ಸಂಸತ್ತಿನ ಈ ವಿಶೇಷ ಅಧಿವೇಶನ ಮಹಿಳೆಯರಿಗಾಗಿ ಅಲ್ಲ; ಕ್ಷೇತ್ರ ಮರುವಿಂಗಡಣೆಗಾಗಿ!

Date:

ಮಹಿಳಾ ಮೀಸಲಾತಿಯನ್ನು ಯಾರೂ ವಿರೋಧಿಸಲು ಧೈರ್ಯ ಮಾಡುವುದಿಲ್ಲ ಎಂಬುದು ಸರ್ಕಾರದ ಲೆಕ್ಕವಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆಯ ಪ್ರಸ್ತಾವನೆಯನ್ನು ಮಹಿಳಾ ಮೀಸಲಾತಿಯ ಸೆರಗಿಗೆ ಗಂಟುಹಾಕುವ ಪ್ರಯತ್ನ ನಡೆದಿದೆ.

ಭಾರತದ ಚುನಾವಣಾ ನಕ್ಷೆಯನ್ನೇ ಮರುರೂಪಿಸಬಲ್ಲ ಮಸೂದೆಯೊಂದನ್ನು ಬಹಳ ಜಾಣ್ಮೆಯಿಂದ ಸೀರೆಯ ಸೆರಗಿನೊಳಗೆ ಮರೆಮಾಚಿ ತರಲಾಗಿದೆ. ಸಂಸತ್ತು ಈ ಮಸೂದೆಗೆ ಒಪ್ಪಿಗೆ ನೀಡುವ ಮುನ್ನ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ಪ್ರಶ್ನೆಗೆ ಉತ್ತರಿಸಲೇಬೇಕು: ಈ ಸರ್ಕಾರವನ್ನು ನಂಬುವುದಾದರೂ ಏಕೆ?

- Advertisement -

ಮೋದಿ ಸರ್ಕಾರಕ್ಕೆ ದೊಡ್ಡ ಸದನವಿರಬೇಕು; ಆದರೆ ಅಧಿಕಾರವನ್ನು ಪ್ರಶ್ನಿಸುವ ಶಕ್ತಿ ಇಲ್ಲದ ದುರ್ಬಲ ಸಂಸತ್ತು ಬೇಕು. ಈ ಮಸೂದೆಯಿಂದ ಲೋಕಸಭೆಯ ಸದಸ್ಯರ ಸಂಖ್ಯೆ 850ಕ್ಕೆ ಏರುವ ಸಾಧ್ಯತೆಯಿದೆ. ಆದರೆ ಇದೇ ಸಂದರ್ಭದಲ್ಲಿ ಸಂಸತ್ತಿನ ಸಾಂಸ್ಥಿಕ ಶಕ್ತಿಯನ್ನು ಒಳಗಿನಿಂದಲೇ ಕುಂದಿಸಲಾಗುತ್ತಿದೆ. ಸರ್ಕಾರವನ್ನು ಹೊಣೆಗಾರನನ್ನಾಗಿ ಮಾಡುವ ಅದರ ಅಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ. ಸದನದ ಗಾತ್ರ ಹಿಗ್ಗುತ್ತಿದೆ; ಆದರೆ ಸಂಸತ್ತು ಎಂಬ ಪ್ರಜಾಪ್ರಭುತ್ವದ ಸಂಸ್ಥೆಯ ಅಸ್ತಿತ್ವ ಮತ್ತು ಘನತೆ ದುರಂತಮಯವಾಗಿ ಕುಗ್ಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂಸ್ಕೃತದ ಗೋಡೆ ಕೆಡವಿ ಕನ್ನಡ ಕಟ್ಟಿದ ಕವಿ ಕನಕದಾಸ!

ಕೇವಲ ಭಕ್ತರಾಗಿ ಮಾತ್ರವಲ್ಲದೆ, ಅಡುಗೆಮನೆಯ ಬೀಸುವ ಕಲ್ಲಿನಿಂದ ಹಿಡಿದು ಹೊಲದ ರಾಗಿಯವರೆಗೆ ನಮ್ಮದೇ ನೆಲದ ಉದಾಹರಣೆಗಳ ಮೂಲಕ ಕನ್ನಡ ಭಾಷೆಗೆ ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಘನತೆಯನ್ನು ತಂದುಕೊಟ್ಟ ಮಹಾನ್ ಕ್ರಾಂತಿಕಾರಿ ಕವಿ ಕನಕದಾಸರು. ಭಾಷೆಯೊಂದು...

