ದೇಶದಲ್ಲಿ ಕೇವಲ ಶೇ 8.25ರಷ್ಟು ಪದವೀಧರರು ಮಾತ್ರ ತಮ್ಮ ವಿದ್ಯಾರ್ಹತೆಗೆ ತಕ್ಕಂತಹ ಸೂಕ್ತ ಉದ್ಯೋಗದಲ್ಲಿದ್ದಾರೆ. ಅಂದರೆ, ಶೇ 90ಕ್ಕಿಂತ ಹೆಚ್ಚು ಪದವೀಧರರು ತಮ್ಮ ಓದಿಗೂ ತಾವು ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲದ ಹುದ್ದೆಗಳಲ್ಲಿ ದುಡಿಯುತ್ತಿದ್ದಾರೆ. ದೇಶದ ಒಟ್ಟಾರೆ ನಿರುದ್ಯೋಗ ದರ ಶೇ 3.2ರಷ್ಟಿದ್ದರೆ, ಪದವೀಧರರ ನಿರುದ್ಯೋಗ ಪ್ರಮಾಣ ಶೇ 13ರಷ್ಟಿದೆ. ಅದರಲ್ಲೂ ಮಹಿಳಾ ಪದವೀಧರರ ನಿರುದ್ಯೋಗ ದರ ಬರೋಬ್ಬರಿ ಶೇ 20.4ಕ್ಕೆ ತಲುಪಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿತೋರಿಸುತ್ತಿದೆ.
ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಮತ್ತು ಕೈಗಾರಿಕಾ ವಲಯದ ನೈಜ ಅಗತ್ಯಗಳ ನಡುವೆ ಗಂಭೀರ ಸ್ವರೂಪದ ಕಂದಕ ನಿರ್ಮಾಣವಾಗಿದೆ. ಕೋಟ್ಯಂತರ ವಿದ್ಯಾರ್ಥಿಗಳು ಕೇವಲ ಕಾಗದದ ಪದವಿ ಪತ್ರಗಳನ್ನು ಕೈಯಲ್ಲಿಡಿದು ಹೊರಬರುತ್ತಿದ್ದಾರೆಯೇ ಹೊರತು, ಮಾರುಕಟ್ಟೆಗೆ ಅಗತ್ಯವಿರುವ ಕೌಶಲಗಳನ್ನು ಹೊಂದಿಲ್ಲ ಎಂದು ನೀತಿ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ. ಆಯೋಗವು ಇತ್ತೀಚೆಗೆ ಬಿಡುಗಡೆ ಮಾಡಿರುವ ‘ವಿಕಸಿತ ಭಾರತಕ್ಕಾಗಿ ಕೌಶಲ ಮರುರೂಪಿಸುವಿಕೆ’ (Reimagining Skilling for Viksit Bharat) ಎಂಬ ವರದಿಯಲ್ಲಿ ಈ ಕುರಿತು ಸಮಗ್ರ ವಿಶ್ಲೇಷಣೆ ನಡೆಸಲಾಗಿದ್ದು, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ತಕ್ಷಣದ ಆಮೂಲಾಗ್ರ ಬದಲಾವಣೆಯ ಅಗತ್ಯವನ್ನು ಪ್ರತಿಪಾದಿಸಲಾಗಿದೆ.
ವರದಿಯ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಪದವಿ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 3.4 ಕೋಟಿ ವಿದ್ಯಾರ್ಥಿಗಳಲ್ಲಿ, ಬರೋಬ್ಬರಿ 1.13 ಕೋಟಿ ವಿದ್ಯಾರ್ಥಿಗಳು ಕೇವಲ ಕಲಾ ವಿಭಾಗಕ್ಕೆ (ಬಿಎ) ದಾಖಲಾಗಿದ್ದಾರೆ. ಬಿಎ, ಬಿಎಸ್ಸಿ ಮತ್ತು ಬಿಕಾಂ—ಈ ಮೂರು ಸಾಂಪ್ರದಾಯಿಕ ಕೋರ್ಸ್‌ಗಳಲ್ಲೇ 2 ಕೋಟಿಗೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಸಾಮಾನ್ಯ ಪದವಿಗಳು ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲಗಳನ್ನು ಬೆಳೆಸುವಲ್ಲಿ ಸಂಪೂರ್ಣ ವಿಫಲವಾಗುತ್ತಿವೆ. ಜೊತೆಗೆ ಇವು ಉದ್ಯೋಗಾವಕಾಶಗಳೊಂದಿಗೆ ಯಾವುದೇ ನೇರ ಸಂಪರ್ಕವನ್ನು ಹೊಂದಿಲ್ಲದಿರುವುದು ಇಂದಿನ ಬಹುದೊಡ್ಡ ಶೈಕ್ಷಣಿಕ ಬಿಕ್ಕಟ್ಟಾಗಿ ಪರಿಣಮಿಸಿದೆ.
