‘ಎಲ್ ನಿನೋ’ ಪರಿಣಾಮವಾಗಿ ಚಳಿಗಾಲದಲ್ಲಿ ಹಿಮಾಲಯದ ಹಿಂದು ಕುಶ್ ಪರ್ವತ ಶ್ರೇಣಿಯ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಇದರಿಂದ, ವಿಶೇಷವಾಗಿ ನೇಪಾಳ ಸೇರಿದಂತೆ ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತ ಹಾಗೂ ಹಿಮಪಾತಗಳ ಅಪಾಯ ಹೆಚ್ಚಾಗಲಿದೆ ಎಂದು ಹೊಸ ವರದಿಯೊಂದು ಎಚ್ಚರಿಸಿದೆ.
ಕಠ್ಮಂಡು ಮೂಲದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ICIMOD), ಬೀಜಿಂಗ್ ನಾರ್ಮಲ್ ಯೂನಿವರ್ಸಿಟಿ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಅಟ್ಮೊಸ್ಪೆರಿಕ್ ಫಿಸಿಕ್ಸ್ ಸಂಸ್ಥೆ ಜಂಟಿಯಾಗಿ ಸಿದ್ಧಪಡಿಸಿರುವ ‘ಹಿಂದು ಕುಶ್ ಹಿಮಾಲಯ ಚಳಿಗಾಲದ ಮುನ್ನೋಟ-2026’ (HKH Winter Outlook 2026) ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.
ವರದಿಯ ಪ್ರಕಾರ, ಪ್ರಸ್ತುತ ಪ್ರಬಲದಿಂದ ಅತಿ ಪ್ರಬಲವಾದ ಎಲ್ ನಿನೋ ಪರಿಸ್ಥಿತಿ ನಿರ್ಮಾಣವಾಗಿದೆ. 1950ರಲ್ಲಿ ದಾಖಲೆಗಳನ್ನು ಇಡಲು ಪ್ರಾರಂಭಿಸಿದಾಗಿನಿಂದ ಎದುರಾಗಿರುವ ಅತ್ಯಂತ ಪ್ರಬಲವಾದ ಎಲ್ ನಿನೋ ಇದಾಗಲಿದೆ. ಈ ಹವಾಮಾನ ವೈಪರೀತ್ಯದಿಂದಾಗಿ ಹಿಮಾಲಯದ ತಪ್ಪಲಿನಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗಲಿದೆ. ನೇಪಾಳ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳು ಹೆಚ್ಚಿನ ಪರಿಣಾಮ ಎದುರಿಸಲಿವೆ.
ಇತ್ತೀಚೆಗಷ್ಟೇ, ನೇಪಾಳ ಮತ್ತು ಭೂತಾನ್‌ನಲ್ಲಿ ಭೀಕರ ಮುಂಗಾರು ಮಳೆಯಿಂದಾಗಿ ಎತ್ತರದ ಪರ್ವತಗಳಲ್ಲಿನ ಹಿಮನದಿಗಳು ಮತ್ತು ಹೆಪ್ಪುಗಟ್ಟಿದ ನೆಲದಲ್ಲಿನ ಬದಲಾವಣೆಗಳಿಂದ ಭಾರೀ ವಿನಾಶ ಸಂಭವಿಸಿತ್ತು. ಕಳೆದ ಆಗಸ್ಟ್‌ನಲ್ಲಿ ನೇಪಾಳದ ಭೋಟೆಕೋಶಿಯಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಕನಿಷ್ಠ 1,500 ಜನರು ಬಲಿಯಾಗಿದ್ದರು ಮತ್ತು 5,000ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದರು. ಈ ದುರಂತದ ಪರಿಹಾರ ಮತ್ತು ಪುನರ್ನಿರ್ಮಾಣ ಕಾರ್ಯಗಳಿಗೆ ಸುಮಾರು 4.7 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇಂತಹ ದುರಂತದ ಬೆನ್ನಲ್ಲೇ ಈಗ ಚಳಿಗಾಲದ ಮುನ್ನೋಟವು ಮತ್ತಷ್ಟು ಆತಂಕ ಮೂಡಿಸಿದೆ.
