ಉತ್ತರಾಖಂಡ ರಾಜ್ಯದಲ್ಲಿ ನಡೆದ ‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಪ್ರಕ್ರಿಯೆಯ ನಂತರ ಭಾರತೀಯ ಚುನಾವಣಾ ಆಯೋಗವು (ಇಸಿಐ) ಶನಿವಾರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಆದಾಗ್ಯೂ, ಈ ಬೃಹತ್ ಮತದಾರರ ನೋಂದಣಿ ಅಭಿಯಾನವು ಇನ್ನೂ ಸಂಪೂರ್ಣವಾಗಿ ಕೊನೆಗೊಂಡಿಲ್ಲ.
ಪ್ರಸ್ತುತ ಅಂತಿಮ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 71,58,949 ನೋಂದಾಯಿತ ಮತದಾರರಿದ್ದಾರೆ. ಇದರಲ್ಲಿ 37,37,701 ಪುರುಷರು, 34,21,036 ಮಹಿಳೆಯರು ಹಾಗೂ 212 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ. ಆಕ್ಷೇಪಣೆಗಳ ಪರಿಶೀಲನೆಯ ನಂತರ 1,29,872 ಹೊಸ ಮತದಾರರನ್ನು ಸೇರಿಸಲಾಗಿದ್ದು, 1,04,708 ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. 18-19 ವಯಸ್ಸಿನ 72,656 ಯುವ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 1,22,892 ಹಿರಿಯ ನಾಗರಿಕರು ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ SIR | ಒಬ್ಬರೇ ವ್ಯಕ್ತಿಯಿಂದ 5,906 ಆಕ್ಷೇಪಣಾ ಅರ್ಜಿ; ಕಾಂಗ್ರೆಸ್ ಆರೋಪವೇನು?
ಅಂತಿಮ ಪಟ್ಟಿ ಪ್ರಕಟಗೊಂಡಿದ್ದರೂ, SIR ಪ್ರಕ್ರಿಯೆಯ ಪೂರ್ವದಲ್ಲಿದ್ದ ಮತದಾರರ ಪಟ್ಟಿ ಹಾಗೂ ಪ್ರಸ್ತುತ ಬಿಡುಗಡೆಯಾದ ಪಟ್ಟಿಯನ್ನು ಬೂತ್ ಮಟ್ಟದ ಅಧಿಕಾರಿಗಳು (BLO) ಹೋಲಿಸಿ ಪರಿಶೀಲಿಸಲಿದ್ದಾರೆ. ಈ ಪರಿಶೀಲನೆ ವೇಳೆ ಪಟ್ಟಿಯಿಂದ ಹೆಸರು ಬಿಟ್ಟುಹೋಗಿರುವ ಅರ್ಹ ಮತದಾರರ ಪ್ರತ್ಯೇಕ ಪಟ್ಟಿಯನ್ನು ತಯಾರಿಸಲಾಗುತ್ತದೆ.
ಅಂತಹ ಬಿಟ್ಟುಹೋದ ಮತದಾರರ ಮನೆಗಳಿಗೆ BLOಗಳು ಖುದ್ದಾಗಿ ಭೇಟಿ ನೀಡಿ, ‘ಫಾರ್ಮ್ 6’ (Form 6) ಭರ್ತಿ ಮಾಡಲು ನೆರವಾಗಲಿದ್ದಾರೆ. ಜೊತೆಗೆ ಅರ್ಹರು ‘ECI Net’ ಆ್ಯಪ್ ಮೂಲಕವೂ ಹೆಸರು ನೋಂದಾಯಿಸಿಕೊಳ್ಳಲು ಆಯೋಗ ಅವಕಾಶ ಕಲ್ಪಿಸಿದೆ. ರಾತ್ರಿ ನಿವಾರಣಾ ಕೇಂದ್ರಗಳು, ಕಾರ್ಮಿಕರ ಕಾಲೋನಿಗಳು ಮತ್ತು ವಸತಿ ರಹಿತ ವರ್ಗದವರನ್ನು ತಲುಪಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.