ಆರ್ಥಿಕ ಸಮೀಕ್ಷೆ 2024–25ರ ದತ್ತಾಂಶಗಳನ್ನು ಉಲ್ಲೇಖಿಸಿರುವ ನೀತಿ ಆಯೋಗ, ಉದ್ಯೋಗ ಮಾರುಕಟ್ಟೆಯ ಕರಾಳ ವಾಸ್ತವವನ್ನು ತೆರೆದಿಟ್ಟಿದೆ. ದೇಶದಲ್ಲಿ ಕೇವಲ ಶೇ 8.25ರಷ್ಟು ಪದವೀಧರರು ಮಾತ್ರ ತಮ್ಮ ವಿದ್ಯಾರ್ಹತೆಗೆ ತಕ್ಕಂತಹ ಸೂಕ್ತ ಉದ್ಯೋಗದಲ್ಲಿದ್ದಾರೆ. ಅಂದರೆ, ಶೇ 90ಕ್ಕಿಂತ ಹೆಚ್ಚು ಪದವೀಧರರು ತಮ್ಮ ಓದಿಗೂ ತಾವು ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲದ ಹುದ್ದೆಗಳಲ್ಲಿ ದುಡಿಯುತ್ತಿದ್ದಾರೆ. ದೇಶದ ಒಟ್ಟಾರೆ ನಿರುದ್ಯೋಗ ದರ ಶೇ 3.2ರಷ್ಟಿದ್ದರೆ, ಪದವೀಧರರ ನಿರುದ್ಯೋಗ ಪ್ರಮಾಣ ಶೇ 13ರಷ್ಟಿದೆ. ಅದರಲ್ಲೂ ಮಹಿಳಾ ಪದವೀಧರರ ನಿರುದ್ಯೋಗ ದರ ಬರೋಬ್ಬರಿ ಶೇ 20.4ಕ್ಕೆ ತಲುಪಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿತೋರಿಸುತ್ತಿದೆ.
ಬಹುಪಾಲು ವಿದ್ಯಾರ್ಥಿಗಳು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಹಾಗೂ ಸರ್ಕಾರಿ ನೌಕರಿಯ ಕನಿಷ್ಠ ವಿದ್ಯಾರ್ಹತೆ ಪಡೆಯುವ ಏಕೈಕ ಉದ್ದೇಶದಿಂದಲೇ ಇಂತಹ ಸಾಂಪ್ರದಾಯಿಕ ಪದವಿಗಳನ್ನು ಅನಿವಾರ್ಯವಾಗಿ ಆಯ್ದುಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ, ನವೆಂಬರ್ 2024 ರಿಂದ ಜುಲೈ 2025ರ ನಡುವೆ ಕೇವಲ 55,000 ಸರ್ಕಾರಿ ಹುದ್ದೆಗಳಿಗೆ ಬರೋಬ್ಬರಿ 1.86 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಸರ್ಕಾರಿ ಉದ್ಯೋಗದ ಮೇಲಿನ ಈ ವಿಪರೀತ ಅವಲಂಬನೆ ಹಾಗೂ ಪೈಪೋಟಿಯು ಲಕ್ಷಾಂತರ ಯುವಜನರ ಅಮೂಲ್ಯ ಸಮಯ, ಕೌಶಲ ಹಾಗೂ ಶ್ರಮವನ್ನು ವ್ಯರ್ಥಮಾಡುತ್ತಿದೆ ಎಂದು ವರದಿ ಬೆಟ್ಟು ಮಾಡಿದೆ.
