ಸೋಮವಾರದಿಂದ(ನ.30) ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನವೇ, ಕೇಂದ್ರ ಸರ್ಕಾರದ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗಳನ್ನು ಬೆಂಬಲಿಸಲು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಿರ್ಧರಿಸಿದೆ. ಪಕ್ಷದ ಅಧ್ಯಕ್ಷ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಚೆನ್ನೈನಲ್ಲಿ ಶನಿವಾರ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಈ ಕುರಿತು ಅಧಿಕೃತ ನಿರ್ಣಯ ಅಂಗೀಕರಿಸಲಾಗಿದೆ.
ಸಂಸತ್ತಿನ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸಂಪುಟವು ಶುಕ್ರವಾರ (ನವೆಂಬರ್ 27) ‘ಸಂವಿಧಾನ (132ನೇ ತಿದ್ದುಪಡಿ) ಮಸೂದೆ–2026’ ಮತ್ತು ‘ಕ್ಷೇತ್ರ ಪುನರ್‌ವಿಂಗಡಣೆ (ಎರಡನೇ) ಮಸೂದೆ–2026’ಕ್ಕೆ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ಸಭೆ ಸೇರಿದ ಡಿಎಂಕೆ ಸಂಸದರು, ‘ತಮಿಳುನಾಡಿನ ಪ್ರಾತಿನಿಧ್ಯವನ್ನು ರಕ್ಷಿಸುವುದು ಮತ್ತು ರಾಜ್ಯದ ಹಕ್ಕುಗಳನ್ನು ಎತ್ತಿಹಿಡಿಯುವುದು’ ತಮ್ಮ ಮುಖ್ಯ ಗುರಿ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಂಕೆ ಸಂಸದ ಎ. ರಾಜಾ, ‘ನಾವು ಕಾಂಗ್ರೆಸ್ ಜತೆ ಇರಲಿ ಅಥವಾ ಇಲ್ಲದಿರಲಿ, ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ, ಲೋಕಸಭೆಯಲ್ಲಿ ತಮಿಳುನಾಡಿನ ಶೇ 7.18ರಷ್ಟು ಸ್ಥಾನಗಳ ಪಾಲು ಬದಲಾಗಬಾರದು ಎಂಬುದು ನಮ್ಮ ನಿರಂತರ ಬೇಡಿಕೆಯಾಗಿದೆ. ಪ್ರಸ್ತುತ ಆ ಪಾಲನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗುತ್ತಿದೆ. ಪ್ರಕ್ರಿಯೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಅಗತ್ಯವಿದ್ದರೆ ಮಸೂದೆಗೆ ತಿದ್ದುಪಡಿ ಮಂಡಿಸುತ್ತೇವೆ’ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಎಂಕೆ ಸಂಸದ ದಯಾನಿಧಿ ಮಾರನ್, ‘ಯಾರು ಯಾರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ಅವರು ಜನರನ್ನು ಬಳಸಿಕೊಂಡು ಬಿಸಾಡುವ ನೀತಿಯನ್ನು ಅನುಸರಿಸುತ್ತಾರೆ. ಕಾಂಗ್ರೆಸ್‌ಗೆ ನಿಜವಾಗಿಯೂ ಏನು ಬೇಕು?’ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಆರಂಭದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬೇಡ ಎಂದು ಹೇಳಲಾಗಿತ್ತು; ನಮಗೂ ಅದು ಬೇಕಿರಲಿಲ್ಲ. ಆದರೆ ಅದನ್ನು ಸಂಪೂರ್ಣವಾಗಿ ವಿರೋಧಿಸಿದರೆ ದೊಡ್ಡ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ನಾವು ಅಂದೇ ಸ್ಪಷ್ಟಪಡಿಸಿದ್ದೆವು ಎಂದರು.
‘ಹಾಲಿ ಮುಖ್ಯಮಂತ್ರಿ ಜೋಸೆಫ್ ಸಿ. ವಿಜಯ್ ಅವರು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರೇ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ಕುರಿತು ಈಗ ನಿರ್ಧಾರ ತೆಗೆದುಕೊಳ್ಳದಿದ್ದರೆ, ಮುಂದೆ ಜನಗಣತಿ ನಡೆದ ಬಳಿಕ ಕಾನೂನಿನ ಪ್ರಕಾರ ಸರಳ ಬಹುಮತದಲ್ಲೇ ಕೇಂದ್ರ ಸರ್ಕಾರ ಮಸೂದೆ ಅಂಗೀಕರಿಸಲು ಸಾಧ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಪುನರ್‌ವಿಂಗಡಣೆ ನಡೆದು ನಾವು ಸ್ಥಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಚಿದಂಬರಂ ಹೇಳಿದ್ದರು’ ಎಂದು ಮಾರನ್ ವಿವರಿಸಿದರು.
