ಅಕ್ಟೋಬರ್ 10ರಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ವಿವಿಧ ಪ್ರತಿಪಕ್ಷಗಳು ಹಮ್ಮಿಕೊಂಡಿರುವ ಶಾಂತಿಯುತ ಪ್ರತಿಭಟನೆಯನ್ನು ತಡೆಯಲು ರಾಜಧಾನಿ ದೆಹಲಿಯಲ್ಲಿ 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚುವುದು ಮತ್ತು ಸುದೀರ್ಘ ದೂರದ ರೈಲುಗಳನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಿಪಿಐಎಂ ಸಂಸದ ಎಂ ಎ ಬೇಬಿ ತುರ್ತು ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಹಿರಿಯ ವಕೀಲ ಕಪಿಲ್ ಸಿಬಲ್, ಪ್ರಶಾಂತ್ ಭೂಷಣ್ ಮತ್ತು ಗೋಪಾಲ್ ಶಂಕರನಾರಾಯಣನ್ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
ಇದನ್ನೂ ಓದಿ: ದೆಹಲಿ ಮೆಟ್ರೋಗೆ ಪೊಲೀಸ್ ಇಲಾಖೆ ಪತ್ರ: 57 ಸ್ಟೇಷನ್‌ಗಳ ಪ್ರವೇಶ-ನಿರ್ಗಮನ ದ್ವಾರ ಮುಚ್ಚಲು ಮನವಿ
ಸಂಸದ ಎಂ.ಎ. ಬೇಬಿ ಅವರ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್, “ದೆಹಲಿಯಲ್ಲಿ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿದೆ, ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಜನಸಾಮಾನ್ಯರು ಎಲ್ಲೂ ಸಂಚರಿಸದಂತೆ ನಿರ್ಬಂಧಿಸಲಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ದೇಶದ ಪ್ರಜೆಗಳ ಹಕ್ಕು. ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದರೂ ಸೋಮವಾರಕ್ಕೆ ವಿಚಾರಣೆ ಮುಂದೂಡಿದ್ದರಿಂದ ಇಲ್ಲಿಗೆ ಬಂದಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.
ವಕೀಲ ಗೋಪಾಲ್ ಶಂಕರನಾರಾಯಣನ್ ಮಾತನಾಡಿ, “ಸುಮಾರು 57 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದೆ. ಪ್ರತಿಭಟನೆಯನ್ನು ಎದುರಿಸಲು ಇಡೀ ನಗರವನ್ನೇ ಬಂದ್ ಮಾಡುವುದು ಮತ್ತು ಕಠಿಣ ನಿರ್ಬಂಧಗಳನ್ನು ವಿಧಿಸುವುದು ಅಸಮಾನತೆಯಿಂದ ಕೂಡಿದೆ” ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು, ಶಾಂತಿಯುತವಾಗಿ ಸಂಘಟಿತರಾಗುವುದು ಮತ್ತು ಪ್ರತಿಭಟಿಸುವುದು ಮೂಲಭೂತ ಹಕ್ಕು ಎಂಬುದರಲ್ಲಿ ಸಂಶಯವಿಲ್ಲ, ಆದರೆ ಕಾನೂನಿನ ಚೌಕಟ್ಟಿನಲ್ಲಿ ಅನುಮತಿ ಪಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಈ ವಿಷಯವಾಗಿ ಹೆಚ್ಚಿನ ವಿವರಗಳನ್ನು ಪಡೆದುಕೊಂಡು ಮಧ್ಯಾಹ್ನ 2 ಗಂಟೆ ಬಳಿಕ ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಮುಂದುವರಿಸುತ್ತಿದೆ.




