ಅಂತರ್ಧಮೀಯ ದಂಪತಿ ರಕ್ಷಣೆಗೆ ತೊಡಕಾಗಿರುವ ಮತಾಂತರ ಕಾಯ್ದೆಗಳು

Date:

ಉತ್ತರಪ್ರದೇಶದಲ್ಲಿ ಮತಾಂತರ ಕಾಯ್ದೆಯ ಪರಿಣಾಮವಾಗಿ ಅಂತರ್ಧಮೀಯ ದಂಪತಿ ಮರ್ಯಾದಾ ಹತ್ಯೆಯಂತಹ ಬೆದರಿಕೆಯಿಂದ ರಕ್ಷಣೆಪಡೆಯುವುದು ಕಷ್ಟವಾಗುತ್ತಿದೆ

ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಅಂತರ್ಧಮೀಯ ದಂಪತಿ ರಕ್ಷಣೆಗಾಗಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಿದೆ. ಕಾರಣ? ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾಯ್ದೆಯಡಿ ಮತಾಂತರವಾದ ದಂಪತಿಗಳು ಮತಾಂತರ ಪ್ರಮಾಣಪತ್ರ ಹೊಂದಿರಲೇಬೇಕು. ಮುಖ್ಯವಾಗಿ ಅಂತರ್ಧಮೀಯ ವಿವಾಹವಾದಾಗ ಕುಟುಂಬದವರಿಂದ ಬರುವ ವಿರೋಧ- ದೌರ್ಜನ್ಯದ ವಿರುದ್ಧ ಸರ್ಕಾರಿ ರಕ್ಷಣೆ ಪಡೆಯಲು ಮತಾಂತರ ಪ್ರಮಾಣಪತ್ರ ಇರಬೇಕಾಗುತ್ತದೆ!

ಕರ್ನಾಟಕದಲ್ಲೂ ಒಂದೆಡೆ ರಾಜ್ಯ ಸರ್ಕಾರ ವಿವಾಹ ನೋಂದಣಿಯನ್ನು ಸುಗಮಗೊಳಿಸಲು ಆನ್‌ಲೈನ್‌ನಲ್ಲಿ ನೋಂದಣಿಗೆ ಅವಕಾಶ ಕೊಡಲು ಕಾಯ್ದೆ ತಂದಿದೆ. ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಸಿಕ್ಕರೆ ಅಂತರ್ಧಮೀಯ ವಿವಾಹವಾಗುವವರಿಗೆ ನೋಂದಣಿಗೆ ಬಹಳ ಸರಳ ವಿಧಾನ ಸಿಗಲಿದೆ.  ಆದರೆ ಮತ್ತೊಂದೆಡೆ ಬಿಜೆಪಿ ಸರ್ಕಾರಗಳು ಜಾರಿಗೆ ತಂದಿರುವ ಮತಾಂತರ ಕಾಯ್ದೆಯ ನಿಯಮಗಳು ಅಂತರ್ಧಮೀಯ ವಿವಾಹಿತರಿಗೆ ಸಮಸ್ಯೆ ಒಡ್ಡುತ್ತಿವೆ. 

ಈಗಾಗಲೇ ಉತ್ತರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಮತಾಂತರ ಕಾನೂನಿನ ಪರಿಣಾಮವಾಗಿ ಅಂತರ್ಧಮೀಯ ವಿವಾಹಿತ ದಂಪತಿ ರಕ್ಷಣೆಗಾಗಿ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಭರವಸೆ ನೀಡಿದ್ದರೂ, ಇನ್ನೂ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ಬಿಜೆಪಿ ಅಧಿಕಾರವಿದ್ದ ಅನೇಕ ರಾಜ್ಯಗಳಲ್ಲಿ ಮತಾಂತರ ಕಾಯ್ದೆಗಳನ್ನು ಜಾರಿಗೆ ತಂದಿರುವ ಕಾರಣ, ಮತ್ತು ಬಹುತೇಕ ಕಾಯ್ದೆಗಳು ಉತ್ತರಪ್ರದೇಶದ ಕಾಯ್ದೆಯನ್ನೇ ಮೂಲವಾಗಿಸಿಕೊಂಡು ಸಿದ್ಧವಾಗಿರುವುದರಿಂದ ಅಂತರ್‌ಧರ್ಮೀಯ ವಿವಾಹಿತರು ದೇಶಾದ್ಯಂತ ಮರ್ಯಾದಾ ಹತ್ಯೆಯಂತಹ ಬೆದರಿಕೆಯ ನಡುವೆ ಜೀವನ ನಡೆಸಬೇಕಾಗಿ ಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಲಹಾಬಾದ್ ಹೈಕೋರ್ಟ್‌ ಪ್ರಕರಣ

