ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾದ ವ್ಯಕ್ತಿಗಳು, ಮತ್ತೆ ಹೆಸರು ಸೇರಿಸಲು ಸಲ್ಲಿಸುವ ‘ಫಾರ್ಮ್ 6’ರಲ್ಲಿ (Form 6) ಚುನಾವಣಾ ಆಯೋಗವು ತಂದಿರುವ ಬದಲಾವಣೆಗಳು ಕಾನೂನು ಸವಾಲು ಮತ್ತು ಗೊಂದಲಕ್ಕೆ ಕಾರಣವಾಗಿವೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿ, ಚುನಾವಣಾ ಆಯೋಗವು ಫಾರ್ಮ್ 6 ಅರ್ಜಿ ಸಲ್ಲಿಕೆಯ ಸಾಫ್ಟ್‌ವೇರ್ ಮತ್ತು ಘೋಷಣಾ ನಿಯಮಗಳಲ್ಲಿ ಕಾನೂನುಬಾಹಿರವಾಗಿ ಬದಲಾವಣೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ʼವೋಟ್ ಚೋರಿʼ ಸಂಗ್ರಾಮ; ಸುಪ್ರೀಂ ಕೋರ್ಟ್ ಕಡೆಗೆ ಕಾಂಗ್ರೆಸ್ ಮೆರವಣಿಗೆ
ಈ ಹೊಸ ನಿಯಮಾವಳಿಗಳ ಪ್ರಕಾರ, ಮತದಾರರು ತಮ್ಮ ಅಥವಾ ತಮ್ಮ ಪೋಷಕರ ಹಳೆಯ ಪರಿಷ್ಕೃತ ಪಟ್ಟಿಯ ವಿವರಗಳನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೆಸರು ಕೈಬಿಡಲ್ಪಟ್ಟ ಅಥವಾ ಹೊಸದಾಗಿ ನೋಂದಾಯಿಸಿಕೊಳ್ಳುವ ಸಾಮಾನ್ಯ ನಾಗರಿಕರು ಈ ಮಾಹಿತಿ ನೀಡಲು ಸಾಧ್ಯವಾಗದಿದ್ದರೆ, ಅವರು ಸುಳ್ಳು ಅಥವಾ ತಪ್ಪು ಮಾಹಿತಿ ನೀಡುವಂತಹ ಕಾನೂನು ಉರುಳಿಗೆ ಸಿಲುಕುವ ಅಪಾಯವಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಈ ವಿಷಯದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು, “ವಿಶೇಷ ಪರಿಷ್ಕರಣೆ ಕುರಿತಾದ ಹಿಂದಿನ ತೀರ್ಪಿನ ಸಮಯದಲ್ಲಿ ಈ ಹೊಸ ಫಾರ್ಮ್ 6 ಇರಲಿಲ್ಲ. ಆಯೋಗ ಬದಲಾಯಿಸಿರುವ ಈ ಹೊಸ ಫಾರ್ಮ್ 6ಗೆ ನ್ಯಾಯಾಲಯವು ಅನುಮೋದನೆಯನ್ನೂ ನೀಡಿಲ್ಲ, ಅಥವಾ ತಿರಸ್ಕರಿಸಿಯೂ ಇಲ್ಲ. ನಾವು ಇದರ ಕಾನೂನುಬದ್ಧತೆಯನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತೇವೆ” ಎಂದು ಸ್ಪಷ್ಟಪಡಿಸಿದೆ.
ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದನ್ನು ಅರ್ಜಿದಾರರ ಪರ ವಕೀಲರು ಪ್ರಸ್ತಾಪಿಸಿದಾಗ, ನ್ಯಾಯಾಲಯವು ಪದಗಳನ್ನು ತಪ್ಪಾಗಿ ವ್ಯಾಖ್ಯಾನಿಸದಂತೆ ಸೂಚಿಸಿ, ಫಾರ್ಮ್ 6 ರ ಬದಲಾವಣೆಗಳ ಕುರಿತು ಪೂರ್ಣ ಪ್ರಮಾಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.




