ಬಾಲಕನೊಬ್ಬ ಕಟ್ಟಡದಿಂದ ಕೆಳಗೆ ಬಿದ್ದಿದ್ದು, ಆತನ ಭುಜಕ್ಕೆ ಚುಚ್ಚಿದ ಕಬ್ಬಿಣದ ಸರಳು ಬಾಯಿಯಿಂದ ಹೊರಬಂದಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.
ಬಿಹಾರ ಮೂಲದ 13 ವರ್ಷದ ಬಾಲಕ ನಾಜಿಶ್ ಭೀಕರ ಗಾಯಗೊಂಡು ಬದುಕಿದಿದ್ದಾರೆ. ನಾಜಿಶ್ ಸ್ಥಳೀಯ ಮದ್ರಾಸದಲ್ಲಿ ವ್ಯಾಸಂಗ ಮಾಡುತ್ತಿದ್ದರು. ತರಗತಿಗಳು ಮುಗಿದ ನಂತರ ಸ್ನೇಹಿತರೊಂದಿಗೆ ಸಮೀಪದ ಮಸೀದಿಯ ಮೂರನೇ ಮಹಡಿಯಲ್ಲಿ ಆಟವಾಡಲು ತೆರಳಿದ್ದರು. ಅಲ್ಲಿಂದ ಪಕ್ಕದಲ್ಲಿದ್ದ ನಿರ್ಮಾಣ ಹಂತದ ಕಟ್ಟಡಕ್ಕೆ ಹಾರಲು ಯತ್ನಿಸಿದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ನೆಲದಲ್ಲಿದ್ದ ನಿರ್ಮಾಣ ಹಂತದ ಕಬ್ಬಿಣದ ಸರಳು ಆತನ ಹೆಗಲ ಭಾಗದಲ್ಲಿ ಚುಚ್ಚಿ ಬಾಯಿಯಿಂದ ಹೊರಬಂದಿದೆ ಎಂದು ವರದಿಯಾಗಿದೆ.
ಘಟನೆ ನಡೆದ ತಕ್ಷಣ ಸುತ್ತಮುತ್ತಲಿನ ಜನರು ಸರಳನ್ನು ಕತ್ತರಿಸಿ, ಬಾಲಕನನ್ನು ಸೂರತ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕನ ಬಾಯಿಯಲ್ಲಿ ಸರಳು ಸಿಲುಕಿಕೊಂಡಿದ್ದರಿಂದ ಆತನಿಗೆ ಉಸಿರಾಟದ ವ್ಯವಸ್ಥೆ ಕಲ್ಪಿಸಿ ಅರಿವಳಿಕೆ (Anesthesia) ನೀಡುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು ಎಂದು ತಿಳಿದುಬಂದಿದೆ.
ಪ್ಲಾಸ್ಟಿಕ್ ಸರ್ಜನ್‌ಗಳು, ಇಎನ್‌ಟಿ ತಜ್ಞರು ಹಾಗೂ ಅರಿವಳಿಕೆ ತಜ್ಞರ ತಂಡವು ಒಂದು ಗಂಟೆಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಪ್ರಮುಖ ರಕ್ತನಾಳಗಳಿಗೆ ಹಾನಿಯಾಗದಂತೆ ಸರಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಬಾಲಕನನ್ನು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ (ICU) ಇರಿಸಲಾಗಿದೆ. ಆತ ಚೇತರಿಸಿಕೊಳ್ಳುತ್ತಿದ್ದಾರೆ. ಆತನ ಆರೋಗ್ಯ ಸ್ಥಿರವಾದ ನಂತರ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.