2023 ಜೂನ್‌ನಲ್ಲಿ ರಾಮಪುರದ ನಿವಾಸಿಯಾಗಿರುವ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಹಿಂದೂ ಸಂಗಾತಿಯೊಂದಿಗೆ ವಿವಾಹವಾಗಿ ಬರೈಲಿಗೆ ಬಂದು ನೆಲೆಸಿದ್ದಾರೆ. ದಂಪತಿ ಬನ್‌ಕೆ ಬಿಹಾರಿ ದೇಗುಲದಲ್ಲಿ ಮದುವೆಯಾದ ಮೇಲೆ ಮಹಿಳೆ ಹಿಂದೂ ಧರ್ಮಕ್ಕೆ ಪರಿವರ್ತನೆಯಾಗಿದ್ದಾರೆ. ಇದೀಗ ಮಹಿಳೆಯ ಕುಟುಂಬದವರು ಮದುವೆ ವಿರೋಧಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದಂಪತಿ ನ್ಯಾಯಾಲಯದ ರಕ್ಷಣೆ ಯಾಚಿಸಿದ್ದಾರೆ. ಜನವರಿ 9ರಂದು ಹೈಕೋರ್ಟ್ ಮತಾಂತರ ಪ್ರಮಾಣಪತ್ರವಿಲ್ಲದೆ ರಕ್ಷಣೆ ನೀಡಲು ನಿರಾಕರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅಲಹಾಬಾದ್ ಹೈಕೋರ್ಟ್ ರಕ್ಷಣೆ ನೀಡಲು ನಿರಾಕರಿಸಿದ ಒಂಬತ್ತನೇ ಅಂತರ್ಧಮೀಯ ವಿವಾಹಿತ ದಂಪತಿ ಇವರು!

ವಿವಾಹಿತರು ರಕ್ಷಣೆಯ ಅಗತ್ಯದಿಂದ ಮತಾಂತರ ಪ್ರಮಾಣಪತ್ರಕ್ಕಾಗಿ ಅರ್ಜಿ ಹಾಕಿದರೂ ಸ್ಥಳೀಯ ಆಡಳಿತ ಪ್ರಮಾಣಪತ್ರ ನೀಡದೆ ತಡಮಾಡುತ್ತಿದೆ. ಮತಾಂತರ ವಿರೋಧಿ ಕಾನೂನು ಅಂತರ್ಧಮೀಯ ದಂಪತಿಗೆ ಯಾವುದೇ ರಕ್ಷಣೆ ನೀಡುವುದಿಲ್ಲ. ಆದರೆ 2021ರಲ್ಲಿ ಉತ್ತರಪ್ರದೇಶದಲ್ಲಿ ಅಳವಡಿಸಲಾದ ಕಾನೂನಿನಿಂದಾಗಿ ನ್ಯಾಯಾಲಯಗಳು ದಂಪತಿಗಳ ರಕ್ಷಣೆಯ ಬೇಡಿಕೆಯನ್ನು ನಿರಾಕರಿಸಲು ಆರಂಭಿಸಿವೆ.

ಮತಾಂತರ ವಿರೋಧಿ ಕಾನೂನು

ಮತಾಂತರ ವಿರೋಧಿ ಕಾನೂನಿನ ಸೆಕ್ಷನ್ 6ರಲ್ಲಿ ಮದುವೆ ಮತ್ತು ಅಕ್ರಮ ಮತಾಂತರದ ವಿವರವಿದೆ. ಸೆಕ್ಷನ್ 8 ಮತ್ತು 9ರಲ್ಲಿ ಮತಾಂತರವಾಗುವ ಮೊದಲು ಮತ್ತು ನಂತರ ಮಾಡಬೇಕಾಗಿರುವ ಘೋಷಣೆಗಳ ವಿವರವಿದೆ. ಹೀಗಾಗಿ ಕಾನೂನು ಪ್ರಕಾರ ಮತಾಂತರವಾಗಿರುವ ವಿವರ ನೀಡಿ, ಮದುವೆಯಾಗಿರುವ ಬಗ್ಗೆ ಹೊಸ ಅರ್ಜಿಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಅಲಹಾಬಾದ್ ಹೈಕೋರ್ಟ್ ಸೂಚಿಸಿದೆ.

ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಅಂತರ್ಧಮೀಯ ಮದುವೆಯಾಗಿ ಸುರಕ್ಷಿತವಾಗಿ ನೆಲೆಸುವುದು ಸುಲಭವಲ್ಲ. 2019ರ ಮಾಧ್ಯಮ ವರದಿಯೊಂದರ ಪ್ರಕಾರ 2015ರಿಂದ 2018ರ ನಡುವೆ ಭಾರತದಲ್ಲಿ 38 ಅಂತರ್ಧಮೀಯ ಸಂಗಾತಿಗಳ ವಿರುದ್ಧ ದೌರ್ಜನ್ಯ ನಡೆದಿರುವುದು ದಾಖಲಾಗಿದೆ. ಅವುಗಳಲ್ಲಿ 15 ಪ್ರಕರಣಗಳು ಉತ್ತರಪ್ರದೇಶದಿಂದಲೇ ವರದಿಯಾಗಿವೆ. 2018ರಲ್ಲಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಅಂತರ್ಧಮೀಯ ವಿವಾಹವಾಗಿ ಊರು ತೊರೆಯುವ ದಂಪತಿಗೆ ಆಶ್ರಯತಾಣಗಳನ್ನು ನಿರ್ಮಿಸುವಂತೆ ಆದೇಶಿಸಿದೆ. ಆದರೆ ಹರಿಯಾಣ, ಪಂಜಾಬ್ ಮತ್ತು ದೆಹಲಿ ಮಾತ್ರ ಇಂತಹ ಆಶ್ರಯತಾಣ ನಿರ್ಮಿಸಿರುವ ಬಗ್ಗೆ ಅಕ್ಟೋಬರ್ 2022ರಲ್ಲಿ ದಿನಪತ್ರಿಕೆಯೊಂದು ವರದಿ ಮಾಡಿದೆ.

ಮತಾಂತರ ದಂಪತಿಗಳ ಗೋಳು

2023 ಫೆಬ್ರವರಿಯಿಂದ ಜನವರಿ 2014ರ ನಡುವೆ ಪಶ್ಚಿಮ ಉತ್ತರ ಪ್ರದೇಶದಿಂದ ಗಾಜಿಯಾಬಾದ್, ಅಮ್ರೋಹ, ಮೊರದಾಬಾದ್, ರಾಮ್‌ಪುರ, ಮೀರತ್, ಸಹಾನ್‌ಪುರ ಹಾಗೂ ಕಾನ್ಪುರದಿಂದ ಏಳು ಮಂದಿ ಅಂತರ್ದಮೀಯ ವಿವಾಹಿತರ ರಕ್ಷಣೆಯ ಮೊರೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮತ್ತೊಬ್ಬ ದಂಪತಿ ಪೂರ್ವ ಉತ್ತರಪ್ರದೇಶದ ವಾರಣಾಸಿಯವರು. ಒಂಭತ್ತು ದಂಪತಿಗಳಲ್ಲಿ ಐವರು ಮಹಿಳೆಯರು ಹಿಂದೂ ಧರ್ಮದಿಂದ ಇಸ್ಲಾಂಗೆ ಪರಿವರ್ತನೆಯಾದರೆ, ಎರಡು ಪ್ರಕರಣಗಳಲ್ಲಿ ಮುಸ್ಲಿಂ ಮಹಿಳೆಯರು ಹಿಂದೂ ಧರ್ಮಕ್ಕೆ ಪರಿವರ್ತನೆಯಾಗಿದ್ದಾರೆ. ಒಬ್ಬ ದಂಪತಿ ಬೌದ್ಧಮತಕ್ಕೆ ಮತಾಂತರಗೊಂಡಿದ್ದಾರೆ.

