ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 135 ಡಾಲರ್‌ಗೆ ಏರಿದ್ದ ಸಂದರ್ಭದಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡದೇ ಇದ್ದಿದ್ದರೆ, ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ಸುಮಾರು ₹125 ಆಗಿರುತ್ತಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoPNG) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪ್ರತಿ ಲೀಟರ್ ಪೆಟ್ರೋಲ್‌ನಲ್ಲಿ ಶೇ.20ರಷ್ಟು ದೇಶೀಯವಾಗಿ ಉತ್ಪಾದಿಸಲಾದ ಎಥೆನಾಲ್ ಅನ್ನು ಮಿಶ್ರಣ ಮಾಡಿದ್ದರಿಂದ ಗ್ರಾಹಕರು ಕೇವಲ ₹94.77 ಪಾವತಿಸಬೇಕಾಯಿತು ಎಂದಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoPNG) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಭಾರತದ ಕಚ್ಚಾ ತೈಲದ ಸರಾಸರಿ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 135 ಡಾಲರ್‌ಗೆ ಏರಿದಾಗ, ಎಥೆನಾಲ್ ಮಿಶ್ರಣವಿಲ್ಲದ ಪೆಟ್ರೋಲ್ ದೆಹಲಿಯಲ್ಲಿ ಲೀಟರ್‌ಗೆ ಸುಮಾರು ₹125 ಆಗುವ ಸಾಧ್ಯತೆ ಇತ್ತು. ಆದರೆ ಪ್ರತಿ ಲೀಟರ್‌ನಲ್ಲಿ ಶೇ.20ರಷ್ಟು ದೇಶೀಯ ಎಥೆನಾಲ್ ಬಳಸಿದ್ದರಿಂದ ಗ್ರಾಹಕರು ₹94.77 ಮಾತ್ರ ಪಾವತಿಸಿದರು” ಎಂದು ಹೇಳಿದೆ.
ಇ20 (E20) ಪೆಟ್ರೋಲ್ ಕುರಿತು ವ್ಯಕ್ತವಾಗಿರುವ ಟೀಕೆಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಸ್ಪಷ್ಟನೆ ನೀಡಿದೆ. ಇ20 ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮತ್ತು ಶೇ.80ರಷ್ಟು ಪೆಟ್ರೋಲ್ ಇರುತ್ತದೆ. ಈ ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತದೆ, ಆಹಾರ ಧಾನ್ಯಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಹಾಗೂ ತೆರಿಗೆದಾರರ ಹಣದಿಂದ ಈ ಯೋಜನೆಗೆ ಸಬ್ಸಿಡಿ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಆರೋಪಗಳನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರ, ಎಥೆನಾಲ್ ಮಿಶ್ರಣ ಕಾರ್ಯಕ್ರಮವು ಸಬ್ಸಿಡಿ ಆಧಾರಿತ ಯೋಜನೆಯಲ್ಲ, ಬದಲಾಗಿ ದೇಶದ “ಇಂಧನ ಭದ್ರತಾ ವಿಮೆ” (Energy Insurance) ಎಂದು ಸಮರ್ಥಿಸಿಕೊಂಡಿದೆ.
ಇದು ಪ್ರತಿದಿನ ಅಗ್ಗದ ಇಂಧನ ಒದಗಿಸುವ ಯೋಜನೆಯಲ್ಲ. ಜಾಗತಿಕ ಕಚ್ಚಾ ತೈಲ ಬೆಲೆಗಳ ತೀವ್ರ ಏರಿಳಿತದಿಂದ ಭಾರತೀಯ ಗ್ರಾಹಕರನ್ನು ರಕ್ಷಿಸುವುದು, ದೇಶದ ಇಂಧನ ಭದ್ರತೆಯನ್ನು ಬಲಪಡಿಸುವುದು ಹಾಗೂ ಇಂಧನಕ್ಕಾಗಿ ವಿದೇಶಗಳಿಗೆ ಹೋಗುವ ಹಣವನ್ನು ದೇಶದೊಳಗೇ ಉಳಿಸಿಕೊಳ್ಳುವುದು ಇದರ ಉದ್ದೇಶ ಎಂದಿದೆ. ಅಲ್ಲದೆ, ಆಹಾರ ಭದ್ರತಾ ಯೋಜನೆಗಳಿಗಾಗಿ ಭಾರತೀಯ ಆಹಾರ ನಿಗಮ (FCI) ಸಂಗ್ರಹಿಸುವ ಸಬ್ಸಿಡಿ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಎಂಬ ಆರೋಪವನ್ನೂ ಸರ್ಕಾರ ನಿರಾಕರಿಸಿದೆ.