ಇದಕ್ಕೂ ಮುನ್ನ ಶುಕ್ರವಾರ ತಿರುವನಂತಪುರದಲ್ಲಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ಡಿಎಂಕೆ ‘ಬಿಜೆಪಿಯ ಬಲೆಗೆ’ ಬೀಳುತ್ತಿದೆ ಎಂದು ಟೀಕಿಸಿದ್ದರು. ‘ಡಿಎಂಕೆ ಹಿಂದೆಲ್ಲಾ ರಾಜ್ಯಗಳ ಹಕ್ಕುಗಳ ಪರವಾಗಿ ಗಟ್ಟಿ ಧ್ವನಿ ಎತ್ತುತ್ತಿತ್ತು. ಈ ವರ್ಷದವರೆಗೂ ಅಧಿಕಾರದಲ್ಲಿದ್ದಾಗ ತಮಿಳುನಾಡಿನಲ್ಲಿ ಹಿಂದಿ ಬೋಧನೆಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಜವಾಹರ ನವೋದಯ ವಿದ್ಯಾಲಯಗಳಿಗೂ ಒಪ್ಪಿಗೆ ನೀಡಿರಲಿಲ್ಲ. ಅಂತಹ ಪಕ್ಷವು ಈಗ ಬಿಜೆಪಿಯ ಹಿಂದಿರುವ ದೊಡ್ಡ ಕಾರ್ಯಸೂಚಿಯನ್ನು ಗಮನಿಸದೆ, ಕೇವಲ ಸ್ಥಾನಗಳ ಸಮಾನಾನುಪಾತದ ಹೆಚ್ಚಳ ಎಂಬ ತೋರಿಕೆಯ ವಾದಕ್ಕೆ ಶರಣಾಗಿರುವುದು ತೀವ್ರ ನಿರಾಸೆ ತಂದಿದೆ. ಇದು ಜನರ ಮೇಲಿನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಡೆಯಾಗಿದ್ದು, ಯಾವುದೇ ನಿಜವಾದ ದ್ರಾವಿಡ ಬೆಂಬಲಿಗರು ಇದನ್ನು ಸ್ವಾಗತಿಸುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಸಮಾನಾನುಪಾತದ ಹೆಚ್ಚಳದ ವಾದವನ್ನು ಉದಾಹರಣೆಯ ಮೂಲಕ ವಿಶ್ಲೇಷಿಸಿದ ತರೂರ್, ‘ಒಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ₹2 ಲಕ್ಷ ವೇತನ ಪಡೆಯುತ್ತಿದ್ದು, ಅವರ ಚಾಲಕ ₹20 ಸಾವಿರ ವೇತನ ಪಡೆಯುತ್ತಿದ್ದಾನೆ ಎಂದುಕೊಳ್ಳಿ. ಇಲ್ಲಿ ವೇತನದ ಅನುಪಾತ 10:1 ಇರುತ್ತದೆ. ಎಲ್ಲರಿಗೂ ಶೇ 50ರಷ್ಟು ವೇತನ ಹೆಚ್ಚಿಸಿದರೆ, ಎಂಡಿ ವೇತನ ₹3 ಲಕ್ಷ ಹಾಗೂ ಚಾಲಕನ ವೇತನ ₹30 ಸಾವಿರ ಆಗುತ್ತದೆ. ಆಗಲೂ ಅನುಪಾತ 10:1 ಇದ್ದರೂ, ಎಂಡಿ ಬಳಿ ಹೆಚ್ಚಿನ ಹಣ, ಸಂಪನ್ಮೂಲ ಹಾಗೂ ಕೆಲಸ ಮಾಡುವ ಶಕ್ತಿ ಸಂಗ್ರಹವಾಗಿರುತ್ತದೆ. ಬಿಜೆಪಿ ಕೂಡ ಇದೇ ತಂತ್ರದ ಮೂಲಕ ಲಾಭ ಪಡೆಯಲು ಯತ್ನಿಸುತ್ತಿದ್ದು, ಡಿಎಂಕೆ ಸರಿಯಾಗಿ ಆಲೋಚಿಸದೆ ಆ ಬಲೆಗೆ ಬಿದ್ದಿದೆ’ ಎಂದು ಅಭಿಪ್ರಾಯಪಟ್ಟಿದ್ದರು.



