ಮೋದಿ ಸರ್ಕಾರವು ಎಥೆನಾಲ್ ಮಿಶ್ರಿತ E20 ಪೆಟ್ರೋಲ್ ಬಳಕೆಯನ್ನು ದೇಶವಾಸಿಗಳ ಮೇಲೆ ಹೇರುತ್ತಿದೆ. ಇ20 ಪೆಟ್ರೋಲ್ ಬಳಕೆಯು ವಿಶೇಷವಾಗಿ 2016ಕ್ಕೂ ಮೊದಲು ತಯಾರಿಸಲಾದ BS-III ವಾಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಆದ್ದರಿಂದ, ಅಂತಹ ವಾಹನಗಳಲ್ಲಿ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜುಲೈ 29ರಂದು ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, “2005ರ ಏಪ್ರಿಲ್ 1ರಿಂದ ಪರಿಚಯಿಸಲಾದ ಮತ್ತು 2016ಕ್ಕೂ ಮೊದಲು ತಯಾರಿಸಲಾದ BS-III ವಾಹನಗಳಲ್ಲಿ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ನಿಯಮಿತ ಸರ್ವಿಸ್ ವೇಳೆ ಬದಲಾಯಿಸುವ ಅಗತ್ಯ ಉಂಟಾಗಬಹುದು. ಇದನ್ನು ಸಾಮಾನ್ಯ ನಿರ್ವಹಣೆಯ ಭಾಗವಾಗಿ ಸುಲಭವಾಗಿ ಮಾಡಬಹುದು” ಎಂದು ಹೇಳಿದ್ದಾರೆ.
ಹಾಗೆ ನೋಡಿದರೆ, ಇ20 ಪೆಟ್ರೋಲ್‌ನಿಂದಾಗಿ, ವಾಹನಗಳ ರಬ್ಬರ್ ಸೀಲ್‌ಗಳು, ಇಂಧನ ಹೋಸ್‌ಗಳು (Fuel Hoses), ಗ್ಯಾಸ್ಕೆಟ್‌ಗಳು, ಓ-ರಿಂಗ್‌ಗಳು, ಇಂಧನ ಪೈಪ್‌ಗಳು ಹಾಗೂ ಫ್ಯುಯೆಲ್ ಪಂಪ್‌ನ ಕೆಲವು ಭಾಗಗಳನ್ನು ಕಡ್ಡಾಯವಾಗಿ ಬದಲಿಸಬೇಕಾದ ಅನಿವಾರ್ಯತೆ ಇದೆ.
2021ರಲ್ಲಿ ‘ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ (ARAI) ನಡೆಸಿದ ಅಧ್ಯಯನದಲ್ಲಿ, E20 ಪೆಟ್ರೋಲ್ ಬಳಿಕೆಯಿಂದ ಹಳೆಯ ವಾಹನಗಳ ಕೆಲವು ಭಾಗಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ.
ಅಧ್ಯಯನದ ಪ್ರಕಾರ; ಕೆಲವು ರಬ್ಬರ್ ಭಾಗಗಳು ಹೆಚ್ಚು ಗಟ್ಟಿಯಾಗುತ್ತವೆ. ಅವುಗಳ ಬಲ ಮತ್ತು ನಮ್ಯತೆ (Flexibility) ಕಡಿಮೆಯಾಗುತ್ತದೆ. ಕೆಲವು ವಸ್ತುಗಳು ಉಬ್ಬಿಕೊಳ್ಳುವ (Swelling) ಸಾಧ್ಯತೆ ಇದೆ. ವಿಶೇಷವಾಗಿ BS-III ವಾಹನಗಳಲ್ಲಿ ಈ ಪರಿಣಾಮ ಹೆಚ್ಚು ಕಂಡುಬಂದಿದೆ.
ಅಧ್ಯಯನವು ಮತ್ತೊಂದು ವಿಷಯದ ಮೇಲೆ ಗಮನ ಸೆಳೆದಿದೆ. ಇಂಧನ ವ್ಯವಸ್ಥೆಯಲ್ಲಿ ಬಳಸುವ ‘ಪಾಲಿ ಬ್ಯುಟಿಲೀನ್ ಟೆರೆಫ್ಥಲೇಟ್’ (PBT) ವಸ್ತುವಿನ ಎಳೆಯುವ ಸಾಮರ್ಥ್ಯ ಕೂಡ E20 ಬಳಕೆಯಿಂದ ಹೆಚ್ಚು ಕುಸಿದಿದೆ. ಅದೇ ವೇಳೆ Polyamide 66 (PA66) ವಸ್ತು ಕೂಡ E20 ಪೆಟ್ರೋಲ್ ಬಳಿಕೆಯಿಂದಾಗಿ ಹೆಚ್ಚು ಇಂಧನವನ್ನು ಹೀರಿಕೊಂಡು ಗಾತ್ರದಲ್ಲಿ ಉಬ್ಬಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಇದರಿಂದ ಏನು ಸಮಸ್ಯೆ?
ತಜ್ಞರ ಪ್ರಕಾರ ಈ ಬದಲಾವಣೆಗಳು ವಾಹನದ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಖ್ಯವಾಗಿ;
* ರಬ್ಬರ್ ಭಾಗಗಳು ಗಟ್ಟಿಯಾಗಿ ಬಿರುಕು ಬಿಡುವ ಸಾಧ್ಯತೆ ಹೆಚ್ಚುತ್ತದೆ.
* ಶಕ್ತಿ ಕಡಿಮೆಯಾಗುವುದರಿಂದ ಯಾಂತ್ರಿಕ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ಕುಸಿಯುತ್ತದೆ.
* ನಮ್ಯತೆ (ಫ್ಲೆಕ್ಸಿಬಲಿಟಿ) ಕಡಿಮೆಯಾದರೆ ವಾಹನದ ಕೆಲವು ಭಾಗಗಳು ಶೀಘ್ರವಾಗಿ ಹಾನಿಗೊಳಗಾಗುತ್ತವೆ.
* ಉಬ್ಬಿಕೊಳ್ಳುವುದರಿಂದ ಸೀಲಿಂಗ್ ಸಮಸ್ಯೆಗಳು ಮತ್ತು ಇಂಧನ ಸೋರಿಕೆಯಂತಹ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಪರಿಣಾಮವಾಗಿ,2016ಕ್ಕೂ ಮೊದಲು ತಯಾರಿಸಲಾದ BS-III ವಾಹನಗಳ ಮಾಲೀಕರು ನಿಯಮಿತ ಸರ್ವಿಸ್ ವೇಳೆ ಇಂಧನ ವ್ಯವಸ್ಥೆಯ ರಬ್ಬರ್ ಭಾಗಗಳು, ಗ್ಯಾಸ್ಕೆಟ್‌ಗಳು ಹಾಗೂ ಸಂಬಂಧಿತ ಉಪಕರಣಗಳನ್ನು ಪರಿಶೀಲಿಸಿಸಿಕೊಳ್ಳಬೇಕಾಗುತ್ತದೆ. ಅಗತ್ಯವಿದ್ದರೆ ಅವುಗಳನ್ನು ಬದಲಾಯಿಸಬೇಕಾಗುತ್ತದೆ.



