ʼನೀವು ಮತವನ್ನು ಯಾರಿಗೆ ಬೇಕಾದರೂ ಹಾಕಿ ಗೆಲ್ಲಿಸಿಕೊಳ್ಳಿ; ಆದರೆ ಅಂತಿಮವಾಗಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವವರು ನಾವೇ ಆಗಿರುತ್ತೇವೆ. ಹಗ್ಗ ಎಷ್ಟೇ ಉದ್ದವಿದ್ದರೇನು, ನಿಯಂತ್ರಣದ ಕುಣಿಕೆ ಇರುವುದು ನನ್ನ ಕೈಯಲ್ಲೇ ಎನ್ನುವ ಪರಿಸ್ಥಿತಿಯೇ Deep Stateನ ಅತ್ಯಂತ ಅಪಾಯಕಾರಿ ರೂಪ.
ಡೀಪ್‌ಸ್ಟೇಟ್ (’Deep Stateʼ) ಎಂದರೆ ಸೇನೆ, ಗುಪ್ತಚರ ಸಂಸ್ಥೆಗಳು, ಪೊಲೀಸ್, ಹಿರಿಯ ಅಧಿಕಾರಿಗಳು ಅಥವಾ ಪ್ರಭಾವಶಾಲಿ ಗುಂಪುಗಳು ಚುನಾಯಿತ ಸರ್ಕಾರದ ನೀತಿ ಮತ್ತು ರಾಜಕೀಯವನ್ನು ಹಿಂಬಾಗಿಲಿನಿಂದ ನಿಯಂತ್ರಿಸುವ ಗುಪ್ತ ಅಧಿಕಾರ ವ್ಯವಸ್ಥೆಯಾಗಿದೆ. ಪಾಕಿಸ್ತಾನದಲ್ಲಿ ಸೇನೆ ಮತ್ತು ISI(ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಹಿಡಿತ ಇದಕ್ಕೆ ಸೂಕ್ತ ಉದಾಹರಣೆಯಾಗಿ ಹೇಳಲಾಗುತ್ತದೆ.
ಭಾರತದಲ್ಲಿ ಡೀಪ್‌ಸ್ಟೇಟ್ ಕುರಿತು ಬರೆಯುವ ಕೆಲವು ಸಂಶೋಧಕರು ಮತ್ತು ಪತ್ರಕರ್ತರು ಮುಖ್ಯವಾಗಿ ದೇಶದ ಪೊಲೀಸ್–ಗುಪ್ತಚರ–ತನಿಖಾ ವ್ಯವಸ್ಥೆಯತ್ತ ಬೆರಳು ತೋರಿಸುತ್ತಾರೆ. ತನಿಖಾ ಪತ್ರಕರ್ತ ಜೋಸಿ ಜೋಸೆಫ್ ತಮ್ಮ The Silent Coup: A History of India’s Deep State ಕೃತಿಯಲ್ಲಿ ಭಾರತದ ಸೇನೆಯನ್ನು ಕೇಂದ್ರವಾಗಿಟ್ಟುಕೊಂಡ ಪಾಕಿಸ್ತಾನ ಮಾದರಿಯ ಡೀಪ್‌ಸ್ಟೇಟ್‌ಗಿಂತ, ಪೊಲೀಸ್, ಗುಪ್ತಚರ ಸಂಸ್ಥೆಗಳು, ಸಿಬಿಐ, ಎನ್‌ಐಎ, ಭಯೋತ್ಪಾದನಾ ನಿಗ್ರಹ ದಳಗಳು, ಇಡಿ ಮತ್ತು ಆದಾಯ ತೆರಿಗೆ ವ್ಯವಸ್ಥೆಗಳಂತಹ ಸೇನೆಯೇತರ ಭದ್ರತಾ ಸಂಸ್ಥೆಗಳ ರಾಜಕೀಯ ಬಳಕೆಯೇ ಭಾರತೀಯ ಡೀಪ್‌ಸ್ಟೇಟ್ ರೂಪ ಎಂದು ಪ್ರತಿಪಾದಿಸಿದ್ದಾರೆ.
ಭಾರತದಲ್ಲಿ ಪಾಕಿಸ್ತಾನದ ಮಾದರಿಯ ʼಡೀಪ್‌ಸ್ಟೇಟ್ʼ ಇಲ್ಲ. ನಮ್ಮ ಸೇನೆ ನಿರಂತರವಾಗಿ ನಾಗರಿಕ ಸರ್ಕಾರದ ನಿಯಂತ್ರಣದಲ್ಲೇ ಇದೆ. ಸರ್ಕಾರವನ್ನು ಮೀರಿ ಸಂಪೂರ್ಣವಾಗಿ ಗುಪ್ತ ವ್ಯವಸ್ಥೆಗಳು ತೆರೆಮರೆಯಿಂದ ದೇಶವನ್ನು ನಡೆಸುತ್ತಿರುವ ಸ್ಥಿತಿ ಇಲ್ಲ.