ಕಾಲೇಜುಗಳು, ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐ) ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಬೋಧಿಸಲಾಗುತ್ತಿರುವ ಬಹುಪಾಲು ಪಠ್ಯಕ್ರಮಗಳು ಅತ್ಯಂತ ಹಳೆಯದಾಗಿದ್ದು, ಆಧುನಿಕ ಉದ್ಯಮಗಳ ತಾಂತ್ರಿಕ ಬೆಳವಣಿಗೆಗೆ ಹೊಂದಿಕೊಳ್ಳುತ್ತಿಲ್ಲ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸೈದ್ಧಾಂತಿಕ ಅಂಕಗಳಿಗೆ ನೀಡುವ ಆದ್ಯತೆ ಪ್ರಾಯೋಗಿಕ ಅನುಭವಕ್ಕೆ ಸಿಗುತ್ತಿಲ್ಲ. ಇದರ ನೇರ ಪರಿಣಾಮವಾಗಿ ವಿದ್ಯಾರ್ಥಿಗಳು ಗಳಿಸುವ ಡಿಪ್ಲೊಮಾ ಮತ್ತು ಡಿಗ್ರಿ ಪ್ರಮಾಣಪತ್ರಗಳು ಉದ್ಯೋಗದ ಭರವಸೆಯನ್ನು ನೀಡುವಲ್ಲಿ ನಿಷ್ಪ್ರಯೋಜಕವಾಗುತ್ತಿವೆ. ಶಿಕ್ಷಣ ಮತ್ತು ಕೈಗಾರಿಕಾ ಬೇಡಿಕೆಯ ನಡುವಿನ ಈ ಅಸಮತೋಲನವನ್ನು ಸರಿಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಈ ಗಂಭೀರ ಬಿಕ್ಕಟ್ಟಿಗೆ ಪರಿಹಾರವಾಗಿ, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯನ್ನು ಬಲಪಡಿಸಲು ಆಯೋಗ ಸಲಹೆ ನೀಡಿದೆ. ಸಾಮಾನ್ಯ ಪದವಿಗಳ ಬದಲಾಗಿ, ಉದ್ಯಮದ ಬೇಡಿಕೆಗೆ ತಕ್ಕಂತೆ ಬಿಎ-ಹಾಸ್ಪಿಟಾಲಿಟಿ, ಬಿಕಾಂ-ಅನಾಲಿಟಿಕ್ಸ್ ಮತ್ತು ಬಿಎಸ್ಸಿ-ಅಪ್ಲೈಡ್ ಟೆಕ್ನಾಲಜಿಯಂತಹ ಅನ್ವಯಿಕ ಹಾಗೂ ಕೌಶಲಾಧಾರಿತ ವಿಶೇಷ ಕೋರ್ಸ್‌ಗಳನ್ನು ಪರಿಚಯಿಸಬೇಕಿದೆ. ಶಿಕ್ಷಣ ಸಂಸ್ಥೆಗಳು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಮಾರುಕಟ್ಟೆಯ ಇಂದಿನ ಮತ್ತು ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಪಠ್ಯಕ್ರಮವನ್ನು ನಿರಂತರವಾಗಿ ನವೀಕರಿಸುವುದು ಅತ್ಯಗತ್ಯ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.
ಇದರ ಜೊತೆಗೆ, ಪದವಿಯ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಡ್ಡಾಯ ಪ್ರಾಯೋಗಿಕ ಕಾರ್ಯಾನುಭವ ಒದಗಿಸುವ ‘ಅಪ್ರೆಂಟಿಸ್‌ಶಿಪ್ ಆಧಾರಿತ ಪದವಿ’ (AEDP) ಕಾರ್ಯಕ್ರಮಗಳನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಬೇಕಿದೆ. ವಿದ್ಯಾರ್ಥಿಗಳು ಓದುತ್ತಲೇ ದುಡಿಯಲು ಅನುಕೂಲವಾಗುವಂತೆ ಮಾಡ್ಯುಲರ್, ಹೈಬ್ರಿಡ್ ಮತ್ತು ಅರೆಕಾಲಿಕ ಶಿಕ್ಷಣದಂತಹ ಹೊಂದಿಕೊಳ್ಳುವ ಕಲಿಕಾ ವಿಧಾನಗಳನ್ನು ಜಾರಿಗೆ ತರಬೇಕು. ಹಸಿರು ಕೈಗಾರಿಕೆಗಳು ಹಾಗೂ ಎಲೆಕ್ಟ್ರಿಕ್ ವಾಹನಗಳಂತಹ ಭವಿಷ್ಯದ ವಲಯಗಳಿಗೆ ಯುವಜನರನ್ನು ಸಜ್ಜುಗೊಳಿಸುವ ಮೂಲಕ ಮಾತ್ರ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ನೀತಿ ಆಯೋಗ ಸ್ಪಷ್ಟಪಡಿಸಿದೆ.




