ಪಕ್ಷಾಂತರ ನಿರೋಧಕ ಕಾಯ್ದೆಯಡಿ ಎದುರಿಸುತ್ತಿರುವ ಅನರ್ಹತೆ ಅರ್ಜಿಗೆ ಸಂಬಂಧಿಸಿದಂತೆ ಲೋಕಸಭೆ ಸಚಿವಾಲಯ ನೀಡಿದ್ದ ನೋಟಿಸ್‌ಗೆ ಉತ್ತರಿಸಲು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) 20 ಬಂಡಾಯ ಸಂಸದರು ಮತ್ತೆ 15 ದಿನಗಳ ಕಾಲಾವಕಾಶ ಕೋರಿದ್ದಾರೆ.
ಟಿಎಂಸಿ ತೊರೆದು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಜೊತೆ ಗುರುತಿಸಿಕೊಂಡಿರುವ 20 ಬಂಡಾಯ ಸಂಸದರ ವಿರುದ್ಧ ಪಕ್ಷಾಂತರ ನಿರೋಧಕ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಎನ್‌ಸಿಪಿಐ ಜೊತೆ ಟಿಎಂಸಿ ಬಂಡಾಯ ಬಣ ವಿಲೀನ; ಕಾನೂನು ಸಲಹೆ ಪಡೆಯಲು ಲೋಕಸಭಾ ಸ್ಪೀಕರ್ ಚಿಂತನೆ
ಈ ಅರ್ಜಿಗೆ ಸಂಬಂಧಿಸಿದಂತೆ ಲೋಕಸಭೆ ಸಚಿವಾಲಯ ನೀಡಿದ್ದ ಗಡುವು ಅಕ್ಟೋಬರ್ 8ಕ್ಕೆ ಅಂತ್ಯಗೊಂಡಿತ್ತು. ಆದರೆ, ಕಾನೂನು ತಂಡಕ್ಕೆ ಅಗತ್ಯ ದಾಖಲೆಗಳನ್ನು ಕ್ರೋಢೀಕರಿಸಲು ಮತ್ತು ವಿವರವಾದ ಉತ್ತರ ಸಿದ್ಧಪಡಿಸಲು ಇನ್ನಷ್ಟು ಸಮಯದ ಅಗತ್ಯವಿದೆ. ಹೀಗಾಗಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದು ಮತ್ತೊಮ್ಮೆ 15 ದಿನಗಳ ಕಾಲಾವಕಾಶ ನೀಡುವಂತೆ ಕೋರಲಾಗಿದೆ ಎಂದು ಬಂಡಾಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಸಂಸದರಿಗೆ ಅಕ್ಟೋಬರ್ 8ರವರೆಗೆ ಅಂತಿಮ ಸಮಯ ನೀಡಲಾಗಿತ್ತು. ಮುಂದಿನ ಕಾನೂನು ಹೋರಾಟ ಮತ್ತು ಪ್ರತಿಕ್ರಿಯೆ ಸಿದ್ಧಪಡಿಸುವ ಕುರಿತು ಚರ್ಚಿಸಲು ಬಂಡಾಯ ಸಂಸದರು ಕೋಲ್ಕತಾದಲ್ಲಿ ಮಹತ್ವದ ಸಭೆಯನ್ನೂ ನಡೆಸಿದ್ದಾರೆ. ಈ ವಿಷಯದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಬಂಡಾಯ ಸಂಸದರ ಮನವಿಯನ್ನು ಪುರಸ್ಕರಿಸಿ ಕಾಲಾವಕಾಶ ವಿಸ್ತರಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.