ಕೊರೆಯುವ ಚಳಿಯಲ್ಲೂ ಮೊಳಗಿದ ಗುಲಾಬಿ ಧ್ವನಿ, ಆಶಾ ಕಾರ್ಯಕರ್ತೆಯರ...

ಒಂದೆಡೆ ಭೋರ್ಗರೆಯುವ ಮಳೆ, ಮತ್ತೊಂದೆಡೆ ಮೈಕೊರೆಯುವ ಚಳಿ. ಪ್ರಕೃತಿಯ ಈ ಪ್ರತಿಕೂಲ ಪರಿಸ್ಥಿತಿಯನ್ನೂ ಲೆಕ್ಕಿಸದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಗುಲಾಬಿ ಸೀರೆಧಾರಿ ಮಹಿಳೆಯರು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಅವರ ಹೋರಾಟವನ್ನು ನೋಡಿದಾಗ...

ಬಿರುಕು ಬಿಟ್ಟಿದ್ದ ‘ಕೈ’ ಕೋಟೆಗೆ ಒಗ್ಗಟ್ಟಿನ ಶಕ್ತಿ: ರಾಜಸ್ಥಾನ...

ಗೋವಿಂದ್ ಡೋಟಸರ ಮತ್ತು ಟೀಕಾರಾಮ್ ಜುಲ್ಲಿ ಅವರ ನಡುವಣ ಬಾಂಧವ್ಯ ಕೇವಲ ರಾಜಕೀಯ ಅನಿವಾರ್ಯತೆಯಲ್ಲ; ಅದು ಪರಸ್ಪರ ನಂಬಿಕೆ ಮತ್ತು ಪೂರಕ ಸಾಮರ್ಥ್ಯಗಳ ಸಮ್ಮಿಲನವಾಗಿದೆ. ಡೋಟಸರ ಅವರಲ್ಲಿರುವ ಆಕ್ರಮಣಕಾರಿ ಸಂಘಟನಾ ಶೈಲಿ, ಪ್ರಖರ...

ಈ ಮಸೂದೆ ಸಂಸತ್ತಿಗೆ ಬಂದ ರೀತಿಯನ್ನೇ ಗಮನಿಸಿ. ಚಳಿಗಾಲದ ಅಧಿವೇಶನ ಯಾವಾಗ ನಡೆಯಲಿದೆ, ವಿಶೇಷ ಅಧಿವೇಶನ ನಡೆಯಲಿದೆಯೇ ಎಂಬ ಬಗ್ಗೆ ದೇಶವನ್ನು ಹಲವು ದಿನಗಳ ಕಾಲ ಗೊಂದಲದಲ್ಲಿಡಲಾಯಿತು. ಇದೇ ವೇಳೆ ಮುಂಗಾರು ಅಧಿವೇಶನವನ್ನು ದಾಖಲೆ ಪ್ರಮಾಣದ 103 ದಿನಗಳವರೆಗೆ ಅಧಿಕೃತವಾಗಿ ಮುಕ್ತಾಯಗೊಳಿಸದೆ ಇರಿಸಲಾಯಿತು. ಸರ್ವಪಕ್ಷಗಳ ಸಭೆಯನ್ನು ಕರೆಯದೆ ನಿರ್ಲಕ್ಷಿಸಲಾಯಿತು. ಕೊನೆಗೆ, ‘ಅಗತ್ಯ ಸರ್ಕಾರಿ ಕಾರ್ಯಕಲಾಪಗಳಿಗಾಗಿ’ ವಿಶೇಷ ಅಧಿವೇಶನ ನಡೆಸಲಾಗುವುದು ಎಂಬುದನ್ನು ಒಂದು ಟ್ವೀಟ್ ಮೂಲಕ ಪ್ರಕಟಿಸಲಾಯಿತು.

ಆ ಅಗತ್ಯ ಕಾರ್ಯಕಲಾಪಗಳು ಯಾವುವೆಂದರೆ, ಸಂವಿಧಾನದ 131ನೇ ತಿದ್ದುಪಡಿ ಮಸೂದೆ, ಕ್ಷೇತ್ರ ಮರುವಿಂಗಡಣೆ ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ. ಕಳೆದ ಏಪ್ರಿಲ್‌ನಲ್ಲಿ ಸೋಲು ಕಂಡಿದ್ದ ಅದೇ ಮೂರು ಮಸೂದೆಗಳ ಶಾಸನಾತ್ಮಕ ಪ್ಯಾಕೇಜ್ ಈಗ ಮತ್ತೆ ಸಂಸತ್ತಿನ ಮುಂದೆ ಬಂದಿದೆ.