ಹವಾಮಾನ ಮುನ್ನೋಟದ ಪ್ರಕಾರ, ಅಫ್ಘಾನಿಸ್ತಾನ, ಪಾಕಿಸ್ತಾನ, ಉತ್ತರ ಭಾರತ ಹಾಗೂ ನೇಪಾಳದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಆಳವಾದ ಹಿಮ ಸಂಗ್ರಹವಾಗುವ ನಿರೀಕ್ಷೆಯಿದ್ದರೆ, ಭೂತಾನ್ ಮತ್ತು ಚೀನಾದ ಪೂರ್ವ ಕ್ಸಿಜಾಂಗ್ (ಟಿಬೆಟ್) ಭಾಗಗಳಲ್ಲಿ ಹಿಮದ ಪ್ರಮಾಣ ಕಡಿಮೆಯಿರಲಿದೆ. ಮುಂಬರುವ ವರ್ಷದಲ್ಲಿ ನದಿಗಳ ಹರಿವನ್ನು ಕಾಯ್ದುಕೊಳ್ಳಲು ಮತ್ತು ನೀರಿನ ಲಭ್ಯತೆಯನ್ನು ನಿರ್ಧರಿಸಲು ಹಿಮದ ಆಳವು ಅತ್ಯಂತ ನಿರ್ಣಾಯಕವಾಗಿದೆ. ಹಿಮದ ಪ್ರಮಾಣ ಕಡಿಮೆಯಾದರೆ ಅದು ಕೃಷಿ ನೀರಾವರಿ, ಜಲವಿದ್ಯುತ್ ಉತ್ಪಾದನೆ ಮತ್ತು ನೈಸರ್ಗಿಕ ನೀರಿನ ಬುಗ್ಗೆಗಳ ಹರಿವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವರದಿ ವಿವರಿಸಿದೆ.
ಇನ್ನೊಂದೆಡೆ, ತೇವಾಂಶದಿಂದ ಕೂಡಿದ ಚಳಿಗಾಲವಿದ್ದರೂ ಕಾಡ್ಗಿಚ್ಚಿನ ಅಪಾಯವನ್ನು ತಳ್ಳಿಹಾಕುವಂತಿಲ್ಲ ಎಂದು ವರದಿ ಎಚ್ಚರಿಸಿದೆ. ಹಿಂದು ಕುಶ್ ಹಿಮಾಲಯದ ಇತರ ಕೆಲವು ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಹುಲ್ಲು ಮತ್ತು ಸಸ್ಯವರ್ಗಗಳು ಒಣಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿದೆ. ವಿಶೇಷವಾಗಿ ಆಗ್ನೇಯ ಕ್ಸಿಜಾಂಗ್ ಮತ್ತು ಮ್ಯಾನ್ಮಾರ್‌ನ ಕೆಲವು ಭಾಗಗಳಲ್ಲಿ ಕಾಡ್ಗಿಚ್ಚು ಮತ್ತು ಹುಲ್ಲುಗಾವಲು ಬೆಂಕಿಯ ಸಂಭವನೀಯತೆ ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಐಸಿಐಎಂಒಡಿ ಜಲವಿಜ್ಞಾನಿ ಮನೀಶ್ ಶ್ರೇಷ್ಠ ಅವರು, ವಿಪತ್ತು ನಿರ್ವಹಣೆಯ ಸಿದ್ಧತೆಗಳು ಕೇವಲ ಮುಂಗಾರು ಮಳೆಗೆ ಸೀಮಿತವಾಗಬಾರದು. ಪ್ರಸ್ತುತದಲ್ಲಿಯೂ. ಮಳೆಯ ಪ್ರಮಾಣವು ಹೆಚ್ಚು ಅನಿಯಮಿತ ಮತ್ತು ತೀವ್ರವಾಗುತ್ತಿರುವುದರಿಂದ, ಸ್ಥಳೀಯ ಆಡಳಿತಗಳು ಮುಂಚಿತವಾಗಿ ಯೋಜನೆ ರೂಪಿಸಲು ಕಾಲೋಚಿತ ಮುನ್ನೋಟಗಳನ್ನು ಮತ್ತು ಯಾವಾಗ ಹಾಗೂ ಎಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ಅಲ್ಪಾವಧಿಯ ಸ್ಥಳೀಯ ಹವಾಮಾನ ಮುನ್ಸೂಚನೆಗಳನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.


