್ನ ಹಿಂದಿನ ಆದೇಶದಲ್ಲಿ ಉಲ್ಲೇಖಿಸಿದ್ದ ‘ಅಪರಾಧ ಹಿನ್ನೆಲೆ’ ಎಂಬ ಪದಕ್ಕೆ ಸ್ಪಷ್ಟನೆ ನೀಡಿದೆ. ‘ಅಪರಾಧ ಹಿನ್ನೆಲೆ ಎಂಬ ಪದವು ಗಂಭೀರ ಮತ್ತು ಹೇಯ ಅಪರಾಧಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿತು. ಹೀಗಾಗಿ, ದೆಹಲಿ ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಉಳಿದ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್‌ಗಳನ್ನು ಕಾನೂನು ಪ್ರಕಾರ ಮುಚ್ಚಲು ಅಥವಾ ಹಿಂಪಡೆಯಲು ಸ್ವತಂತ್ರವಾಗಿವೆ ಎಂದು ನ್ಯಾಯಪೀಠ ಹೇಳಿದೆ.
ಈ ವೇಳೆ ವಿದ್ಯಾರ್ಥಿಗಳ ಪರ ಹಿರಿಯ ವಕೀಲೆ ವೃಂದಾ ಗ್ರೋವರ್, “ದೇಶದ ವಿವಿಧ ರಾಜ್ಯಗಳಾದ ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಯುವಜನರು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಾಗಿ ಪ್ರತಿಭಟಿಸಿದ್ದರು. ಅವರ ಇಡೀ ಭವಿಷ್ಯ ಇನ್ನೂ ಮುಂದೆ ಇದೆ. ಹೀಗಾಗಿ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕೇ ಅಥವಾ ನ್ಯಾಯಾಲಯವೇ ರದ್ದುಪಡಿಸಬೇಕೇ ಎಂಬ ಬಗ್ಗೆ ರಾಜ್ಯಗಳೊಂದಿಗೆ ಚರ್ಚಿಸಿ ಮತ್ತೆ ನ್ಯಾಯಾಲಯದ ಮುಂದೆ ಬರುತ್ತೇವೆ” ಎಂದು ಹೇಳಿದ್ದಾರೆ.
ಇನ್ನೊಬ್ಬ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಪ್ರತಿಭಟನೆ ವೇಳೆ ಪೊಲೀಸರ ವರ್ತನೆ ಕುರಿತು ಗಂಭೀರ ಆರೋಪ ಮಾಡಿದರು. “ಪ್ರತಿಭಟನೆಯಲ್ಲಿ ವಕೀಲರ ಮಕ್ಕಳ ಮೇಲೂ ಹಲ್ಲೆ ನಡೆದಿದೆ. ನ್ಯಾಯಾಲಯಕ್ಕೆ ಸುಮಾರು 300 ವಿಡಿಯೊಗಳನ್ನು ಸಲ್ಲಿಸಲಾಗಿದೆ. ಕೆಲವು ಕಡೆಗಳಲ್ಲಿ ಸಮವಸ್ತ್ರವಿಲ್ಲದ ವ್ಯಕ್ತಿಗಳು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಈ ಕುರಿತು ದೆಹಲಿ ಪೊಲೀಸ್ ಆಯುಕ್ತರು ಮತ್ತು ರ್ಯಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಅಧಿಕಾರಿಗಳಿಂದ ಉತ್ತರ ಕೇಳಬೇಕು” ಎಂದು ಒತ್ತಾಯಿಸಿದರು.
ಈ ಲೇಖನ ಓದಿದ್ದೀರಾ?: ಸುದ್ದಿ ವಿವರ | ಹೊಸ ‘ಪರೀಕ್ಷೆ ತಿದ್ದುಪಡಿ ಮಸೂದೆ’ಯಲ್ಲಿ ಏನಿದೆ?
ಪ್ರತಿಭಟನೆ ವೇಳೆ ಪೆಲೆಟ್ ಗನ್ ಬಳಕೆಯ ವಿಷಯವೂ ನ್ಯಾಯಾಲಯದಲ್ಲಿ ಪ್ರಸ್ತಾಪವಾಯಿತು. ಈ ಕುರಿತು ವೃಂದಾ ಗ್ರೋವರ್, “ದೆಹಲಿ ಪೊಲೀಸರಿಗೆ ಪೆಲೆಟ್ ಗನ್ ಬಳಸಲು ಯಾವುದೇ ಸ್ಥಾಯಿ ಆದೇಶವಿಲ್ಲ. ಪೊಲೀಸರಿಗೆ ಆತ್ಮರಕ್ಷಣೆಗೆ ಅಗತ್ಯ ಸಾಧನಗಳಿರಬಾರದು ಎನ್ನುವುದು ನಮ್ಮ ವಾದವಲ್ಲ. ಆದರೆ, ಪೆಲೆಟ್ ಗನ್ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಬಳಸಲು ಸೂಕ್ತವಾದ ಆಯುಧವಲ್ಲ” ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪೆಲೆಟ್ ಗನ್ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ಪ್ರತಿಭಟನೆಯಲ್ಲಿ ಅತಿಯಾದ ಬಲಪ್ರಯೋಗ ನಡೆಸಿದ ಪೊಲೀಸ್ ಅಧಿಕಾರಿಗೆ ಅನಗತ್ಯ ರಕ್ಷಣೆ ಸಿಗಬಾರದು. ಅದೇ ವೇಳೆ ವಿದ್ಯಾರ್ಥಿ ಪ್ರತಿಭಟನೆಯ ಹೆಸರಿನಲ್ಲಿ ಗಂಭೀರ ಅಪರಾಧಿಗಳು ಕಾನೂನಿನ ಸೌಲಭ್ಯ ಪಡೆಯುವಂತೆಯೂ ಆಗಬಾರದು” ಎಂದು ಹೇಳಿದರು.
ನ್ಯಾಯಾಲಯವು ಈ ಹಿಂದೆ ಕೂಡ ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನಾತ್ಮಕವಾಗಿ ಸಂಪೂರ್ಣ ರಕ್ಷಿತವಾಗಿದೆ ಎಂದು ಹೇಳಿತ್ತು. ಪ್ರತಿಭಟನೆ ನಡೆಯುತ್ತಿದೆ ಎಂಬ ಕಾರಣಕ್ಕೆ ಮಾತ್ರ ಲಾಠಿಚಾರ್ಜ್ ಅಥವಾ ಅತಿಯಾದ ಪೊಲೀಸ್ ಬಲಪ್ರಯೋಗವನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.