ಇದನ್ನು ಓದಿದ್ದೀರಾ?: ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಬೆಂಬಲಿಸಿದ ಎನ್‌ಸಿಪಿ (ಎಸ್‌ಪಿ) ವಿರುದ್ಧ ಕಾಂಗ್ರೆಸ್ ಆಕ್ರೋಶ

ಈ ಲೇಖನ ಬರೆಯುತ್ತಿರುವ ಹೊತ್ತಿಗೂ ಈ ಮಸೂದೆಗಳ ಒಂದೇ ಒಂದು ಪ್ರತಿಯನ್ನು ರಾಜಕೀಯ ಪಕ್ಷಗಳಿಗಾಗಲಿ, ಸಾರ್ವಜನಿಕರಿಗಾಗಲಿ ಹಂಚಿಲ್ಲ. ಆದರೆ, ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದೇ ಈ ಮಸೂದೆಯ ಉದ್ದೇಶ ಎಂದು ಹೇಳಲಾಗುತ್ತಿದೆ.

womens bill1

ಇದು ಎಂತಹ ವಿಪರ್ಯಾಸ! ಸಂಸತ್ತಿನಲ್ಲಿ ಮಹಿಳೆಯರಿಗೆ ಧ್ವನಿ ನೀಡುತ್ತೇವೆ ಎಂದು ಪ್ರಚಾರ ಮಾಡುತ್ತಿರುವ ಮಸೂದೆಯನ್ನು ಸಂಸತ್ತಿಗೇ ತನ್ನ ಧ್ವನಿ ಎತ್ತಲು ಅವಕಾಶ ನೀಡದೆ ಜಾರಿಗೊಳಿಸಲು ಹೊರಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಹಿಳೆಯರ ಮೀಸಲಾತಿಯನ್ನು ಜಾರಿಗೆ ತರದೆ ಕಾಯಿಸುತ್ತಾ ಬಂದಿರುವ ಮೋದಿ-ಅಮಿತ್ ಶಾ ನೇತೃತ್ವದ ಸರ್ಕಾರ ಈಗ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ವಿಚಾರದಲ್ಲಿ ದಿಢೀರನೆ ಅತಿಯಾದ ಆತುರ ತೋರುತ್ತಿದೆ.

ಆದರೆ ಮಹಿಳಾ ಮೀಸಲಾತಿ ಈಗಾಗಲೇ ದೇಶದ ಕಾನೂನಾಗಿದೆ. ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು 2023ರ ಸೆಪ್ಟೆಂಬರ್‍‌ನಲ್ಲಿ ಬಹುತೇಕ ಸರ್ವಾನುಮತದಿಂದ ಸಂಸತ್ತು ಅಂಗೀಕರಿಸಿತ್ತು. ಎಲ್ಲ ರಾಜಕೀಯ ಪಕ್ಷಗಳೂ ಅದನ್ನು ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದವು. ಆದರೆ, ಆ ಕಾನೂನನ್ನು ಸರ್ಕಾರ ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟಿತ್ತು. ಕೊನೆಗೆ 2026ರ ಏಪ್ರಿಲ್ 16ರ ತಡರಾತ್ರಿ ದಿಢೀರನೆ ಅಧಿಸೂಚನೆ ಹೊರಡಿಸಲಾಯಿತು.

ಹೀಗಾಗಿ, ಈ ವಿಶೇಷ ಅಧಿವೇಶನ ಮಹಿಳೆಯರಿಗಾಗಿ ಅಲ್ಲ. ಇದು ಕ್ಷೇತ್ರ ಮರುವಿಂಗಡಣೆಗಾಗಿ.

ಮೋದಿ ಸರ್ಕಾರ ಈ ಎರಡೂ ವಿಷಯಗಳನ್ನು ಏಕೆ ಬೆಸೆದು ನೋಡುತ್ತಿದೆ? ಈಗಿರುವ 543 ಸದಸ್ಯರ ಲೋಕಸಭೆಯಲ್ಲೇ, ಪ್ರಸ್ತುತ ಕ್ಷೇತ್ರಗಳಲ್ಲೇ ಮುಂದಿನ ಸಾರ್ವತ್ರಿಕ ಚುನಾವಣೆಯಿಂದ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಸಾಧ್ಯವಿದೆ. ಆದರೆ ಸರ್ಕಾರದ ಲೆಕ್ಕಾಚಾರ ಅತ್ಯಂತ ಸಂಕುಚಿತ ಮತ್ತು ಸಿನಿಕತನದಿಂದ ಕೂಡಿದೆ. ಮಹಿಳಾ ಮೀಸಲಾತಿಯನ್ನು ಯಾರೂ ವಿರೋಧಿಸಲು ಧೈರ್ಯ ಮಾಡುವುದಿಲ್ಲ ಎಂಬುದು ಸರ್ಕಾರದ ಲೆಕ್ಕವಾಗಿದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆಯ ಪ್ರಸ್ತಾವನೆಯನ್ನು ಮಹಿಳಾ ಮೀಸಲಾತಿಯ ಸೆರಗಿಗೆ ಗಂಟುಹಾಕುವ ಪ್ರಯತ್ನ ನಡೆದಿದೆ.

