ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಿರುವ ಪ್ರತಿಭಟನೆಯನ್ನು ತಡೆಯಲು ದೆಹಲಿಯ 57ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲು ಮತ್ತು ರಸ್ತೆ ಸಂಚಾರಕ್ಕೆ ಕಠಿಣ ನಿಯಂತ್ರಣ ಹೇರಲು ಮುಂದಾಗಿದ್ದ ದೆಹಲಿ ಪೊಲೀಸ್ ಹಾಗೂ ಕೇಂದ್ರದ ಮೋದಿ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ.
“ಸಣ್ಣ ವಿಷಯಕ್ಕೆ ಅತಿಯಾದ ಅಥವಾ ಕಠಿಣ ಕ್ರಮ ಕೈಗೊಳ್ಳಬಾರದು. ‘ನೊಣ ಕೊಲ್ಲಲು ಸುತ್ತಿಗೆಯನ್ನು ಬಳಸಬಾರದು’ (Don’t use a hammer to kill a fly)” ಎಂದು ಸುಪ್ರೀಂ ಕೋರ್ಟ್ ಈ ಸಂದರ್ಭದಲ್ಲಿ ಮಾರ್ಮಿಕವಾಗಿ ಹೇಳಿದೆ.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಪಿಐಎಂ ಸಂಸದ ಎಂ ಎ ಬೇಬಿ
“ಪ್ರತಿಯೊಬ್ಬರ ಬಳಿಯೂ ಸ್ವಂತ ಕಾರುಗಳಿರುವುದಿಲ್ಲ. ಪ್ರತಿದಿನ ಲಕ್ಷಾಂತರ ಸಾರ್ವಜನಿಕರು, ಉದ್ಯೋಗಿಗಳು ಸಂಚಾರಕ್ಕೆ ದೆಹಲಿ ಮೆಟ್ರೋವನ್ನೇ ನಂಬಿಕೊಂಡಿದ್ದಾರೆ. ಪ್ರತಿಭಟನೆಯ ನೆಪದಲ್ಲಿ ಇಡೀ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸ್ತಬ್ಧಗೊಳಿಸುವುದು ಸರಿಯಲ್ಲ” ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
ಮೆಟ್ರೋ ನಿಲ್ದಾಣಗಳ ಮುಚ್ಚುವಿಕೆ ಹಾಗೂ ರೈಲುಗಳ ಸಂಚಾರ ರದ್ದತಿಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ದೆಹಲಿ ಪೊಲೀಸರು ತಕ್ಷಣವೇ ಈ ಕಠಿಣ ನಿರ್ಬಂಧಗಳನ್ನು ಮರುಪರಿಶೀಲಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಈ ಸಂದರ್ಭದಲ್ಲೇ ಜಂತರ್ ಮಂತರ್ ನಿಗದಿತ ಪ್ರತಿಭಟನಾ ಸ್ಥಳವಾಗಿದ್ದರೂ, ಕಾನೂನು ಮತ್ತು ನಿಯಮಾನುಸಾರವೇ ಪ್ರತಿಭಟನೆಗಳು ನಡೆಯಬೇಕು ಎಂದು ತಿಳಿಸಿದ ನ್ಯಾಯಪೀಠ, ಪ್ರತಿಭಟನೆಗಳ ನಿಯಂತ್ರಣದ ಹೆಸರಿನಲ್ಲಿ ಜನಸಾಮಾನ್ಯರ ದೈನಂದಿನ ಜೀವನಕ್ಕೆ ಧಕ್ಕೆ ತರುವುದು ಸಮಂಜಸವಲ್ಲ ಎಂದು ಪ್ರತಿಪಾದಿಸಿದೆ.