ಭಾರತದ ಡೀಪ್‌ಸ್ಟೇಟ್ ಚರ್ಚೆಯ ಕೇಂದ್ರದಲ್ಲಿನ ಸಂಸ್ಥೆಗಳು
1. ಚುನಾವಣಾ ಬಾಂಡ್‌ಗಳು — ಸರ್ಕಾರ + ಕಾರ್ಪೊರೇಟ್ ವಲಯ + ಸರ್ಕಾರಿ ಬ್ಯಾಂಕ್ + ರಾಜಕೀಯ ಪಕ್ಷ: ಮೋದಿ ಸರ್ಕಾರ ಜಾರಿಗೆ ತಂದ Electoral Bonds ವ್ಯವಸ್ಥೆಯಲ್ಲಿ SBI ಮೂಲಕ ಕಂಪನಿಗಳು ಮತ್ತು ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ಅಜ್ಞಾತವಾಗಿ ಹಣ ನೀಡಬಹುದಾಗಿತ್ತು. ಮಾರ್ಚ್ 2023ರವರೆಗೆ ದೊರೆಯುವ ಅಂಕಿಅಂಶಗಳ ಪ್ರಕಾರ ಸುಮಾರು ₹12,010 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳಲ್ಲಿ BJPಗೆ ಸುಮಾರು ₹6,566 ಕೋಟಿ, ಅಂದರೆ ಅರ್ಧಕ್ಕಿಂತ ಹೆಚ್ಚು ಸಿಕ್ಕಿತ್ತು. ಸರ್ಕಾರದ ವಿರುದ್ಧ ಒತ್ತಡ ಹೆಚ್ಚಲಾರಂಭಿಸದ ಬಳಿಕ 2024ರಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅನಿವಾರ್ಯವಾಗಿ ಸಂವಿಧಾನಿಬಾಹಿರ ಎಂದು ರದ್ದುಗೊಳಿಸಬೇಕಾಯಿತು. ರಾಜಕೀಯ ದೇಣಿಗೆಗಳ ಗೌಪ್ಯತೆ, ಭ್ರಷ್ಟಾಚಾರ ಇತ್ಯಾದಿಗಳ ಅಪಾಯವನ್ನು ಸೃಷ್ಟಿಸಬಹುದು ಎನ್ನುವ ತೀರ್ಪು ನೀಡಿತು. ಸುಪ್ರೀಮ್ ಕೋರ್ಟಿನ ನಿಚ್ಚಳ ನಿರ್ದೇಶನದ ನಂತರ ವಿಧಿಯಲ್ಲದೆ SBI ನೀಡಿದ donor–party ಮಾಹಿತಿಯನ್ನು ಚುನಾವಣಾ ಆಯೋಗ ಬಹಿರಂಗಪಡಿಸಿತು. ಇದು ʼರಾಜಕೀಯ ಅಧಿಕಾರ–ಕಾರ್ಪೊರೇಟ್ ಹಣಕಾಸು–ಸರ್ಕಾರಿ ವ್ಯವಸ್ಥೆʼ ನಡುವಿನ ಅಪವಿತ್ರ ಮೈತ್ರಿಗೆ ಅತ್ಯಂತ ಪ್ರಬಲ ಪುರಾವೆಸಹಿತ ಉದಾಹರಣೆ.
2. ED/ಆದಾಯ ತೆರಿಗೆ ಇಲಾಖೆ ಮತ್ತು ವಿರೋಧ ಪಕ್ಷಗಳು: 2014ರಿಂದ Enforcement Directorate(ED) ನೂರಕ್ಕೂ ಹೆಚ್ಚು ವಿರೋಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ದಾಳಿಗಳನ್ನು ನಡೆಸಿ ತನಿಖೆ ನಡೆಸಿರುವುದಾಗಿ Reuters ವರದಿ ಮಾಡಿದೆ. ವಿಪಕ್ಷಗಳು ಈ ಕ್ರಮವನ್ನು ಇ.ಡಿ.ಯ ಹತಾರೀಕರಣ ಎಂದು ಆರೋಪಿಸಿವೆ. 2024ರ ಲೋಕಸಭಾ ಚುನಾವಣೆಗೆ ಕೆಲವೇ ವಾರಗಳ ಮೊದಲು ಕಾಂಗ್ರೆಸ್‌ನ ಕೆಲವು ಬ್ಯಾಂಕ್ ಖಾತೆಗಳ ಮೇಲೆ ಆದಾಯ ತೆರಿಗೆ ವಿವಾದದ ನೆಪದಲ್ಲಿ ನಿರ್ಬಂಧ ಹೇರಲಾಯಿತು. EDಯನ್ನು ಪ್ರತಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಸುವ ಮೋಶಾ ಸರ್ಕಾರದ ಕೃತ್ಯವು ಈ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿತು. ಇದನ್ನು ಗಮನಿಸಿದರೆ ‘ಆಡಳಿತ ಯಂತ್ರ–ತನಿಖಾ ಸಂಸ್ಥೆ–ಚುನಾವಣಾ ರಾಜಕಾರಣʼ ನಡುವಿನ ತೆಳುರೇಖೆಗಳು ಯಾವರೀತಿ ಒಂದರೊಡನೆ ಮತ್ತೊಂದು ಕಲೆಸಿ ಹೋಗಿವೆ ಎಂಬ ಪ್ರಶ್ನೆ ಏಳುತ್ತದೆ.
3. ಚುನಾವಣಾ ಆಯೋಗದ ನೇಮಕದಲ್ಲಿ ಕಾರ್ಯಾಂಗದ ಪ್ರಾಬಲ್ಯ: 2023ರ ಹೊಸ ಕಾನೂನಿನ ಪ್ರಕಾರ Chief Election Commissioner ಮತ್ತು Election Commissioners ಆಯ್ಕೆ ಮಾಡುವ ಮೂವರು ಸಮಿತಿಗೆ ಪ್ರಧಾನಮಂತ್ರಿ ಅಧ್ಯಕ್ಷರು; ಲೋಕಸಭೆಯ ವಿರೋಧ ಪಕ್ಷದ ನಾಯಕರು ಸದಸ್ಯರು; ಮೂರನೇ ಸದಸ್ಯರಾಗಿ ಪ್ರಧಾನಮಂತ್ರಿಯೇ ನಾಮನಿರ್ದೇಶನ ಮಾಡುವ ಕೇಂದ್ರ ಸಚಿವರು ಇರುತ್ತಾರೆ. ಪ್ರಧಾನ ಚುನಾವಣಾ ಆಯುಕ್ತರು ಮತ್ತು ಆಯುಕ್ತರ ಆಯ್ಕೆಗೆ ರಚಿಸಲಾಗುವ ಶೋಧ ಸಮಿತಿಯನ್ನು (Search Committee) ಕಾನೂನು ಸಚಿವರು ಮುನ್ನಡೆಸುತ್ತಾರೆ. ಹೀಗಾಗಿ ಮೂವರು ಸದಸ್ಯರ ಅಂತಿಮ ಆಯ್ಕೆ ಸಮಿತಿಯಲ್ಲಿ ಸರ್ಕಾರದ ಕಡೆಯಿಂದ ಇಬ್ಬರಿದ್ದರೆ ವಿರೋಧ ಪಕ್ಷದಿಂದ ಒಬ್ಬರೇ ಇರುತ್ತಾರೆ. ಸರ್ಕಾರ ಆರಿಸುವವರೇ ಆಯೋಗದ ಹುದ್ದೆಗಳನ್ನು ಅಲಂಕರಿಸುವುದು ನಿಶ್ಚಿತ. ಇದು ʼಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗೆ ನಡೆಯುವ ನೇಮಕಾತಿಯಲ್ಲಿ ಕಾರ್ಯಾಂಗದ ಪ್ರಭಾವ ನಿರ್ಣಾಯಕ ಎಂಬುದನ್ನು ಈ ಅಂಶ ಎತ್ತಿ ತೋರುತ್ತದೆ .