ಇಲ್ಲಿ ಸೀರೆ ಕೇವಲ ಹೊರಗಿನ ಅಲಂಕಾರ. ಮರುರೂಪಿಸಲಾಗುತ್ತಿರುವ ಚುನಾವಣಾ ನಕ್ಷೆಯೇ ನಿಜವಾದ ಉತ್ಪನ್ನ. ಮಹಿಳೆಯರನ್ನು ಸಮಾನ ಹಕ್ಕುಗಳ ಪಾಲುದಾರರನ್ನಾಗಿ ಸಬಲೀಕರಣಗೊಳಿಸುವ ಬದಲು, ಸರ್ಕಾರ ತನ್ನ ರಾಜಕೀಯ ಉದ್ದೇಶಗಳಿಗೆ ರಕ್ಷಾಕವಚವನ್ನಾಗಿ ಬಳಸಿಕೊಳ್ಳುತ್ತಿದೆ. ಲಿಂಗ ಸಮಾನತೆಯ ಬಗ್ಗೆ ಬಿಜೆಪಿ-ಆರೆಸ್ಸೆಸ್ ಹೊಂದಿರುವ ಧೋರಣೆಯನ್ನು ಗಮನಿಸಿದರೆ ಇದರಲ್ಲಿ ಅಚ್ಚರಿಯೇನಿಲ್ಲ.

ಒಮ್ಮೆ ಸಂಖ್ಯೆಗಳ ಲೆಕ್ಕಾಚಾರವನ್ನು ಗಮನಿಸಿ. 543 ಸದಸ್ಯರ ಲೋಕಸಭೆಯಲ್ಲಿ 181 ಮಹಿಳೆಯರು ಮತ್ತು 362 ಪುರುಷರು ಇರಲಿದ್ದಾರೆ. ಆದರೆ 850 ಸದಸ್ಯರ ಲೋಕಸಭೆಯಲ್ಲಿ 283 ಮಹಿಳೆಯರು ಮತ್ತು 567 ಪುರುಷರು ಇರಲಿದ್ದಾರೆ. ಅಂದರೆ, ಇಂದಿನ ಇಡೀ ಲೋಕಸಭೆಯ ಸದಸ್ಯರ ಸಂಖ್ಯೆಗಿಂತಲೂ ಹೆಚ್ಚಿನ ಪುರುಷ ಸದಸ್ಯರು ಹೊಸ ಸದನದಲ್ಲಿ ಇರಲಿದ್ದಾರೆ. ಒಬ್ಬ ಪುರುಷ ಸದಸ್ಯ ಕೂಡ ತನ್ನ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ.

ಇದನ್ನು ಓದಿದ್ದೀರಾ?: 2051ರವರೆಗೆ ರಾಜ್ಯಗಳ ಲೋಕಸಭಾ ಸ್ಥಾನ ಪಾಲು ಸ್ಥಗಿತಗೊಳಿಸಲು ಕೇಂದ್ರ ಪ್ರಸ್ತಾವ

ಇದು ಅಧಿಕಾರ ಹಂಚಿಕೆಯಲ್ಲಿ ತರುವ ನಿಜವಾದ ಪರಿವರ್ತನೆಯಲ್ಲ. ಮುಖ್ಯ ರೈಲು ಎಂದಿನಂತೆ ಸಾಗುತ್ತಿರುವಾಗ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಯೊಂದನ್ನು ಅಥವಾ ‘ರಾಣಿ ಡಬ್ಬಿ’ಯನ್ನು ದೊಡ್ಡದಾಗಿಸಿದಂತಷ್ಟೇ!