ಆದರೆ ಈ ಮತಾಂತರ ಕಾಯ್ದೆಯ ಅನುಸಾರವಾಗದೆ ಇರುವುದರಿಂದ ದಂಪತಿಯ ರಕ್ಷಣೆಗೆ ಸಮಸ್ಯೆಯಾಗಿದೆ. “ಮತಾಂತರಗೊಂಡ ಇತರ ದಂಪತಿಗಳು ಪೊಲೀಸರು ಮತ್ತು ಕುಟುಂಬದವರು ಇಬ್ಬರಿಂದಲೂ ಆತಂಕ ಎದುರಿಸುತ್ತಿರುವ ಕಾರಣ, ಮತಾಂತರ ಪ್ರಮಾಣಪತ್ರ ಪಡೆಯುವುದು ಕಠಿಣವೆನಿಸಿದೆ” ಎಂದು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿರುವ ಮಹಿಳೆಯೊಬ್ಬರನ್ನು ಪ್ರತಿನಿಧಿಸಿರುವ ವಕೀಲರೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಮತಾಂತರ ಪ್ರಮಾಣಪತ್ರದ ಕಠಿಣ ಹಾದಿ

2021ರ ಉತ್ತರಪ್ರದೇಶದ ಮತಾಂತರ ಕಾನೂನಿನ ಸೆಕ್ಷನ್ 8ರ ಪ್ರಕಾರ ಮತಾಂತರಕ್ಕೆ 60 ದಿನಗಳಿಗೆ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮುಂದೆ ಧರ್ಮ ಬದಲಿಸುವ ಬಗ್ಗೆ ಘೋಷಣೆ ಮಾಡಬೇಕು. ನಂತರ ಮತಾಂತರ ಪ್ರಕ್ರಿಯೆ ಮಾಡುವವರು ಮತಾಂತರ ಕಾರ್ಯಕ್ರಮಕ್ಕೆ ಒಂದು ತಿಂಗಳು ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟರ್‌ಗೆ ತಿಳಿಸಬೇಕು. ಸ್ಥಳೀಯ ಆಡಳಿತ ಪೊಲೀಸ್ ತನಿಖೆಗೆ ಸೂಚನೆ ನೀಡುತ್ತದೆ. 

ಅಷ್ಟೇ ಅಲ್ಲ, ಸೆಕ್ಷನ್ 9ರ ಪ್ರಕಾರ ಮತಾಂತರವಾಗುವವರು ಜಿಲ್ಲಾಡಳಿತದ ಮುಂದೆ ತಮ್ಮ ಹೆಸರು, ಹೆತ್ತವರ ವಿವರ, ವಿಳಾಸ, ಉದ್ಯೋಗ, ಆದಾಯ, ಮತಾಂತರದ ಮಾಡುವ ಧರ್ಮಗುರುಗಳು ಹಾಗೂ ಸಾಕ್ಷಿಗಳ ಹೆಸರುಗಳನ್ನು ನೀಡಬೇಕು. ಈ ವಿವರಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು. ಅದಾದ ಮೂರು ವಾರಗಳಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಕ್ಷೇಪಗಳನ್ನು ದಾಖಲಿಸಿಕೊಳ್ಳುತ್ತಾರೆ. ಮತಾಂತರಗೊಂಡವರು ಸ್ವತಃ ಮ್ಯಾಜಿಸ್ಟ್ರೇಟ್ ಮುಂದೆ ಬಂದು ತಮ್ಮ ಗುರುತು ನೀಡಬೇಕು. ಈ ಎಲ್ಲಾ ಪ್ರಕ್ರಿಯೆ ಸುಗಮವಾಗಿ ಸಾಗಿದಲ್ಲಿ ಮಾತ್ರ ಮತಾಂತರ ಪ್ರಮಾಣಪತ್ರ ಸಿಗುತ್ತದೆ.

