ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಸಿಪಿಜೆ ಆಯೋಜಿಸಿದ್ದ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸರಿಂದ ಮುನ್ನೆಚ್ಚರಿಕೆ ಬಂಧನಕ್ಕೊಳಗಾಗಿ, ನಂತರ ಬಿಡುಗಡೆಯಾಗಿರುವ ಸಿಪಿಜೆ ನಾಯಕ ಅಭಿಜೀತ್ ದೀಪ್ಕೆ, ತಾವು ಭವಿಷ್ಯದಲ್ಲಿ ಪ್ರತಿಭಟನೆ ನಡೆಸದಂತೆ ತಡೆಯುವ ಯಾವುದೇ ಬಾಂಡ್‌ಗೆ ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ದೆಹಲಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಬಂಧಿಸಿ ದೆಹಲಿ ಕ್ಯಾಂಟ್‌ನ ಎಸ್‌ಇಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ₹50,000 ಗಳ ಶ್ಯೂರಿಟಿ ಬಾಂಡ್ ಆಧಾರದ ಮೇಲೆ, ಒಂದು ವರ್ಷದ ಅವಧಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಶರತ್ತಿನ ಮೇಲೆ ನ್ಯಾಯಾಲಯ ಅವರಿಗೆ ಜಾಮೀನು ಮಂಜೂರು ಮಾಡಿದೆ. ಆದರೆ ಪ್ರತಿಭಟನೆಯೇ ನಡೆಸಲ್ಲವೆಂದು ಬಾಂಡ್‌ಗೆ ಸಹಿ ಹಾಕಿದ್ದಾರೆ ಎಂಬ ಸುಳ್ಳು ಸುದ್ದಿ ಹರಡುತ್ತಿದೆ.
ಇದನ್ನೂ ಓದಿ: ಸಂಸದನೆಂದು ಹೇಳಿದರೂ ಬಿಡದೆ ಹಲ್ಲೆ, ಉಸಿರುಗಟ್ಟಿಸಲು ಯತ್ನ: ಸಿಆರ್‌ಪಿಎಫ್ ವಿರುದ್ಧ ಸಿಪಿಐಎಂ ಎಂಪಿ ಗಂಭೀರ ಆರೋಪ
ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯಿಸಿದ ಅಭಿಜೀತ್ ದೀಪ್ಕೆ, “ನಾವು ಬಿಡುಗಡೆಯಾಗಲು ಸಹಿ ಮಾಡಿರುವುದು ಕೇವಲ ಸಾರ್ವಜನಿಕ ಶಾಂತಿ ಕಾಪಾಡುವ ಬಾಂಡ್‌ಗೆ ಹೊರತು, ಪ್ರತಿಭಟನೆ ಅಥವಾ ಹೋರಾಟ ತಡೆಯುವ ನಿಷೇಧಕ್ಕಲ್ಲ. ಭವಿಷ್ಯದಲ್ಲಿ ನಾವು ಮತ್ತೆ ರಸ್ತೆಗಿಳಿದು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಮ್ಮ ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ” ಎಂದು ಹೇಳಿದ್ದಾರೆ.
ಸಿಪಿಜೆ ಸಂಘಟನೆಯು ದೆಹಲಿಯ ಜಂತರ್ ಮಂತರ್ ಬಳಿ ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿ, ನಾಯಕರನ್ನು ವಿಮಾನ ನಿಲ್ದಾಣದಿಂದಲೇ ವಶಕ್ಕೆ ಪಡೆದಿದ್ದರು.