ಆಹಾರ ಭದ್ರತೆಗೆ ಅಗತ್ಯವಿರುವ ಸಂಗ್ರಹವನ್ನು ಉಳಿಸಿಕೊಂಡ ಬಳಿಕ ಉಳಿದ ಹೆಚ್ಚುವರಿ ಧಾನ್ಯಗಳನ್ನು ಮಾತ್ರ ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತದೆ. ಹಾನಿಗೊಳಗಾದ ಧಾನ್ಯ, ಒಡೆದ ಅಕ್ಕಿ ಹಾಗೂ ಮಾನವ ಬಳಕೆಗೆ ಯೋಗ್ಯವಲ್ಲದ ಸಂಗ್ರಹವನ್ನು ಮುಖ್ಯವಾಗಿ ಬಳಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಜೊತೆಗೆ ಪ್ರಧಾನಮಂತ್ರಿ ಜಿ-ವ್ಯಾನ್ (JI-VAN) ಯೋಜನೆಯಡಿ ಕೃಷಿ ತ್ಯಾಜ್ಯದಿಂದ ಎರಡನೇ ತಲೆಮಾರಿನ ಎಥೆನಾಲ್ ಉತ್ಪಾದನೆಯನ್ನೂ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದೆ.
ಇದೇ ವೇಳೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಸಂಸತ್ತಿನಲ್ಲಿ ನೀಡಿದ ಮಾಹಿತಿಯನ್ನು ಉಲ್ಲೇಖಿಸಿರುವ ಸರ್ಕಾರ, ಇ20 ಪೆಟ್ರೋಲ್ ಬಳಕೆಯಿಂದ ವಾಹನದ ಮಾದರಿ ಹಾಗೂ ವಯಸ್ಸಿಗೆ ಅನುಗುಣವಾಗಿ ಶೇ.2ರಿಂದ ಶೇ.6ರಷ್ಟು ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಒಪ್ಪಿಕೊಂಡಿದೆ.
2016ಕ್ಕೂ ಮೊದಲು ತಯಾರಾದ ಕೆಲವು BS-III ವಾಹನಗಳಲ್ಲಿ ರಬ್ಬರ್ ಭಾಗಗಳು ಹಾಗೂ ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯ ಬರಬಹುದು ಎಂದು ತಿಳಿಸಿದೆ. ಅಂದರೆ ರಬ್ಬರ್ ಗ್ಯಾಸ್ಕೆಟ್‌ಗಳೂ ಕೂಡ ಎಥೆನಾಲ್‌ನಿಂದ ಹಾನಿಗೊಳಗಾಗುವ ಸಾಧ್ಯತೆಯನ್ನು ಸರ್ಕಾರ ಒಪ್ಪಿಕೊಂಡಿದೆ.
ಈವರೆಗೆ ದೇಶದಲ್ಲಿ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಪೆಟ್ರೋಲ್ ಕಾರುಗಳು ಎಥೆನಾಲ್ ಮಿಶ್ರಿತ ಇಂಧನವನ್ನು ಬಳಸಿದ್ದು, ಎಥೆನಾಲ್‌ನಿಂದಲೇ ಎಂಜಿನ್ ಹಾನಿಯಾಗಿದೆ ಎಂಬ ದೃಢೀಕೃತ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ: E20 ಪೆಟ್ರೋಲ್ | ನಿಮ್ಮ ವಾಹನಗಳಲ್ಲಿ ಈ ಭಾಗಗಳನ್ನು ಆಗ್ಗಾಗ್ಗೆ ಬದಲಾಯಿಸಬೇಕು!