4. ಕಾರ್ಪೊರೇಟ್ ಮಾಲೀಕತ್ವ ಮತ್ತು ಮಾಧ್ಯಮ: ಭಾರತದ ಪ್ರಮುಖ ಸುದ್ದಿಮಾಧ್ಯಮಗಳಲ್ಲಿ ಭಾರೀ ಉದ್ಯಮ ಸಮೂಹಗಳ ಒಡೆತನ ಹೆಚ್ಚುತ್ತಿದೆ. ಕಾರ್ಪೊರೇಟ್ ಒಡೆತನ ಮತ್ತು ರಾಜಕೀಯ ಅಧಿಕಾರಸ್ಥರೊಂದಿಗಿನ ಅಪವಿತ್ರ ಮೈತ್ರಿಗಳು ಮಾಧ್ಯಮ ಸ್ವಾತಂತ್ರ್ಯ ಮತ್ತು ಮಾಧ್ಯಮ ಬಹುತ್ವಕ್ಕೆ ಸವಾಲಾಗಿವೆ ಎಂದು Reuters Instituteನ 2025ರ India report ಹೇಳಿದೆ. ಉದಾಹರಣೆಗೆ 2024ರ ವೇಳೆಗೆ NDTVಯ ಶೇ.64.7ರಷ್ಟು ಪಾಲನ್ನು ಅದಾನಿ ಗ್ರೂಪ್ ಹೊಂದಿತ್ತು. ಅಂತೆಯೇ Network18 ಸುದ್ದಿಜಾಲ ಮತ್ತೊಂದು ಕಾರ್ಪೊರೇಟ್ ದೈತ್ಯ, ರಿಲಯನ್ಸ್ ಉದ್ಯಮಸಮೂಹದ ಕಪಿಮುಷ್ಠಿಗೆ ಸಿಲುಕಿದೆ. ಹೀಗೆ ಕಾರ್ಪೊರೇಟ್ ಉದ್ಯಮಗಳು ನಿಯಂತ್ರಿಸುವ ಮಾಧ್ಯಮ ಸಂಸ್ಥೆಗಳು ಯಾರ ಹಿತ ಕಾಯುತ್ತವೆ ಎಂದು ಊಹಿಸುವುದು ಕಷ್ಟವೇನೂ ಅಲ್ಲ.
‘ಸುಪ್ರೀಂ ಕೋರ್ಟ್ ಹಾಲಿ ಸರ್ಕಾರದೊಂದಿಗೆ ಕೈಜೋಡಿಸಿದೆʼ ಎಂಬ ಆರೋಪ ಪ್ರತ್ಯಕ್ಷವಾಗಿ ಸಾಬೀತಾಗುವುದಿಲ್ಲ. ಆದರೆ ಸರ್ಕಾರದ ಪರವಾಗಿ ನ್ಯಾಯಾಂಗದ ಸಂಯಮ, ಮಧ್ಯಂತರ ತಡೆ ನೀಡದಿರುವುದು ಅಥವಾ ಸರ್ಕಾರದ ಕ್ರಮಗಳನ್ನು ಸರ್ವೇಸಾಮಾನ್ಯವಾಗಿ ಮಾನ್ಯಗೊಳಿಸುವ ನಡೆಗಳಿಂದ ಈಗಿನ ಸರ್ಕಾರಕ್ಕೆ ರಾಜಕೀಯ ಅನುಕೂಲಗಳಾಗಿರುವುದನ್ನು ಕಾಣಬಹುದು. ಇಂತಹ ಕೆಲ ಪ್ರಕರಣಗಳನ್ನು ಇಲ್ಲಿ ನೀಡಲಾಗಿದೆ.
| ಪ್ರಕರಣ | ಸುಪ್ರೀಂ ಕೋರ್ಟ್ ನಿಲುವು | ಸರ್ಕಾರಕ್ಕೆ ಉಂಟಾದ ಅನುಕೂಲ ಎಂದು ಹೇಗೆ ವಿಶ್ಲೇಷಿಸಬಹುದು? |
| CJP ‘ಚಲೋ ಸಂಸತ್’ ಪ್ರತಿಭಟನೆ – ಜುಲೈ 22, 2026 | ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ ಕುರಿತು ತುರ್ತು ವಿಚಾರಣೆ ನಡೆಸಲು ಕೋರ್ಟ್ ಶುರುವಿನಲ್ಲಿ ನಿರಾಕರಿಸಿತು. ವಿಡಿಯೊಗಳನ್ನು ನೋಡುವುದಕ್ಕೂ CJI ಆಸಕ್ತಿ ತೋರಲಿಲ್ಲ ಎಂದು ವರದಿಯಾಯಿತು. | ಪೊಲೀಸ್ ಕ್ರಮಕ್ಕೆ ತಕ್ಷಣದ ನ್ಯಾಯಾಂಗ ತಡೆ ಅಥವಾ ತನಿಖೆ ಬರಲಿಲ್ಲ. ಹೀಗಾಗಿ ಪ್ರತಿಭಟನೆಯ ಅತ್ಯಂತ ನಿರ್ಣಾಯಕ ಹಂತದಲ್ಲಿ ಸರ್ಕಾರಕ್ಕೆ breathing space ಸಿಕ್ಕಿತು ಎಂದು ವಿಮರ್ಶಿಸಬಹುದು. ಆದರೆ ಜುಲೈ 28ರಂದು ಕೋರ್ಟ್ ತನ್ನ ನಿಲುವನ್ನು ಬದಲಿಸಿ ಅಪ್ರಾಪ್ತರ ಬಿಡುಗಡೆ, ಸಾಕ್ಷ್ಯ ಸಂರಕ್ಷಣೆ ಹಾಗೂ ಸ್ವತಂತ್ರ ತನಿಖೆಯ ಅಗತ್ಯವನ್ನು ಒತ್ತಿಹೇಳಿತು. |
