16 ವರ್ಷದ ಬಾಲಕಿಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಬರೇಲಿಯ ಭೋಜಿಪುರ ಪ್ರದೇಶದ ಕೆಫೆಯೊಂದರಲ್ಲಿ ನಡೆದಿದೆ. ಈ ಸಂಬಂಧ ಬುಧವಾರ ಪೊಲೀಸರು ಮಾಹಿತಿ ನೀಡಿದ್ದು, ಭೋಜಿಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ಪ್ರಕಾರ, ಆರೋಪಿಗಳನ್ನು ಅಸದ್ ಹೈದರ್ ಅಲಿಯಾಸ್ ಕರಣ್, ಚಂದ್, ರೆಸ್ಟೋರೆಂಟ್ ಮಾಲೀಕ ಸೈಫಿ, ಸಮೀರ್ ಅಹ್ಮದ್, ಬಂಟಿ ಮತ್ತು ಇಬ್ಬರು ಅನಾಮಧೇಯ ವ್ಯಕ್ತಿಗಳು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ಮಾರ್ಚ್ 19ರಂದು ಈ ಘಟನೆ ನಡೆದಿದೆ. ಅಸದ್ ಬಾಲಕಿಯನ್ನು ‘ಸೈಫಿ ಕೆಫೆ’ಯ ಮೇಲಿನ ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ, ಅದರ ವಿಡಿಯೋ ಮಾಡಿದ್ದಾನೆ. ಯಾರಿಗಾದರೂ ಹೇಳಿದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಉತ್ತರ) ಮುಖೇಶ್ ಚಂದ್ರ ಮಿಶ್ರಾ ಹೇಳಿದ್ದಾರೆ.
ಅದಾದ ಬಳಿಕ ಏಪ್ರಿಲ್ 2ರಂದು ಬಾಲಕಿ ಶಾಲೆಗೆ ಹೋಗುತ್ತಿದ್ದಾಗ ಚಂದ್ ಎಂಬ ಆರೋಪಿ ಬಾಲಕಿಯನ್ನು ತಡೆದು ಕೆಫೆಗೆ ಬರುವಂತೆ ಒತ್ತಾಯಿಸಿದ್ದಾನೆ. ಕೆಫೆಗೆ ಬಂದು ಅಸದ್‌ನನ್ನು ಭೇಟಿಯಾಗದಿದ್ದರೆ, ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿ ಕೆಫೆಗೆ ಹೋದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಡಿಎಸ್‌ಪಿ ಮಾಹಿತಿ ನೀಡಿದ್ದಾರೆ.
ಬಾಲಕಿ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದಾಳೆ. ಬೆದರಿ ಎರಡು ದಿನಗಳ ಕಾಲ ತನ್ನ ಕುಟುಂಬದಿಂದ ಘಟನೆಯನ್ನು ಮರೆಮಾಚಿದ್ದಾಳೆ. ಆಕೆಯ ಆರೋಗ್ಯ ಸ್ಥಿತಿ ಸರಿಯಿಲ್ಲದ್ದನ್ನು ಗಮನಿಸಿ ಸಂಬಂಧಿಕರು ಪ್ರಶ್ನಿಸಿದಾಗ ಆಕೆ ನಡೆದ ಘಟನೆಯನ್ನು ತಿಳಿಸಿದ್ದಾಳೆ ಎಂದು ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಏಪ್ರಿಲ್ 5ರಂದು ಬಿಎನ್‌ಎಸ್ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಏಳು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳ ಹುಡುಕಾಟ ನಡೆಯುತ್ತಿದೆ ಎಂದು ಭೋಜಿಪುರ ಪ್ರದೇಶದ ಉಸ್ತುವಾರಿ ರಾಜೀವ್ ಕುಮಾರ್ ಸಿಂಗ್ ತಿಳಿಸಿದ್ದಾರೆ.