ದೊಡ್ಡ ಸಂಸತ್ತು ಎಂದಮಾತ್ರಕ್ಕೆ ಅದು ಬಲಿಷ್ಠ ಸಂಸತ್ತಾಗುವುದಿಲ್ಲ. ಮೋದಿ ಮತ್ತು ಅಮಿತ್ ಶಾ ಸಂಸತ್ತನ್ನು ಕೇವಲ ನೋಟಿಸ್ ಬೋರ್ಡ್‌ನ ಮಟ್ಟಕ್ಕೆ ಇಳಿಸಿದ್ದಾರೆ. ಮಸೂದೆಗಳನ್ನು ಚರ್ಚೆಯಿಲ್ಲದೆ ಬಲವಂತವಾಗಿ ಅಂಗೀಕರಿಸಲಾಗುತ್ತಿದೆ. ಅಧಿವೇಶನಗಳನ್ನು ಅವಧಿಗೂ ಮುನ್ನವೇ ಮೊಟಕುಗೊಳಿಸಲಾಗುತ್ತಿದೆ.

850 ಸಂಸದರನ್ನು ಕೆಲವೇ ದಿನಗಳ ಅಧಿವೇಶನಗಳಲ್ಲಿ ಕೂರಿಸಿದರೆ, ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವರಿಗೆ ಯಾವಾಗ ಅವಕಾಶ ಸಿಗುತ್ತದೆ?

womens bill2

ವರ್ಷಕ್ಕೆ ಕನಿಷ್ಠ 120 ದಿನಗಳ ಕಾಲ ಸಂಸತ್ತು ಕಾರ್ಯನಿರ್ವಹಿಸುವುದನ್ನು ಸರ್ಕಾರ ಖಾತರಿಪಡಿಸುತ್ತದೆಯೇ? ಪ್ರಧಾನಮಂತ್ರಿಗಳು ಸದನಕ್ಕೆ ಬಂದು ಪ್ರಶ್ನೆಗಳಿಗೆ ಉತ್ತರಿಸುತ್ತಾರೆಯೇ? ಪ್ರತಿ ಚಳಿಗಾಲದಲ್ಲಿ ಉತ್ತರ ಭಾರತವನ್ನು ಉಸಿರುಗಟ್ಟಿಸುವ, ನಮ್ಮ ಮಕ್ಕಳ ಆಯುಷ್ಯವನ್ನೇ ಕಡಿಮೆ ಮಾಡುತ್ತಿರುವ ವಾಯುಮಾಲಿನ್ಯದಂತಹ ಜನಸಾಮಾನ್ಯರ ಸಮಸ್ಯೆಗಳ ಕುರಿತು ಸರ್ಕಾರದಿಂದ ಉತ್ತರ ಕೇಳುವ ಅವಕಾಶ ಸಂಸತ್ತಿಗೆ ಸಿಗುತ್ತದೆಯೇ?

ಸರ್ಕಾರದ ಇದುವರೆಗಿನ ದಾಖಲೆಯನ್ನು ಗಮನಿಸಿದರೆ, ಈ ಪ್ರಶ್ನೆಗಳಿಗೆ ಉತ್ತರ ‘ಇಲ್ಲ’ ಎಂದೇ ಹೇಳಬೇಕಾಗುತ್ತದೆ.

ಇದರ ವೆಚ್ಚವನ್ನು ಭರಿಸಬೇಕಾದವರು ದೇಶದ ನಾಗರಿಕರು ಮತ್ತು ತೆರಿಗೆದಾರರು. ಕೆಲವು ಅಂದಾಜುಗಳ ಪ್ರಕಾರ, ಹೆಚ್ಚುವರಿಯಾಗಿ ಸೇರ್ಪಡೆಯಾಗುವ 307 ಸಂಸದರಿಂದ ವಾರ್ಷಿಕವಾಗಿ 1,300 ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗಲಿದೆ. ಒಂದು ಲೋಕಸಭೆಯ ಐದು ವರ್ಷಗಳ ಅವಧಿಯಲ್ಲಿ ಈ ವೆಚ್ಚ 6,500 ಕೋಟಿ ರೂಪಾಯಿಗಳನ್ನು ಮೀರುತ್ತದೆ.

ಅಂದರೆ, ಜನರಿಗಾಗಿ ಕೆಲಸ ಮಾಡಲು ಅವಕಾಶವಿಲ್ಲದ ಸಂಸತ್ತಿಗಾಗಿ ಜನರು ಇನ್ನಷ್ಟು ಹಣ ತೆರಬೇಕಾಗುತ್ತದೆ.

ಇದರ ಜೊತೆಗೆ ಚುನಾವಣಾ ಕ್ಷೇತ್ರಗಳ ನಕ್ಷೆಯನ್ನು ರೂಪಿಸುವವರು ಯಾರು ಎಂಬ ಪ್ರಶ್ನೆಯೂ ಇದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಮೋದಿ ಸರ್ಕಾರದ ಆಡಳಿತದ ಸಹಜ ಪ್ರವೃತ್ತಿಯಾಗಿದೆ. ಕ್ಷೇತ್ರ ಮರುವಿಂಗಡಣೆ ಆಯೋಗವೂ ಇದಕ್ಕೆ ಹೊರತಾಗುವುದಿಲ್ಲ.