| CAA ನಿಯಮಗಳು – ಮಾರ್ಚ್ 2024 | Citizenship Amendment Rules ಜಾರಿಗೆ ತಕ್ಷಣ ತಡೆ ನೀಡಬೇಕೆಂಬ ಮನವಿಯನ್ನು ಕೋರ್ಟ್ ಮಾರ್ಚ್ 19ರಂದು ಒಪ್ಪಲಿಲ್ಲ; ಉತ್ತರ ನೀಡಲು ಕೇಂದ್ರಕ್ಕೆ ಸಮಯ ನೀಡಿತು. | ತೀರ್ಪು ಬರುವ ಮೊದಲೇ ಸರ್ಕಾರ CAA ಅನುಷ್ಠಾನ ಮುಂದುವರಿಸಲು ಸಾಧ್ಯವಾಯಿತು; ಮೇ 2024ರಲ್ಲಿ ಪ್ರಜೆಗಳಿಗೆ ಮೊದಲ ಹಂತದ ಪೌರತ್ವವನ್ನೂ ನೀಡಲಾಯಿತು. |
| ಚುನಾವಣಾ ಆಯುಕ್ತರ ನೇಮಕಾತಿ ಕಾಯ್ದೆ – 2024 | CJIಯನ್ನು ಆಯ್ಕೆ ಸಮಿತಿಯಿಂದ ಹೊರಗಿಟ್ಟ 2023ರ ಕಾಯ್ದೆಗೆ ಮತ್ತು ಅದರಡಿ ನಡೆದ ಹೊಸ EC ನೇಮಕಾತಿಗಳಿಗೆ ತಡೆ ನೀಡಲು ಕೋರ್ಟ್ ನಿರಾಕರಿಸಿತು; ಚುನಾವಣೆ ಸಮೀಪದಲ್ಲಿದೆ ಎಂಬುದೂ ಕಾರಣಗಳಲ್ಲಿ ಒಂದಾಗಿತ್ತು. | ಇದರ ಪರಿಣಾಮವಾಗಿ ಕೇಂದ್ರ ಸರ್ಕಾರ ರೂಪಿಸಿದ ಹೊಸ ಆಯ್ಕೆ ವ್ಯವಸ್ಥೆಯೇ 2024 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾರ್ಯನಿರ್ವಹಿಸಿತು. ಇದನ್ನು ಸರ್ಕಾರಕ್ಕೆ ಒದಗಿದ ತಕ್ಷಣದ ಸಾಂಸ್ಥಿಕ ಅನುಕೂಲವೆಂದು ವಿಮರ್ಶಕರು ನೋಡಬಹುದು. |
| Waqf Amendment Act – ಸೆಪ್ಟೆಂಬರ್ 2025 | ಸಂಪೂರ್ಣ ತಿದ್ದುಪಡಿ ಕಾಯ್ದೆಯನ್ನು ಸ್ಥಗಿತಗೊಳಿಸಲು ಕೋರ್ಟ್ ನಿರಾಕರಿಸಿತು. ಕೆಲವು ನಿರ್ದಿಷ್ಟ ವಿಧಿಗಳಿಗೆ ಮಾತ್ರ ತಾತ್ಕಾಲಿಕ ತಡೆ/ರಕ್ಷಣೆ ನೀಡಿತು. | ಸರ್ಕಾರದ ಪ್ರಮುಖ ಶಾಸನ ಸಂಪೂರ್ಣವಾಗಿ ನಿಷ್ಕ್ರಿಯವಾಗದೆ ಬಹುಪಾಲು ಜಾರಿ ಸ್ಥಿತಿಯಲ್ಲಿತ್ತು. ಹೀಗಾಗಿ ʼblanket stayʼ(ಸಂಪೂರ್ಣ ತಡೆ) ಸಿಗದಿರುವುದು ಸರ್ಕಾರಕ್ಕೆ ಅನುಕೂಲಕರ ಫಲಿತಾಂಶವೆನಿಸಿತು. |
| ಬಿಹಾರ SIR – 2025–26 | SIR ಪ್ರಕ್ರಿಯೆಯನ್ನು ಶುರುವಿನಲ್ಲೇ ಸ್ಥಗಿತಗೊಳಿಸಲಿಲ್ಲ; ಬದಲಾಗಿ ಗುರುತು ಚೀಟಿಯಾಗಿ Aadhaar ಸ್ವೀಕಾರ, ಹೊರಗುಳಿದ ಮತದಾರರ ಪಟ್ಟಿ ಪ್ರಕಟಣೆ ಮುಂತಾದ ರಕ್ಷಣಾತ್ಮಕ ನಿರ್ದೇಶನಗಳನ್ನು ನೀಡಿತು. ಕೊನೆಗೆ 2026ರ ಮೇ 27ರಂದು SIRನ ಕಾನೂನು ಮಾನ್ಯತೆಯನ್ನು ಎತ್ತಿಹಿಡಿಯಿತು. | ಚುನಾವಣೆಗೂ ಮುನ್ನ ಪ್ರಕ್ರಿಯೆಯನ್ನು ನಿಲ್ಲಿಸದೆ ಮುಂದುವರಿಯಲು ಅವಕಾಶವಾಯಿತು. ಇದರಿಂದಾಗಿ ಬಿಹಾರದಲ್ಲಿ ಬಿಜೆಪಿ ಗೆಲುವಿಗೆ ಅನುಕೂಲವಾಯಿತೆಂಬ ವಾದವಿದೆ. |
| Article 370 – 2019 ಕ್ರಮದ ಮೇಲಿನ 2023ರ ತೀರ್ಪು | ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೇಂದ್ರದ 2019ರ ಕ್ರಮದ ಪ್ರಮುಖ ಭಾಗಗಳನ್ನು ಸುಪ್ರೀಂ ಕೋರ್ಟ್ ಮಾನ್ಯಗೊಳಿಸಿತು. | ಮೋದಿ ಸರ್ಕಾರದ ಅತ್ಯಂತ ಪ್ರಮುಖ ರಾಜಕೀಯ–ಸಂವಿಧಾನಾತ್ಮಕ ನಿರ್ಧಾರಕ್ಕೆ ನ್ಯಾಯಾಂಗದ ಮಾನ್ಯತೆ ದೊರಕಿತು. ಇದು ಸರ್ಕಾರಕ್ಕೆ ಅತ್ಯಂತ ದೊಡ್ಡ ರಾಜಕೀಯ ಗೆಲವು ಎನಿಸಿತು. |
| PMLA / ED ಅಧಿಕಾರಗಳು – Vijay Madanlal Choudhary, 2022 | PMLA ಅಡಿಯಲ್ಲಿ EDಗೆ ನೀಡಿರುವ ಬಂಧನ, ಶೋಧ, ಜಪ್ತಿ ಮತ್ತು ಕಠಿಣ ಜಾಮೀನು ವ್ಯವಸ್ಥೆಯ ಬಹುಪಾಲು ಅನಿರ್ಬಂಧಿತ ಅಧಿಕಾರಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. | ಕೇಂದ್ರದ ಪ್ರಮುಖ ತನಿಖಾ ಸಂಸ್ಥೆಯಾದ EDಯ ಬಲವಾದ ಕಾನೂನು ಅಧಿಕಾರಗಳು ಮುಂದುವರಿದವು. ವಿರೋಧ ಪಕ್ಷಗಳು ED ದುರುಪಯೋಗದ ಆರೋಪ ಮಾಡುತ್ತಿದ್ದ ಸಂದರ್ಭದಲ್ಲಿ ಇದರಿಂದ ಕೇಂದ್ರಕ್ಕೆ ಸಾಂಸ್ಥಿಕವಾಗಿ ಅನುಕೂಲವಾಯಿತು ಎಂಬ ಟೀಕೆ ಬಂತು. |
| ನೋಟು ಅಮಾನ್ಯೀಕರಣ – ಜನವರಿ 2, 2023 | 2016ರ demonetisation ನಿರ್ಧಾರವನ್ನು ಕೋರ್ಟ್ ರದ್ದುಪಡಿಸಲಿಲ್ಲ; ನಿರ್ಧಾರದ ಅಧಿಕಾರವನ್ನು ಬಹುಮತದಿಂದ ಮಾನ್ಯಗೊಳಿಸಿತು. | ಮೋದಿ ಸರ್ಕಾರದ ಅತ್ಯಂತ ವಿವಾದಾತ್ಮಕ ಆರ್ಥಿಕ ನಿರ್ಧಾರವೊಂದಕ್ಕೆ ಹಲವು ವರ್ಷಗಳ ನಂತರ ಕಾನೂನು ಮಾನ್ಯತೆ ಸಿಕ್ಕಿತು. |
ಆರ್‌ಎಸ್‌ಎಸ್ ಅಥವಾ ಇತರ ಸೈದ್ಧಾಂತಿಕ ಸಂಘಟನೆಗಳನ್ನು ಡೀಪ್‌ಸ್ಟೇಟ್ ಎನ್ನಬಹುದೇ?
ಆರ್‌ಎಸ್‌ಎಸ್ ಕುರಿತು ಅದರ ವಿಮರ್ಶಕರು, ‘RSS ಚುನಾವಣೆಯಲ್ಲಿ ನೇರವಾಗಿ ಸ್ಪರ್ಧಿಸದಿದ್ದರೂ ರಾಜಕೀಯ ಪಕ್ಷ, ಸರ್ಕಾರ, ಶಿಕ್ಷಣ, ಸಂಸ್ಕೃತಿ, ಕಾರ್ಮಿಕ, ವಿದ್ಯಾರ್ಥಿ, ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ವಿಶಾಲ ಜಾಲದ ಮೂಲಕ ರಾಜ್ಯದ ನೀತಿಗಳ ಮೇಲೆ ಪ್ರಭಾವ ಬೀರುತ್ತದೆ’ ಎಂದು ವಾದಿಸಿದರೆ, ಅದರ ಬೆಂಬಲಿಗರು ಇದನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿರುವ ಸ್ವಯಂಸೇವಾ ಸಾಮಾಜಿಕ ಸಂಘಟನೆಯೆಂದು ವಿವರಿಸುತ್ತಾರೆ. ಆದರೆ ಸರ್ಕಾರದ ನೇಮಕಾತಿಗಳು, ಶಿಕ್ಷಣ ಸಂಸ್ಥೆಗಳು, ತನಿಖಾ ವ್ಯವಸ್ಥೆ, ಮಾಧ್ಯಮ ಮತ್ತು ಆಡಳಿತದೊಳಗೆ ದೀರ್ಘಕಾಲಿಕ ಪ್ರಭಾವ ಬೆಳೆಸಿಕೊಂಡು, ಅಧಿಕೃತ ಹೊಣೆಗಾರಿಕೆಗೆ ಒಳಗಾಗದೆ ಯಾವುದೇ ಸೈದ್ಧಾಂತಿಕ ಸಂಸ್ಥೆಯೊಂದು ಸಾರ್ವಜನಿಕ ನೀತಿಯನ್ನು ನಿರ್ಧರಿಸಿದರೆ ಅದನ್ನು ಸೈದ್ಧಾಂತಿಕ ಡೀಪ್‌ಸ್ಟೇಟ್ ಎಂದು ಕರೆಯಲಾಗುತ್ತದೆ.
ಹೀಗೆ ದೇಶದ ಕೆಲವು ಸಂಸ್ಥೆಗಳಲ್ಲಿ ಕಾರ್ಯಾಂಗದ ಪ್ರಭಾವ ಹೆಚ್ಚಾಗಿರುವ ಸೂಚನೆಗಳಿವೆ; ಅದೇ ಸಮಯದಲ್ಲಿ ಸಾರ್ವಜನಿಕ ಒತ್ತಡ ಹೆಚ್ಚಿದಾಗ ಕೆಲವು ಸಂಸ್ಥೆಗಳು ಸರ್ಕಾರಕ್ಕೆ ಪ್ರತಿರೋಧವನ್ನೂ ಒಡ್ಡುತ್ತಿರುವುದು ಗಮನಾರ್ಹ.