ಎಥೆನಾಲ್ ಮಿಶ್ರಣದಿಂದ ಕಚ್ಚಾ ತೈಲ ಆಮದು ಮೇಲಿನ ಭಾರತದ ಅವಲಂಬನೆ ಕಡಿಮೆಯಾಗುತ್ತದೆ, ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಮತ್ತು ಇಂಧನ ಭದ್ರತೆ ಬಲಗೊಳ್ಳುತ್ತದೆ ಎಂಬುದು ಕೇಂದ್ರ ಸರ್ಕಾರದ ವಾದವಾಗಿದೆ. ಕಬ್ಬು, ಮೆಕ್ಕೆಜೋಳ ಸೇರಿದಂತೆ ಎಥೆನಾಲ್ ಉತ್ಪಾದನೆಗೆ ಬಳಸುವ ಬೆಳೆಗಳಿಗೆ ಹೆಚ್ಚುವರಿ ಬೇಡಿಕೆ ಸೃಷ್ಟಿಯಾಗುವುದರಿಂದ ರೈತರಿಗೆ ಪರ್ಯಾಯ ಮಾರುಕಟ್ಟೆಯೂ ದೊರೆಯುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತ ಉಂಟಾದಾಗ ದೇಶೀಯವಾಗಿ ಉತ್ಪಾದನೆಯಾಗುವ ಎಥೆನಾಲ್ ಬೆಲೆ ಸ್ಥಿರವಾಗಿರುವುದರಿಂದ ಗ್ರಾಹಕರ ಮೇಲಿನ ಹೊರೆ ಕೂಡ ನಿಯಂತ್ರಣದಲ್ಲಿರುತ್ತದೆ ಎಂಬುದು ಸರ್ಕಾರದ ಪ್ರತಿಪಾದನೆ.
ಆದರೆ, ಎಥೆನಾಲ್ ನೀತಿಯ ಬಗ್ಗೆ ಇರುವ ವಾಸ್ತವವೇ ಬೇರೆ. ಇ20 ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, “ಪ್ರತಿ ಲೀಟರ್‌ಗೆ ಗ್ರಾಹಕರು ಉಳಿಸುತ್ತಿರುವ ಹಣದ ಲೆಕ್ಕ ಹಾಕುವಾಗ, ಕಡಿಮೆಯಾಗುವ ಮೈಲೇಜ್‌ನಿಂದ ಉಂಟಾಗುವ ಹೆಚ್ಚುವರಿ ಇಂಧನ ಬಳಕೆಯ ವೆಚ್ಚವನ್ನೂ ಪರಿಗಣಿಸಬೇಕಲ್ಲವೇ?” ಎಂದು ಕೆಲ ತಜ್ಞರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ, ಎಥೆನಾಲ್‌ನಿಂದ ಗ್ರಾಹಕರಿಗೆ ದೊಡ್ಡ ಉಳಿತಾಯವಾಗುತ್ತಿದೆ ಎಂಬ ಸರ್ಕಾರದ ವಾದ ಸಂಪೂರ್ಣ ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಇದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಆರೋಪಿಸಿಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಎಥೆನಾಲ್ ನೀತಿಯನ್ನು ಪೆಟ್ರೋಲ್ ದರದ ಆಧಾರದ ಮೇಲೆ ಅಳೆಯದೆ, ಮೈಲೇಜ್, ವಾಹನ ನಿರ್ವಹಣಾ ವೆಚ್ಚ, ರೈತರ ಆದಾಯ, ಆಹಾರ ಭದ್ರತೆ ಹಾಗೂ ಇಂಧನ ಸ್ವಾವಲಂಬನೆ ಸೇರಿದಂತೆ ಎಲ್ಲ ಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾದ ಬಳಿಕ ಸುಮಾರು 75 ದಿನಗಳ ಕಾಲ ಜಾಗತಿಕ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತಗಳಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ದರಗಳನ್ನ ಸ್ಥಿರವಾಗಿಯೇ ಉಳಿಸಿತ್ತು. ನಂತರ ಮೇ ತಿಂಗಳಲ್ಲಿ ಲೀಟರ್‌ಗೆ 7.50 ರೂ. ಹೆಚ್ಚಳ ಮಾಡಿತು. ಪ್ರಸ್ತುತ ದೆಹಲಿಯಲ್ಲಿ E20 (91 ಆಕ್ಟೇನ್) ಪೆಟ್ರೋಲ್ ದರ ಲೀಟರ್‌ಗೆ 102.12 ರೂ. ಇದ್ದು, 100 ಆಕ್ಟೇನ್ ಪೆಟ್ರೋಲ್ ದರ 169 ರೂ. ಆಗಿದೆ.




