ಮಣಿಪುರದಲ್ಲಿ ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದ್ದು, ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ. ಘಟನೆಯ ಬೆನ್ನಲ್ಲೇ ಎರಡೂ ಸಮುದಾಯಗಳಿಗೆ ಸೇರಿದ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ರಾಜ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಮವಾರ ಬೆಳಗಿನ ಜಾವ 2.30ರ ಸುಮಾರಿಗೆ ಕುಕಿ ಪ್ರಾಬಲ್ಯದ ಕಾಂಗ್‌ಪೊಕ್ಪಿ ಜಿಲ್ಲೆಯ ತಾಫೌ ಕುಕಿ ಗ್ರಾಮದಲ್ಲಿ ಕನಿಷ್ಠ 10 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಕೆಲವೇ ಗಂಟೆಗಳ ಬಳಿಕ ಸೆನಾಪತಿ ಜಿಲ್ಲೆಯ ತಾಫೌ ನಾಗಾ ಗ್ರಾಮದಲ್ಲಿರುವ ಹಲವು ಮನೆಗಳಿಗೆ ಪ್ರತೀಕಾರವಾಗಿ ಕುಕಿ ಸಮುದಾಯದವರು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ನಾಗಾ ಮತ್ತು ಕುಕಿ ಸಮುದಾಯಗಳ ‘ಗ್ರಾಮ ಸ್ವಯಂಸೇವಕರ’ ನಡುವೆ ನಡೆದ ಗುಂಡಿನ ಚಕಮಕಿಯ ವೇಳೆ ಸಿಆರ್‌ಪಿಎಫ್ ಯೋಧರೊಬ್ಬರ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ಆಕ್ರೋಶಗೊಂಡ ನಾಗಾ ಗ್ರಾಮಸ್ಥರು ಸೆನಾಪತಿ ಜಿಲ್ಲೆ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ-2 ಅನ್ನು ಕೆಲ ಗಂಟೆಗಳ ಕಾಲ ಬಂದ್ ಮಾಡಿದರು. ಆಡಳಿತಾಧಿಕಾರಿಗಳ ಮಧ್ಯಪ್ರವೇಶದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಇದರಿಂದ ಇಂಫಾಲ್‌ನಿಂದ ನಾಗಾಲ್ಯಾಂಡ್‌ನ ದಿಮಾಪುರಕ್ಕೆ ತೆರಳುವ ಪ್ರಯಾಣಿಕ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ಅಡ್ಡಿಯಾಯಿತು. ಮೂರು ವರ್ಷಗಳ ಬಳಿಕ ಶುಕ್ರವಾರವಷ್ಟೇ ಎನ್‌ಎಚ್-2ರಲ್ಲಿ ಬಸ್ ಸಂಚಾರ ಪುನರಾರಂಭಗೊಂಡಿತ್ತು. ಸೋಮವಾರ ಇಂಫಾಲ್‌ನಿಂದ 258 ಪ್ರಯಾಣಿಕರನ್ನು ಹೊತ್ತ ಐದು ಬಸ್‌ಗಳು ಹಾಗೂ ಏಳು ವಿಂಗರ್‌ಗಳು ಮಧ್ಯಾಹ್ನ 1ರ ಸುಮಾರಿಗೆ ದಿಮಾಪುರ ಮತ್ತು ಗುವಾಹಟಿಯತ್ತ ತೆರಳಿದ್ದವು. ಗುವಾಹಟಿಯಿಂದಲೂ ಬಸ್‌ಗಳು ಇದೇ ಮಾರ್ಗವಾಗಿ ಇಂಫಾಲ್‌ಗೆ ಮರಳಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರಾವಣದಲ್ಲಿ ಮೀನೂಟ; ಅಯೋಧ್ಯೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಿತ್ತಾಟ
ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ನವೀಕರಣಕ್ಕೆ ಆಗ್ರಹಿಸಿ 14 ನಾಗರಿಕ ಸಂಘಟನೆಗಳ ಮುಖಂಡರು ಸೋಮವಾರ ನವದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾದ ದಿನವೇ ಈ ಸಂಘರ್ಷ ನಡೆದಿದೆ. ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಮಣಿಪುರದಲ್ಲಿ ಎನ್‌ಆರ್‌ಸಿ ನವೀಕರಿಸಬೇಕು ಎಂದು ಸಂಘಟನೆಗಳು ಕೇಂದ್ರವನ್ನು ಒತ್ತಾಯಿಸಿವೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶೀಘ್ರ ಚರ್ಚಿಸುವುದಾಗಿ ರಿಜಿಜು ಭರವಸೆ ನೀಡಿದ್ದಾರೆ.
ಇದೇ ವೇಳೆ ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಕೂಡ ರಾಜ್ಯದ ಪ್ರಸ್ತುತ ಪರಿಸ್ಥಿತಿ ಹಾಗೂ ಎನ್‌ಆರ್‌ಸಿ ಬೇಡಿಕೆ ಕುರಿತು ಚರ್ಚಿಸಲು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಸೋಮವಾರ ನವದೆಹಲಿಗೆ ತೆರಳಿದ್ದಾರೆ.