ʼಚುನಾವಣಾ ಬಾಂಡ್‌ಗಳ ಮೂಲಕ ಕಾಣಿಸಿಕೊಂಡ ಸರ್ಕಾರ–ಕಾರ್ಪೊರೇಟ್ ಹಣಕಾಸಿನ ಸಂಬಂಧ, ವಿರೋಧ ಪಕ್ಷಗಳ ವಿರುದ್ಧ ED ಮತ್ತು ಆದಾಯ ತೆರಿಗೆ ಇಲಾಖೆಯ ದಾಳಿಗಳು ಕುರಿತು ಎದ್ದಿರುವ ಆರೋಪಗಳು, ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಕಾರ್ಯಾಂಗಕ್ಕೆ ದೊರೆತಿರುವ ನಿರ್ಣಾಯಕ ಒತ್ತು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ರಾಜಕೀಯ ಪ್ರಭಾವಿ ಉದ್ಯಮ ಸಮೂಹಗಳ ಹೆಚ್ಚುತ್ತಿರುವ ಒಡೆತನ—ಇವೆಲ್ಲವೂ ಭಾರತದಲ್ಲಿ ರಾಜಕೀಯ ಅಧಿಕಾರ ಮತ್ತು ವಿವಿಧ ಪ್ರಬಲ ಸಂಸ್ಥೆಗಳ ನಡುವಿನ ಗಡಿ ಎಷ್ಟು ತೆಳುವಾಗಿದೆ ಎಂಬ ಗಂಭೀರ ಪ್ರಶ್ನೆಯನ್ನು ಎತ್ತುತ್ತವೆ
Deep Stateನ ‘ಸಾಧಕ’ಗಳೇನು?
ಕಾನೂನುಬಾಹಿರ ಮತ್ತು ಉತ್ತರದಾಯಿತ್ವ ಇಲ್ಲದ Deep Stateಗೆ ಹಲವು ಪ್ರಯೋಜನಗಳಿವೆಯೇ ಹೊರತು ನೇರವಾಗಿ ಪ್ರಜಾಪ್ರಭುತ್ವಕ್ಕೆ ಇದರಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ.
ಆದರೆ, ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾದರೂ ದೇಶದ ವಿದೇಶಾಂಗ ನೀತಿ, ಅಣುಸುರಕ್ಷತೆ, ರಕ್ಷಣಾ ವ್ಯವಸ್ಥೆ, ತೆರಿಗೆ ಸಂಗ್ರಹ, ವಿಪತ್ತು ನಿರ್ವಹಣೆ ಮತ್ತು ಆಡಳಿತದ ತಾಂತ್ರಿಕ ಜ್ಞಾನ, ಹಾಗೂ ಸಾಂಸ್ಥಿಕ ಸ್ಮರಣೆ ಜೋಪಾನವಾಗಿ ಹಸ್ತಾಂತರ ಆಗುವುದು ಸರ್ಕಾರದ ನಿರಂತರತೆಗೆ ಅತ್ಯಗತ್ಯ.
ಕಾನೂನಿಗಿಂತ ‘ರಾಷ್ಟ್ರಹಿತ’ ಮುಖ್ಯವೇ?
ಇನ್ನೊಂದು ಮಹತ್ವದ ಲಾಭವೆಂದರೆ ಸಂವಿಧಾನಾತ್ಮಕ ನಿಯಂತ್ರಣ. Deep State ಮಾದರಿ ಚಿಂತನೆಯ ಮೂಲದಲ್ಲಿ ಕೆಲವೊಮ್ಮೆ ʼಕಾನೂನು ಏನು ಹೇಳುತ್ತದೆ ಎಂಬುದಕ್ಕಿಂತ ದೇಶದ ಹಿತ ಮುಖ್ಯವಾಗುತ್ತದೆ; ದೇಶದ ನಿಜವಾದ ಹಿತ ಏನು ಎಂಬುದು ತನಗೇ ಚೆನ್ನಾಗಿ ಗೊತ್ತುʼ ಎನ್ನುವ ಅಪಾಯಕಾರಿ ಧೋರಣೆ ಸರ್ಕಾರದ ಸೂತ್ರ ಹಿಡಿರುವವರಲ್ಲಿ ಕಂಡುಬರುತ್ತದೆ. ಇದು ಆರಂಭದಲ್ಲಿ ಆಕರ್ಷಕವಾಗಿ ಕಂಡರೂ ʼರಾಷ್ಟ್ರಹಿತʼವನ್ನು ಯಾರು ನಿರ್ಧರಿಸುತ್ತಾರೆ? ಸಂವಿಧಾನವೇ? ಸಂಸತ್ತೇ? ಜನರೇ? ನ್ಯಾಯಾಲಯವೇ? ಅಥವಾ ಕೆಲವೇ ಸೇನಾ ಅಥವಾ ಗುಪ್ತಚರ ಅಧಿಕಾರಿಗಳೇ? ರಾಜ್ಯಶಕ್ತಿಯ ಮೂರು ಅಂಗಗಳಲ್ಲಿ ಯಾವುದೇ ಒಂದು ಅಂಗ ʼನಾನೇ ದೇಶ, ನನಗೇ ಚೆನ್ನಾಗಿ ಗೊತ್ತುʼ ಎಂದುಕೊಳ್ಳಲು ಆರಂಭಿಸಿದಾಗ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತದೆ.