ಈ ಮಸೂದೆಯ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರು ಅಥವಾ ಅವರಿಂದ ನಾಮನಿರ್ದೇಶನಗೊಂಡವರು ಕ್ಷೇತ್ರ ಮರುವಿಂಗಡಣೆ ಆಯೋಗದ ಸದಸ್ಯರಾಗಿರುತ್ತಾರೆ. ಅಂದರೆ, ಚುನಾವಣಾ ಪಟ್ಟಿಗಳ ವಿಶ್ವಾಸಾರ್ಹತೆಯೇ ಗಂಭೀರವಾಗಿ ಪ್ರಶ್ನೆಗೊಳಗಾಗಿರುವ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿರುವ ಗ್ಯಾನೇಶ್ ಕುಮಾರ್ ಅವರು ಈ ಪ್ರಕ್ರಿಯೆಯಲ್ಲಿ ಪಾತ್ರ ವಹಿಸಲಿದ್ದಾರೆ. ಬೃಹತ್ ಪ್ರಮಾಣದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸುತ್ತಿರುವ ಒಗ್ಗಟ್ಟಿನ ಪ್ರತಿಪಕ್ಷಗಳು, ಇದಕ್ಕೆ ಚುನಾವಣಾ ಆಯೋಗವನ್ನೇ ಹೊಣೆಗಾರನನ್ನಾಗಿ ಮಾಡಿವೆ.

ತಟಸ್ಥ ಮತ್ತು ನಿಷ್ಪಕ್ಷಪಾತ ಆಯೋಗ ರಚನೆಯಾಗುವ ಸಾಧ್ಯತೆಯೇ ಇಲ್ಲಿ ಕಾಣಿಸುತ್ತಿಲ್ಲ. ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬ ಆರೋಪ ಎದುರಿಸುತ್ತಿರುವ ಅದೇ ವ್ಯವಸ್ಥೆಯ ಕೈಯಲ್ಲಿ ಈಗ ದೇಶದ ಪ್ರತಿಯೊಂದು ಚುನಾವಣಾ ಕ್ಷೇತ್ರದ ನಕ್ಷೆಯನ್ನು ಮರುರೂಪಿಸುವ ಹೊಣೆಗಾರಿಕೆ ನೀಡಲಾಗುತ್ತಿದೆ.
ಹಾಗಾದರೆ ಹೊಸ ಚುನಾವಣಾ ನಕ್ಷೆ ಯಾರ ಹಿತಾಸಕ್ತಿಗೆ ಅನುಕೂಲವಾಗಲಿದೆ ಎಂಬ ಬಗ್ಗೆ ಅನುಮಾನಕ್ಕೆ ಅವಕಾಶವಿದೆಯೇ? ಇದು ಯಾವುದೇ ಬೆಲೆ ತೆತ್ತಾದರೂ ಬಿಜೆಪಿಯನ್ನು ಗೆಲ್ಲಿಸುವ ಉದ್ದೇಶದ ಮಸೂದೆ ಎನಿಸುವುದಿಲ್ಲವೇ?

ಅಷ್ಟಕ್ಕೂ ಇಷ್ಟೊಂದು ಆತುರ ಏಕೆ?

ಸಂವಿಧಾನದ ಪ್ರಕಾರ, 2026ರ ನಂತರ ನಡೆಯುವ ಮೊದಲ ಜನಗಣತಿಯವರೆಗೆ ಲೋಕಸಭೆ ಮತ್ತು ವಿಧಾನಸಭೆಗಳ ಕ್ಷೇತ್ರಗಳ ಸಂಖ್ಯೆಯನ್ನು ಸ್ಥಗಿತಗೊಳಿಸಲಾಗಿದೆ. 2027ರ ಜನಗಣತಿಯ ನಂತರ ಕ್ಷೇತ್ರ ಮರುವಿಂಗಡಣೆ ನಡೆಯಬೇಕಿತ್ತು. ಹೊಸ ಜನಗಣತಿಯ ಅಂಕಿಅಂಶಗಳು ಶೀಘ್ರದಲ್ಲೇ ಲಭ್ಯವಾಗಲಿವೆ. ಹೀಗಿರುವಾಗ ಹೊಸ ಕ್ಷೇತ್ರಗಳ ಜಾರಿಗೆ ವಾಸ್ತವಿಕವಾಗಿ 2034ರವರೆಗೆ ಕಾಯಬಹುದಿತ್ತು.

