ರಾಜ್ಯದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುವ ಯೋಜನೆಯಡಿ ಯಾವುದೇ ಕಾರಣಕ್ಕೂ ಕ್ಲಸ್ಟರ್ ಕಿಚನ್ ಸೆಂಟರ್‌ಗಳನ್ನು (ಕೇಂದ್ರೀಕೃತ ಅಡುಗೆ ಕೇಂದ್ರ) ಸ್ಥಾಪಿಸುವುದಿಲ್ಲ. ಈ ಬಗ್ಗೆ ಬಿಸಿಯೂಟ ನೌಕರರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಭರವಸೆ ನೀಡಿದರು.
ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್‌ನ ಗೌರವಾಧ್ಯಕ್ಷ ಎಸ್. ಬಾಲನ್ ಅವರ ನೇತೃತ್ವದ ನಿಯೋಗ ಇಂದು ಸಚಿವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದ ಸಂದರ್ಭದಲ್ಲಿ ಸಚಿವರು ಈ ಭರವಸೆ ನೀಡಿದರು.
ಕೇರಳದಲ್ಲಿ ಬಿಸಿಯೂಟ ನೌಕರರಿಗೆ ₹12 ಸಾವಿರ ವೇತನ ನೀಡಲಾಗುತ್ತಿದೆ. ಅಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿದ್ದು, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರವಿದೆ. ಆದ್ದರಿಂದ ಬಿಸಿಯೂಟ ನೌಕರರ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು ಎಂದು ನಿಯೋಗ ಸಚಿವರಲ್ಲಿ ಮನವಿ ಮಾಡಿತು.
ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು, “ವೇತನ ಹೆಚ್ಚಳದ ನಿರ್ಧಾರ ಕೇವಲ ನನ್ನ ಕೈಯಲ್ಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಖಂಡಿತವಾಗಿಯೂ ಚರ್ಚಿಸುತ್ತೇನೆ. ನಮ್ಮ ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ವೇತನ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಹಿಂದೆ ಬಿಸಿಯೂಟ ನೌಕರರ ಇಡುಗಂಟನ್ನು ₹40 ಸಾವಿರಕ್ಕೆ ಹೆಚ್ಚಿಸಿದ ಹೆಗ್ಗಳಿಕೆ ನಮ್ಮ ಸರ್ಕಾರದ್ದು. ನೀವು ಅತ್ಯಂತ ಶ್ರಮಜೀವಿಗಳು. ನಿಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದೆ” ಎಂದರು.
ಬಿಸಿಯೂಟ ಯೋಜನೆ ಕೇವಲ ರಾಜ್ಯ ಸರ್ಕಾರದ ಯೋಜನೆಯಲ್ಲ. ಕೇಂದ್ರ ಸರ್ಕಾರವೂ ಇದಕ್ಕೆ ಅನುದಾನ ನೀಡುತ್ತದೆ. ಹೀಗಾಗಿ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರದ ಮೇಲೆಯೂ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.
ಕೆಲವು ಕಡೆ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ ಎಂದು ನಿಯೋಗ ಸಚಿವರ ಗಮನಕ್ಕೆ ತಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಧಾನ್ಯ ಪೂರೈಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡಿ. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಶಾಲೆಯ ಮುಖ್ಯಶಿಕ್ಷಕರು ಮತ್ತು ಮುಖ್ಯ ಅಡುಗೆ ಸಿಬ್ಬಂದಿಯ ಜಂಟಿ ಬ್ಯಾಂಕ್ ಖಾತೆ, ಕನಿಷ್ಠ ₹1 ಲಕ್ಷ ಇಡುಗಂಟು, ಮಾಸಿಕ ₹5 ಸಾವಿರ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಿಯೋಗ ಸಚಿವರಿಗೆ ಮನವಿ ಸಲ್ಲಿಸಿತು.
ಸಚಿವರು ಮನವಿ ಸ್ವೀಕರಿಸಿದ ಬಳಿಕ, ಪ್ರತಿಭಟನೆ ನಿಮ್ಮ ಹಕ್ಕು. ಆದರೆ ದಯವಿಟ್ಟು ಬಿಸಿಯೂಟ ನೌಕರರು ಈಗ ಪ್ರತಿಭಟನೆ ಕೈಬಿಡಬೇಕು. ನಿಮ್ಮ ಜೊತೆ ನಾವು ಇದ್ದೇವೆ. ನಮ್ಮ ಸರ್ಕಾರದ ವ್ಯಾಪಿಯಲ್ಲಿ ನಾವು ಏನು ಮಾಡಲು ಸಾಧ್ಯ ಆಗುತ್ತದೋ ಅದನ್ನು ಮಾಡುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಈ ನಿಯೋಗದಲ್ಲಿ ರಾಜ್ಯ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಪ್ರಧಾನ ಕಾರ್ಯದರ್ಶಿ ಕಲ್ಪನಾ ವಿ.ಜಿ., ಖಜಾಂಚಿ ಪುಷ್ಪಲತಾ ಸೇರಿದಂತೆ ಯೂನಿಯನ್‌ನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.



