ಆಭರಣ ಬ್ರ್ಯಾಂಡ್ ಒಂದರ ರಕ್ಷಾಬಂಧನ ಜಾಹೀರಾತಿನಲ್ಲಿ ನಟಿ ಕೃತಿ ಸನೋನ್ ಅವರು ಧರಿಸಿದ್ದ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಈ ವಿವಾದದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೃತಿ ಬೆಂಬಲಕ್ಕೆ ನಿಂತಿದ್ದಾರೆ.
ನಟಿ ಕೃತಿ ಸನೋನ್ ಅವರ ಹೇಳಿಕೆಯನ್ನು ಮಂಗಳವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಮಹಿಳೆಯರ ಉಡುಪು ಮತ್ತು ಜೀವನಶೈಲಿಯ ಆಯ್ಕೆಯ ಮೇಲೆ ಆನ್‌ಲೈನ್‌ನಲ್ಲಿ ನಿರ್ಬಂಧ ಹೇರುವ ಪ್ರಯತ್ನಗಳನ್ನು ಖಂಡಿಸಿದ್ದಾರೆ. “ಮಹಿಳೆಯೊಬ್ಬಳು ಏನನ್ನು ಧರಿಸಬೇಕು, ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬುದು ಸಂಪೂರ್ಣವಾಗಿ ಆಕೆಯ ವೈಯಕ್ತಿಕ ಆಯ್ಕೆ. ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸುವುದಕ್ಕಾಗಿ ಅವರನ್ನು ಆನ್‌ಲೈನ್‌ನಲ್ಲಿ ಟ್ರೋಲ್ ಮಾಡುವುದನ್ನು (ನಿಂದಿಸುವುದನ್ನು) ನಿಲ್ಲಿಸಿ” ಎಂದು ರಾಹುಲ್ ಕಿಡಿಕಾರಿದ್ದಾರೆ.
ರಕ್ಷಾಬಂಧನದ ಹಿನ್ನೆಲೆಯಲ್ಲಿ ಆಭರಣ ಬ್ರ್ಯಾಂಡ್‌ವೊಂದು ಇತ್ತೀಚೆಗೆ ಜಾಹೀರಾತೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ನಟಿ ಕೃತಿ ಸನೋನ್ ಅವರು ‘ಐವರಿ’ ಬಣ್ಣದ ಬ್ರಾಲೆಟ್ ಹಾಗೂ ಸ್ಕರ್ಟ್ (Ivory bralette-and-skirt) ಧರಿಸಿ ರಾಖಿ ಕಟ್ಟುವ ದೃಶ್ಯವಿತ್ತು. ಈ ಉಡುಪಿನ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಈ ವಿಚಾರ ಕೇವಲ ಜಾಹೀರಾತಿಗೆ ಮಾತ್ರ ಸೀಮಿತವಾಗದೆ, ಮಹಿಳೆಯರ ಉಡುಪು, ಭಾರತೀಯ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ವೈಯಕ್ತಿಕ ಆಯ್ಕೆಯ ಸುತ್ತ ದೊಡ್ಡ ಚರ್ಚೆ ಹುಟ್ಟುಹಾಕಿತ್ತು.
ಈ ಬೆನ್ನಲ್ಲೇ, ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಸಹ ಕೃತಿ ಸನೋನ್ ಅವರ ಜಾಹೀರಾತಿನ ಲುಕ್ ಅನ್ನು ಟೀಕಿಸಿ ವ್ಯಂಗ್ಯವಾಡಿದ್ದರು. ಇದೀಗ ರಾಹುಲ್ ಗಾಂಧಿ ಅವರು ನೇರವಾಗಿ ಕೃತಿ ಸನೋನ್ ಪರ ಧ್ವನಿ ಎತ್ತುವ ಮೂಲಕ, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.