ಆದರೆ ಸರ್ಕಾರಕ್ಕೆ ಅದಕ್ಕಾಗಿ ಕಾಯುವ ತಾಳ್ಮೆಯಿಲ್ಲ. ಕ್ಷೇತ್ರಗಳ ಸಂಖ್ಯೆಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿ, 15 ವರ್ಷಗಳಷ್ಟು ಹಳೆಯದಾದ 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುರೂಪಿಸಲು ಸರ್ಕಾರ ಬಯಸುತ್ತಿದೆ. ಏಕೆ? ಏಕೆಂದರೆ, 2029ರ ಲೋಕಸಭಾ ಚುನಾವಣೆಗೆ ಮುನ್ನವೇ ಹೊಸ ಚುನಾವಣಾ ನಕ್ಷೆಯನ್ನು ಸಿದ್ಧಪಡಿಸಿಕೊಳ್ಳಲು!

ಕಳೆದ ಏಪ್ರಿಲ್‌ನಲ್ಲಿ ಈ ಮಸೂದೆಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ದೊರೆಯದೆ ಸೋಲು ಕಂಡಿತ್ತು. ಈಗ ಏನು ಬದಲಾಗಿದೆ? ಬದಲಾಗಿರುವುದು ಕೇವಲ ಸಂಖ್ಯೆಗಳು. ಅವುಗಳನ್ನು ತೆರೆಮರೆಯ ರಾಜಕೀಯ ವ್ಯವಹಾರಗಳ ಮೂಲಕ ಮರುಹೊಂದಿಸಲಾಗಿದೆ.

ಇದನ್ನು ಓದಿದ್ದೀರಾ?: ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ವೈಎಸ್‌ಆರ್‌ಸಿಪಿ ಷರತ್ತುಬದ್ಧ ಬೆಂಬಲ: ಎಲ್ಲಾ ರಾಜ್ಯಗಳಲ್ಲೂ ಶೇ.50ರಷ್ಟು ಸ್ಥಾನ ಹೆಚ್ಚಳಕ್ಕೆ ಬೇಡಿಕೆ

ಏಪ್ರಿಲ್‌ನಿಂದೀಚೆಗೆ ರಾಜಕೀಯ ಪಕ್ಷಗಳನ್ನು ಒಡೆಯಲಾಗಿದೆ, ಒತ್ತಡಕ್ಕೆ ಒಳಪಡಿಸಲಾಗಿದೆ ಮತ್ತು ಬಲವಂತದ ರಾಜಕೀಯಕ್ಕೆ ಗುರಿಪಡಿಸಲಾಗಿದೆ. ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರು ಲೋಕಸಭೆಯಲ್ಲಿ ಈ ಮಸೂದೆಯ ಪರವಾಗಿ ಮತ ಚಲಾಯಿಸಲಿದ್ದಾರೆ. ಆದರೆ ಅವರ ವಿರುದ್ಧದ ಅನರ್ಹತೆ ಅರ್ಜಿಗಳು ಇನ್ನೂ ಬಾಕಿ ಇವೆ. ಕಳೆದ ಆರು ತಿಂಗಳಿನಿಂದ ಲೋಕಸಭಾಧ್ಯಕ್ಷರು ಈ ಅರ್ಜಿಗಳ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಪಕ್ಷಾಂತರ ಮಾಡಿದ ಈ 20 ಸಂಸದರು ಚಲಾಯಿಸುವ ಮತಗಳು ಕಾನೂನುಬದ್ಧವೇ? ಅವರ ಸದಸ್ಯತ್ವದ ಸ್ಥಾನಮಾನವೇ ಇನ್ನೂ ನಿರ್ಧಾರವಾಗದಿರುವಾಗ, ಅವರ ಮತಗಳ ಆಧಾರದ ಮೇಲೆ ಅಂಗೀಕಾರವಾಗುವ ಸಂವಿಧಾನ ತಿದ್ದುಪಡಿಯನ್ನೇ ನ್ಯಾಯಾಲಯದಲ್ಲಿ ಪ್ರಶ್ನಿಸಿ ರದ್ದುಪಡಿಸಲು ಸಾಧ್ಯವಿಲ್ಲವೇ?