ಸೆಕ್ಷನ್ 6ರಲ್ಲಿ ತಿಳಿಸಿರುವಂತೆ, ಸೆಕ್ಷನ್ 8 ಮತ್ತು 9ರ ಪ್ರಕಾರ ಮತಾಂತರ ಪ್ರಮಾಣಪತ್ರ ಪಡೆಯದಿದ್ದಲ್ಲಿ ಅಕ್ರಮ ಮತಾಂತರವೆಂದು ಪರಿಗಣಿಸಲಾಗುತ್ತದೆ. ಮದುವೆಗೆ ಮೊದಲು ಕಾನೂನು ಪ್ರಕಾರ ಮತಾಂತರವನ್ನು ಸಾಬೀತುಪಡಿಸುವ ಜವಾಬ್ದಾರಿ ಮತಾಂತರಗೊಂಡವರ ಮೇಲೇ ಇರುತ್ತದೆ ಎಂದು ಸೆಕ್ಷನ್ 12 ತಿಳಿಸುತ್ತದೆ. ಮತಾಂತರ ಕಾಯ್ದೆಯ ಸೆಕ್ಷನ್ 4ರಲ್ಲಿ ಹೆತ್ತವರಿಗೆ, ರಕ್ತಸಂಬಂಧಿಗಳಿಗೆ ಮತಾಂತರದ ವಿರುದ್ಧ ಎಫ್‌ಐಆರ್ ದಾಖಲಿಸುವ ಅವಕಾಶವನ್ನೂ ನೀಡಿದೆ.

ಸುಪ್ರೀಂಕೋರ್ಟ್ ತೀರ್ಪಿನ ಅಲಕ್ಷ್ಯ

ಅಲಹಾಬಾದ್‌ ನ್ಯಾಯಾಲಯದಲ್ಲಿ ಅಂತರ್ಧಮೀಯ ದಂಪತಿ ಪರ ವಾದಿಸುತ್ತಿರುವ ವಕೀಲರೊಬ್ಬರ ಪ್ರಕಾರ, ಸುಪ್ರೀಂಕೋರ್ಟ್‌ನ ತೀರ್ಪನ್ನು ಮುಂದಿಟ್ಟು ಅಂತರ್ಧಮೀಯ ದಂಪತಿಗೆ ರಕ್ಷಣೆ ನೀಡುವ ಅವಕಾಶ ನ್ಯಾಯಾಲಯಕ್ಕೆ ಇದೆ. 2006ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಭಾರತಾದ್ಯಂತ ಸ್ಥಳೀಯ ಆಡಳಿತಗಳು ಅಂತರ್ಧಮೀಯ ವಿವಾಹಿತ ದಂಪತಿಗೆ, ಅವರು ಅಪ್ರಾಪ್ತರಾಗಿರದೆ ಇದ್ದಲ್ಲಿ, ಕಿರುಕುಳ, ಬೆದರಿಕೆ ಮತ್ತು ಹಿಂಸೆಯಿಂದ ರಕ್ಷಣೆ ನೀಡಬೇಕು ಎಂದು ಹೇಳಿದೆ. 2020 ನವೆಂಬರ್‌ನಲ್ಲಿ ನ್ಯಾಯಾಲಯ 125 ಅಂತರ್ಧಮೀಯ ದಂಪತಿಗೆ ರಕ್ಷಣೆಯ ಪರವಾಗಿ ಆದೇಶ ನೀಡಿದೆ. ಆದರೆ 2021ರಲ್ಲಿ ಮತಾಂತರ ಕಾಯ್ದೆ ಅನುಷ್ಠಾನಕ್ಕೆ ಬಂದ ನಂತರ ನ್ಯಾಯಾಲಯದ ನಿಲುವು ಬದಲಾಗಿದೆ.ರಾಜಕೀಯ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಗೊಂಡಿದ್ದ ಅಪರಾಧಿ ಸಾವು

ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ, ಬಳಿಕ ಬಿಡುಗಡೆಗೊಂಡಿದ್ದ...

6 ಕಾಂಗ್ರೆಸ್ ಶಾಸಕರನ್ನು ಕರೆದೊಯ್ದ ಸೇನೆ: ಬಿಜೆಪಿ ವಿರುದ್ಧ ಹಿಮಾಚಲ ಪ್ರದೇಶ ಸಿಎಂ ಆರೋಪ

ಅರೆಸೇನಾ ಪಡೆ ಮತ್ತು ರಾಜ್ಯ ಪೊಲೀಸ್‌ ಬೆಂಗಾವಲೊಂದಿಗೆ ಕಾಂಗ್ರೆಸ್‌ನ ಐದರಿಂದ ಆರು...

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮುಂದಿನ ತಿಂಗಳು ಜಾರಿ ಸಾಧ್ಯತೆ

ನೆರೆಯ ದೇಶಗಳಿಂದ ಭಾರತಕ್ಕೆ ಬಂದು ನೆಲಸಿರುವ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ...