ಸ್ವಾತಂತ್ರ್ಯ ದಿನಾಚರಣೆಗೆ (ಆಗಸ್ಟ್ 15) ಕೇವಲ ಒಂದು ದಿನ ಬಾಕಿ ಇರುವಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದೆಹಲಿ ಹೈಕೋರ್ಟ್, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐ) ಸೇರಿದಂತೆ ಆರು ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಹೈಕೋರ್ಟ್‌ಗೆ ಬಂದಿರುವ ಬೆದರಿಕೆ ಇಮೇಲ್‌ನ ವಿಷಯದಲ್ಲಿ (Subject) ‘30 ಎಂಬಿ ಬ್ಲಾಸ್ಟ್ ಅಟ್ ದಿ ದೆಹಲಿ ಹೈಕೋರ್ಟ್’ ಎಂದು ಬರೆಯಲಾಗಿದ್ದು, ಮಧ್ಯಾಹ್ನ 2.11ಕ್ಕೆ ಸ್ಫೋಟ ಸಂಭವಿಸಲಿದೆ ಎಂದು ಉಲ್ಲೇಖಿಸಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಹೈಕೋರ್ಟ್ ವಕೀಲರ ಸಂಘದ (DHCBA) ಜಂಟಿ ಕಾರ್ಯದರ್ಶಿ ಕುನಾಲ್ ಮಲ್ಹೋತ್ರಾ, “ಇದೊಂದು ಹುಸಿ ಬೆದರಿಕೆ ಇಮೇಲ್ ಆಗಿರುವ ಸಾಧ್ಯತೆಯೇ ಹೆಚ್ಚು. ಆದಾಗ್ಯೂ, ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳದೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿ ಅಗ್ನಿಶಾಮಕ ದಳದ ಮಾಹಿತಿಯ ಪ್ರಕಾರ, ಹೈಕೋರ್ಟ್ ಮಾತ್ರವಲ್ಲದೆ ಇತರ ಐದು ಸ್ಥಳಗಳಿಗೂ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಜಾಮ್‌ನಗರ ಹೌಸ್, ಝಂಡೇವಾಲನ್ ಫ್ಲಾಟೆಡ್ ಫ್ಯಾಕ್ಟರಿ ಕಾಂಪ್ಲೆಕ್ಸ್, ಎಂ.ಬಿ. ಸಾಕೇತ್ ಕಚೇರಿ/ಡಿಎಂ ಕಚೇರಿ, ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್-3 ಹಾಗೂ ದೆಹಲಿ ಕಂಟೋನ್ಮೆಂಟ್‌ನ ಎಸ್‌ಡಿಎಂ ಕಚೇರಿಗೆ ಬೆದರಿಕೆ ಬಂದಿದೆ. ಕರೆ ಬಂದ ತಕ್ಷಣವೇ ಈ ಎಲ್ಲ ಸ್ಥಳಗಳಿಗೆ ಅಗ್ನಿಶಾಮಕ ವಾಹನಗಳನ್ನು ರವಾನಿಸಿ, ತಪಾಸಣೆ ನಡೆಸಲಾಗಿದೆ.
ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ದೇಶಾದ್ಯಂತ ಈಗಾಗಲೇ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಗರದ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ (ಟಿಕ್ರಿ ಗಡಿ ಸೇರಿದಂತೆ) ವಾಹನಗಳ ತಪಾಸಣೆ ತೀವ್ರಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳು ಹಾಗೂ ಜನದಟ್ಟಣೆ ಇರುವ ಪ್ರದೇಶಗಳ ಮೇಲೆ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ.
ಇತ್ತೀಚಿನ ದಿನಗಳಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಬೆದರಿಕೆಗಳು ನಿರಂತರವಾಗಿ ಬರುತ್ತಿವೆ. ಇದೇ ಆಗಸ್ಟ್ 3ರಂದು ದೆಹಲಿ ಮೇಯರ್ ಕಚೇರಿಗೆ 8ನೇ ಬಾರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಅನಾಮಧೇಯ ವ್ಯಕ್ತಿಯಿಂದ ಬೆಳಗ್ಗೆ 9.07ಕ್ಕೆ ಬಂದಿದ್ದ ಆ ಇಮೇಲ್‌ನಲ್ಲಿಯೂ ‘ಮಧ್ಯಾಹ್ನ 2.11ಕ್ಕೆ ಸ್ಫೋಟವಾಗಲಿದೆ’ ಎಂದೇ ಬೆದರಿಸಲಾಗಿತ್ತು. ತಕ್ಷಣವೇ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದಾಗ ಅದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿತ್ತು.
ಅದೇ ದಿನ (ಆಗಸ್ಟ್ 3) ದೆಹಲಿಯ ಹಲವು ಶಾಲೆಗಳಿಗೂ ಬೆದರಿಕೆ ಕರೆಗಳು ಬಂದಿದ್ದವು. ಇದಕ್ಕೂ ಮುನ್ನ ಜುಲೈ 31ರಂದು ಗುರುಗ್ರಾಮದ ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯಗಳು ಹಾಗೂ ಕೆಲವು ಶಾಲೆಗಳಿಗೂ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಬಳಿಕ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಕಾರ್ಯಾಚರಣೆ ನಡೆಸಿದಾಗ, ಅವೆಲ್ಲವೂ ವದಂತಿ ಎಂಬುದು ಸಾಬೀತಾಗಿತ್ತು.