Deep Stateನ ದೊಡ್ಡ ಅಪಾಯ: ಮತದಾನದ ಅರ್ಥವೇ ಕುಗ್ಗುತ್ತದೆ
ಪ್ರಜಾಪ್ರಭುತ್ವದ ಮೂಲ ತತ್ವ ಬಹಳ ಸರಳ: ಆಡಳಿತ ನಡೆಸುವವರನ್ನು ಜನರು ಆಯ್ಕೆ ಮಾಡಬೇಕು ಮತ್ತು ಅವರು ಜನರಿಗೆ ಉತ್ತರದಾಯಕರಾಗಬೇಕು. ಆದರೆ ಮತದಾರರು ಒಂದು ನೀತಿಗೆ ಮತ ಹಾಕಿದ ನಂತರವೂ ಚುನಾಯಿತ ಸರ್ಕಾರಕ್ಕೆ ಅದನ್ನು ಜಾರಿಗೆ ತರಲು ಅವಕಾಶವಿಲ್ಲದೆ, ಹಿನ್ನಲೆಯ ಯಾವುದೋ ಉತ್ತರದಾಯಿತ್ವವಲ್ಲದ ಶಕ್ತಿ ಅದನ್ನು ತಡೆಯುತ್ತಿದ್ದರೆ ಚುನಾವಣೆ ನಿಧಾನವಾಗಿ ಆಚರಣೆಯಾಗಿ ಮಾತ್ರ ಉಳಿಯುತ್ತದೆ.
ʼನೀವು ಮತವನ್ನು ಯಾರಿಗೆ ಬೇಕಾದರೂ ಹಾಕಿ ಗೆಲ್ಲಿಸಿಕೊಳ್ಳಿ; ಆದರೆ ಅಂತಿಮವಾಗಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವವರು ನಾವೇ ಆಗಿರುತ್ತೇವೆ. ಹಗ್ಗ ಎಷ್ಟೇ ಉದ್ದವಿದ್ದರೇನು, ನಿಯಂತ್ರಣದ ಕುಣಿಕೆ ಇರುವುದು ನನ್ನ ಕೈಯಲ್ಲೇ ಎನ್ನುವ ಪರಿಸ್ಥಿತಿಯೇ Deep Stateನ ಅತ್ಯಂತ ಅಪಾಯಕಾರಿ ರೂಪ.
ಉತ್ತರದಾಯಿತ್ವ(accountability) ಇಲ್ಲದ ಅಧಿಕಾರ
ಚುನಾಯಿತ ನಾಯಕ ತಪ್ಪು ಮಾಡಿದರೆ ಚುನಾವಣೆಯಲ್ಲಿ ಸೋಲಿಸಬಹುದು. ಸಚಿವನ ವಿರುದ್ಧ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಪ್ರಶ್ನೆ ಕೇಳಬಹುದು. ನ್ಯಾಯಾಲಯಕ್ಕೆ ಹೋಗಬಹುದು. ಆದರೆ ಗುಪ್ತ ಅಧಿಕಾರ ಜಾಲದ ಕೊರಳಪಟ್ಟಿ ಹಿಡಿದು ಜಗ್ಗಿಸಿ ಕೇಳುವವರಾದರೂ ಯಾರು? ಈ ಜಾಲದ ಸದಸ್ಯರು ಯಾರು ಎಂಬುದೇ ಗೊತ್ತಿಲ್ಲದಿದ್ದರೆ ಉತ್ತರದಾಯಿತ್ವವನ್ನು ಕೇಳುವುದಾದರೂ ಹೇಗೆ? ಈ ಕಾರಣದಿಂದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳಿಗೆ ಕಾನೂನುಬದ್ಧ ಸಂಸದೀಯ ಮೇಲ್ವಿಚಾರಣೆ ಅತ್ಯಗತ್ಯ.
Deep State ಗುರುತಿಸುವಿಕೆ
ಒಂದು ದೇಶದಲ್ಲಿ Deep State ಇದೆ ಎಂಬ ಆರೋಪ ಬಂದಾಗ ʼನಂಬಬೇಕಾ, ಬೇಡವಾ?ʼ ಎಂಬುದಕ್ಕಿಂತ ಅಧಿಕಾರ ಯಾರ ಕೈಯಲ್ಲಿದೆ? ಆ ಅಧಿಕಾರಕ್ಕೆ ಸಂವಿಧಾನಿಕ ಆಧಾರ ಇದೆಯೇ? ಆ ಸಂಸ್ಥೆಯ ಬಜೆಟ್‌ನ್ನು ಸಂಸತ್ತು ಪರಿಶೀಲಿಸಬಹುದೇ? ಅದರ ಮುಖ್ಯಸ್ಥರನ್ನು ಪ್ರಶ್ನಿಸುವ ವ್ಯವಸ್ಥೆಯಿದೆಯೇ? ಅದರ ಕ್ರಮಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗಬಹುದೇ? ಅದು ಚುನಾವಣಾ ರಾಜಕೀಯದಲ್ಲಿ ಕೈ ಹಾಕದೆ ತಟಸ್ಥವಾಗಿದೆಯೇ? ಮಾಧ್ಯಮ ಮತ್ತು ರಾಜಕೀಯ ಪಕ್ಷಗಳನ್ನು ಗುಪ್ತವಾಗಿ ಪ್ರಭಾವಿಸುತ್ತಿದೆಯೇ ಇಲ್ಲವೇ? ತನ್ನದೇ ಆರ್ಥಿಕ ಹಿತಾಸಕ್ತಿಗಳನ್ನು ಹೊಂದಿದೆಯೇ? ಕಾನೂನುಬಾಹಿರ ಕಾರ್ಯಾಚರಣೆಗೆ ಸಾಕ್ಷ್ಯವಿದೆಯೇ ಎನ್ನುವಂತಹ ಪ್ರಶ್ನೆಗಳಿಗೆ ದೊರೆಯುವ ಉತ್ತರಗಳಲ್ಲಿ ಮಾತ್ರ Deep State ಇದೆಯೇ ಇಲ್ಲವೇ ಎಂದು ಹೇಳಬಹುದು.
Deep Stateಗೆ ಪರಿಹಾರವಿದೆಯೇ?
ಪ್ರತಿಯೊಂದು ಶಾಶ್ವತ ಸಂಸ್ಥೆಯನ್ನೂ ನಾಶಮಾಡುವುದು ಪರಿಹಾರವಲ್ಲ. ಸೇನೆ ದುರ್ಬಲವಾಗಬೇಕು, ಗುಪ್ತಚರ ವ್ಯವಸ್ಥೆ ಇಲ್ಲವಾಗಬೇಕು ಅಥವಾ ಅಧಿಕಾರಿಗಳು ರಾಜಕೀಯ ನಾಯಕರಿಗೆ ಪ್ರಶ್ನಾತೀತವಾಗಿ ವಿಧೇಯರಾಗಬೇಕು ಎನ್ನುವುದೂ ಪ್ರಜಾಪ್ರಭುತ್ವವಲ್ಲ. ಸಬಲ ಸಂಸ್ಥೆಗಳು + ಬಲವಾದ ಉತ್ತರದಾಯಿತ್ವವೇ ನಿಜವಾದ ಪರಿಹಾರ.
