ಭಾಲ್ಕಿ ನಗರದ ಹಿರೇಮಠ ಸಂಸ್ಥಾನ ಕ್ಯಾಂಪ್ಲೆಕ್ಸ್‌ನಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ (SBI) ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ₹23.86 ಲಕ್ಷ ನಗದು ದೋಚಿದ್ದ ಪ್ರಕರಣವನ್ನು ಭಾಲ್ಕಿ ನಗರ ಪೊಲೀಸರು ಭೇದಿಸಿದ್ದು, ಹರಿಯಾಣ ಮತ್ತು ರಾಜಸ್ಥಾನ ಮೂಲದ ನಾಲ್ವರು ಅಂತರರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ.
2026ರ ಅಕ್ಟೋಬರ್ 25ರಂದು ಮಧ್ಯರಾತ್ರಿ 2.10ರ ಸುಮಾರಿಗೆ ಕಳ್ಳರು ಹಿರೇಮಠ ಸಂಸ್ಥಾನ ಕ್ಯಾಂಪ್ಲೆಕ್ಸ್‌ನಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರಕ್ಕೆ ನುಗ್ಗಿ, ಯಂತ್ರದ ಎಡಭಾಗವನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಒಳಗಿದ್ದ ₹23.86 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದರು. ಈ ಕುರಿತು ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ತಂಡಗಳು ವಿವಿಧೆಡೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಸುಳಿವು ಪತ್ತೆಹಚ್ಚಿದವು. ಆರೋಪಿಗಳು ತೆಲಂಗಾಣದ ಹೈದರಾಬಾದ್ ಕಡೆಗೆ ತೆರಳಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಅಲ್ಲಿಗೆ ತೆರಳಿ ಕಾರ್ಯಾಚರಣೆ ನಡೆಸಿದರು.
ಅ.30ರಂದು ಮಧ್ಯಾಹ್ನ 3.30ರ ಸುಮಾರಿಗೆ ಹೈದರಾಬಾದ್‌ನ ಶಾಹಿನ್‌ನಗರ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಭಾಲ್ಕಿಯ ಎಸ್‌ಬಿಐ ಎಟಿಎಂನಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಂಧಿತ ಆರೋಪಿಗಳು ಹರಿಯಾಣ ರಾಜ್ಯದ ನುಹ್ ಜಿಲ್ಲೆಯ ದೇವಲಾ ಗ್ರಾಮದ ಎಂ.ಡಿ.ಶೋಹರಬ್ (40), ಫಿರೋಜ್‌ಪುರ ಜಿಲ್ಲೆಯ ಆಸಿಫ್ (25), ಮೆವಾತ್‌ನ ಬಾಜಿದ್‌ಪುರ ಗ್ರಾಮದ ಅನೀಶ್ (47) ಹಾಗೂ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಪಹಾಡಿ ತಾಲೂಕಿನ ಶಾಮ್‌ಬಿಗಾ ಗ್ರಾಮದ ರಾಹುಲ್ (23) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ₹12 ಲಕ್ಷ ನಗದು ಹಾಗೂ ಅಂದಾಜು ₹20 ಲಕ್ಷ ಮೌಲ್ಯದ ಕ್ರೆಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಗ್ಯಾಸ್ ಸಿಲಿಂಡರ್‌ಗಳು, ಆಕ್ಸಿಜನ್ ಸಿಲಿಂಡರ್, ಸ್ಕ್ರೂಡ್ರೈವರ್‌ಗಳು, ಕಬ್ಬಿಣದ ರಾಡ್‌ಗಳು, ಕಟಿಂಗ್ ಪ್ಲೈಯರ್, ಗ್ಯಾಸ್ ಕಟರ್ ಪೈಪ್, ಸ್ಪ್ರೇ ಬಾಟಲಿಗಳು, ಪಾನಾ, ಬೆಂಕಿಪೆಟ್ಟಿಗೆ, ಲೈಟರ್, ಹ್ಯಾಂಡ್ ಗ್ಲೌಸ್, ಟೋಪಿಗಳು, ಮಾಸ್ಕ್‌ಗಳು, ಬುರ್ಕಾಗಳು, ಎರಡು ಮೊಬೈಲ್ ಫೋನ್‌ಗಳು, ಫಾಸ್ಟ್‌ಟ್ಯಾಗ್ ಹಾಗೂ ವಿವಿಧ ರಾಜ್ಯಗಳ 11 ನಂಬರ್ ಪ್ಲೇಟ್ ಸೇರಿ ಒಟ್ಟು ₹32 ಲಕ್ಷ ಮೌಲ್ಯದ ನಗದು, ಕಾರು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ನಡೆದ ಒಂದು ವಾರದೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಪ್ರಶಂಸಿಸಿದ್ದಾರೆ.
ಇದನ್ನೂ ಓದಿ : ಬೀದರ್ ಜಿಲ್ಲೆಯ ಇಬ್ಬರು ಕಲಾ ಸಾಧಕರಿಗೆ ರಾಜೋತ್ಸವ ಪ್ರಶಸ್ತಿ