ಇದು ದೇಶದ ಪ್ರಜಾಪ್ರಭುತ್ವದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಶಾಸನ. ಆದರೂ, ಇದರ ಬಗ್ಗೆ ಯಾವುದೇ ವ್ಯಾಪಕ ಸಮಾಲೋಚನೆ ನಡೆದಿಲ್ಲ. ಸಾರ್ವಜನಿಕ ಚರ್ಚೆಗೂ ಅವಕಾಶ ನೀಡಿಲ್ಲ.

womens bill3

ಇಂತಹ ಸರ್ವಾಧಿಕಾರಿ ಧೋರಣೆಯ ಪರಿಣಾಮ ಏನಾಗುತ್ತದೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. 2020ರ ಕೃಷಿ ಕಾಯ್ದೆಗಳನ್ನು ಯಾವುದೇ ಮುಕ್ತ ಸಂವಾದವಿಲ್ಲದೆ ಸಂಸತ್ತಿನಲ್ಲಿ ಬಲವಂತವಾಗಿ ಅಂಗೀಕರಿಸಲಾಯಿತು. ಕೊನೆಗೆ ರೈತರ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆಯಬೇಕಾಯಿತು.

‘ನಾರಿ ಶಕ್ತಿ’ ಎಂಬ ಘೋಷಣೆಗಳನ್ನು ಎಷ್ಟು ಜೋರಾಗಿ ಕೂಗಿದರೂ ಸರ್ಕಾರ ಸೃಷ್ಟಿಸಿರುವ ವಿಶ್ವಾಸದ ಕೊರತೆಯನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ವಿಶ್ವಾಸವನ್ನು ಗಳಿಸಿಕೊಳ್ಳಬೇಕೇ ಹೊರತು, ಅದನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ.

ಸರ್ಕಾರಕ್ಕೆ ನಿಜವಾಗಿಯೂ ಪ್ರಾಮಾಣಿಕ ಉದ್ದೇಶವಿದ್ದರೆ, ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (JPC) ಒಪ್ಪಿಸಬೇಕು. ಈಗಿರುವ 543 ಸದಸ್ಯರ ಲೋಕಸಭೆಯಲ್ಲೇ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕು.

ಅಲ್ಲಿಯವರೆಗೆ ದೇಶದ ನಾಗರಿಕರಿಗೆ ಒಂದು ಪ್ರಶ್ನೆ ಕೇಳುವ ಎಲ್ಲ ಹಕ್ಕುಗಳೂ ಇವೆ: ಮೋದಿ ಸರ್ಕಾರವನ್ನು ನಂಬುವುದಾದರೂ ಏಕೆ?

ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್, ಮೂಲ: ಸಾಗರಿಕಾ ಘೋಷ್, ಕನ್ನಡಕ್ಕೆ: ಬಸವರಾಜು ಮೇಗಲಕೇರಿ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೆಯುವ ಚಳಿಯಲ್ಲೂ ಮೊಳಗಿದ ಗುಲಾಬಿ ಧ್ವನಿ, ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಗೌರವ ಯಾವಾಗ?

ಒಂದೆಡೆ ಭೋರ್ಗರೆಯುವ ಮಳೆ, ಮತ್ತೊಂದೆಡೆ ಮೈಕೊರೆಯುವ ಚಳಿ. ಪ್ರಕೃತಿಯ ಈ ಪ್ರತಿಕೂಲ...

ತಮಿಳುನಾಡು | ಮಹಿಳಾ ಜಿಲ್ಲಾಧಿಕಾರಿಗೆ ಲೈಂಗಿಕ ಕಿರುಕುಳ ಆರೋಪ: ಟಿವಿಕೆ ಶಾಸಕ ಅರುಳ್ ವಿಘ್ನೇಶ್ ಬಂಧನ

ಮಹಿಳಾ ಜಿಲ್ಲಾಧಿಕಾರಿಗೆ (ಐಎಎಸ್ ಅಧಿಕಾರಿ) ಲೈಂಗಿಕ ಕಿರುಕುಳ ನೀಡಿದ ಮತ್ತು ಅನುಚಿತವಾಗಿ...

ಮೈಶುಗರ್ ಬೆಳೆವಣಿಗೆ ಸಹಿಸಲಾಗುತ್ತಿಲ್ಲ : ನಿರಾಣಿ ವಿರುದ್ಧ ಸಿ.ಡಿ.ಗಂಗಾಧರ್ ವಾಗ್ದಾಳಿ

ಮೈಸೂರು ಸಕ್ಕರೆ ಕಾರ್ಖಾನೆಯ ಯಶಸ್ಸು ಕೆಲವರಿಗೆ ಆತಂಕ ಉಂಟುಮಾಡಿದ್ದು, ಕಾರ್ಖಾನೆಯ ಬಗ್ಗೆ...