ಸೇನೆ ಬಲವಾಗಿರಲಿ, ಆದರೆ ಅದು ನಾಗರಿಕ ಸರ್ಕಾರಕ್ಕೆ ಉತ್ತರದಾಯಿ ಆಗಿರಬೇಕು. ಗುಪ್ತಚರ ಸಂಸ್ಥೆ ಪರಿಣಾಮಕಾರಿಯಾಗಿರಲಿ, ಆದರೆ ಅದು ಕಾನೂನು ಮತ್ತು ಸಂಸತ್ತಿನ ಲಂಗು ಲಗಾಮಿಗೆ ಒಳಪಟ್ಟಿರಬೇಕು. ಅಧಿಕಾರಶಾಹಿ ವೃತ್ತಿಪರವಾಗಿರಲಿ, ಆದರೆ ಕಾನೂನುಬದ್ಧ ನೀತಿಯನ್ನು ಜಾರಿಗೆ ತರಬೇಕು. ನ್ಯಾಯಾಂಗ ಸ್ವತಂತ್ರವಾಗಿರಬೇಕು. ಮಾಧ್ಯಮ ಸಂಸ್ಥೆಗಳು ಸರ್ಕಾರದಿಂದಲೂ ಉದ್ಯಮ ಹಿತಾಸಕ್ತಿಯಿಂದಲೂ ಸಾಧ್ಯವಾದಷ್ಟೂ ಸ್ವತಂತ್ರವಾಗಿರಬೇಕು. ರಕ್ಷಣಾ ಮತ್ತು ಭದ್ರತಾ ವೆಚ್ಚಕ್ಕೂ ಸೂಕ್ತ ಲೆಕ್ಕ ಪರಿಶೋಧನೆ ಮತ್ತು ಶಾಸಕಾಂಗ ಪರಿಶೀಲನೆ ಇರಬೇಕು.
ಅಂತಿಮವಾಗಿ ‘ಡೀಪ್‌ಸ್ಟೇಟ್ ನಡೆಯುತ್ತಿದೆಯೇ?ʼ ಎನ್ನುವುದು ಅಸಲು ಸಮಸ್ಯೆಯಲ್ಲ. ಅಧಿಕಾರ ಎಷ್ಟೇ ಆಳವಾಗಿ ಬೇರೂರಿದ್ದರೂ ಅದು ಸಂವಿಧಾನ, ಕಾನೂನು ಮತ್ತು ಸಾರ್ವಜನಿಕ ಉತ್ತರದಾಯಿತ್ವಕ್ಕೆ ಅಧೀನವಾಗಿದೆಯೇ ಎನ್ನುವುದೇ ನಿಜ ಪ್ರಶ್ನೆ.
ಇದನ್ನೂ ಓದಿದ್ದೀರಾ? Deep State ಎಂಬ ಅದೃಶ್ಯ ಅಧಿಕಾರ; ಚುನಾಯಿತ ಸರ್ಕಾರದ ಹಿಂದಿನ ಕಾಣದ ಕೈಗಳ ಕಾರಸ್ಥಾನ ಬಲ್ಲಿರಾ?
Deep State ಎಂದರೆ ಗುಪ್ತಚರ ಸಂಸ್ಥೆ, ಸೇನೆ, ಶ್ರೀಮಂತರ ಗುಂಪು ಎನ್ನವುದಕ್ಕಿಂತ ಚುನಾಯಿತ ಮತ್ತು ಅಧಿಕೃತ ಸರ್ಕಾರದ ಹಿಂದೆ ಅಥವಾ ಅದರೊಳಗೆ, ಜನರಿಗೆ ನೇರವಾಗಿ ಉತ್ತರದಾಯಿ ಅಲ್ಲದ ರಹಸ್ಯ ಅಧಿಕಾರ ಜಾಲವು ಪ್ರಮುಖ ರಾಜ್ಯ ನೀತಿ ಮತ್ತು ರಾಜಕೀಯ ಫಲಿತಾಂಶಗಳನ್ನು ಪ್ರಭಾವಿಸುವ ಸ್ಥಿತಿ ಎಂದು ಅರ್ಥಮಾಡಿಕೊಳ್ಳಬೇಕು.
ಪ್ರಜಾಪ್ರಭುತ್ವದಲ್ಲಿ ನಿಜವಾದ ಪರೀಕ್ಷೆ ಮತ್ತೊಂದಿದೆ: ದೇಶದ ಅತ್ಯಂತ ಶಕ್ತಿಶಾಲಿ ಸಂಸ್ಥೆಯನ್ನೂ ಜನರಿಂದ ರಚಿಸಲ್ಪಟ್ಟ ಸಂವಿಧಾನ ಮತ್ತು ಕಾನೂನು ಪ್ರಶ್ನಿಸಬಹುದೇ? ಅದರ ಅಧಿಕಾರದ ಲೆಕ್ಕ ಕೇಳಬಹುದೇ? ʼಹೌದುʼ ಎಂಬ ಉತ್ತರ ಎಷ್ಟು ಹೆಚ್ಚು ದೊರೆಯುವುದೋ ಅಷ್ಟೂ ಅದು ಜನತಾಂತ್ರಿಕ ರಾಜ್ಯ ಎನಿಸುತ್ತದೆ. ʼಇಲ್ಲʼ ಎನ್ನುವ ಉತ್ತರ ಹೆಚ್ಚು ದೊರೆತಷ್ಟೂ ಅಲ್ಲಿ ‘Deep State’ ಬೇರು ಬಿಟ್ಟಿರುವ ಸುಳಿವುಗಳು ಹೆಚ್ಚಾಗಿ ತಲೆದೋರುತ್ತವೆ.




