ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಕನ್ನಡಿಗರ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ವಿಶಿಷ್ಟ ಗುರುತಿನ ಅಸ್ಮಿತೆಯಾಗಿದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ನಗರದ ಚನ್ನಬಸವಾಶ್ರಮದ ಆವರಣದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಹಾಗೂ 327ನೇ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಾಷೆ ಉಳಿದರೆ ಸಂಸ್ಕೃತಿ ಮತ್ತು ಪರಂಪರೆ ಉಳಿಯುತ್ತವೆ. ಹೀಗಾಗಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ನಮ್ಮ ಹಿರಿಯರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡಿದ್ದು, ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಇಂದು ಅಂತಹ ಪರಿಸ್ಥಿತಿ ಇಲ್ಲದಿದ್ದರೂ ನಮ್ಮ ಮನೆಗಳಲ್ಲಿಯೇ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಕನ್ನಡ ಮಾತನಾಡುವ ಮೂಲಕ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್. ಪಾಟೀಲ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವ ಮೂಲಕ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತೇಜಮ್ಮ ಕಟ್ಟಿಮನಿ, ಅಮೀತ ನಿರಂಜನಪ್ಪ ಸೋಲಪುರ, ಗಣೇಶ ಜಿ. ಪಾಟೀಲ, ಹಣಮಂತ ರಾಮುಲು, ನಾಗೇಶ ಮಾದಯ್ಯ ಸ್ವಾಮಿ, ಮಲ್ಲಿಕಾರ್ಜುನ ಮರಕಲ್ಲೆ, ವಿಜಯಕುಮಾರ ಬೆಲ್ದೆ, ಮೊಹಮ್ಮದ್ ಇಮರೋಸ್, ಮೊಹಮ್ಮದ್ ಕುತುಬುದ್ಧಿನ್ ಹಾಗೂ ಮೊಹಮ್ಮದ್ ಸಲಾವುದ್ದಿನ್ ಫರಾನ್ ಅವರನ್ನು ಶ್ರೀಮಠದಿಂದ ಗುರುಬಸವ ಪಟ್ಟದ್ದೇವರು ಸನ್ಮಾನಿಸಿದರು.

ಕನ್ನಡಪರ ಸಂಘಟನೆಗಳ ಪ್ರಮುಖರಾದ ಸಂತೋಷ ಬಿ.ಜಿ. ಪಾಟೀಲ, ಸಂಗಮೇಶ ಗುಮ್ಮೆ, ಸಂಜುಕುಮಾರ ನಾವದಗಿ, ಗೋರಕ ಶ್ರೀಮಾಳೆ, ರಾಜಕುಮಾರ ಡಾವರಗಾಂವೆ, ಚಂದು ಸಂಪಂಗೆ, ಚಂದ್ರಕಾಂತ ಸಂಪಂಗೆ, ಮಾಳಸ್ಕಾಂತ ವಾಘೆ, ಚಂದ್ರಕಲಾ ಪ್ರಭು ಡಿಗ್ಗೆ, ಸಿದ್ರಾಮಯ್ಯ ಸ್ವಾಮಿ, ಕೈಲಾಸ ಹಿರೇಮಠ, ಬಸವರಾಜ ಕಾರಬಾರಿ, ಬಂಡೆಪ್ಪ ಕರಸಣ್ಣ, ರಾಹುಲ್ ಸಿಂಧೆ, ಸಂತೋಷ ನಾಟೇಕರ್, ಪ್ರವೀಣ ಮೋರೆ, ತುಕಾರಾಮ ಕಾಸ್ಲೆ ಹಾಗೂ ಶರಣ ಸುದೀಪ ತುಗಾಂವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಮಾತೃವಂದನಾ ಯೋಜನೆಯಡಿ ಜಿಲ್ಲಾ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ
ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೀಪಕ ಠಮಕೆ ನಿರೂಪಿಸಿದರು. ಗುರುಪ್ರಸಾದ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪಿ.ಕೆ. ಪ್ರಭು ವಚನ ಗಾಯನ ನಡೆಸಿಕೊಟ್ಟರು.



