ಬಿಸ್ಲೆರಿ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯು “ಅಸುರಕ್ಷಿತ” ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸೋಮವಾರ ಅಧಿಕೃತ ಸ್ಪಷ್ಟನೆ ನೀಡಿರುವ ಬಿಸ್ಲೆರಿ ಸಂಸ್ಥೆಯು, ತನ್ನ ಪ್ಯಾಕೇಜ್ಡ್ ಕುಡಿಯುವ ನೀರು ಗ್ರಾಹಕರ ಬಳಕೆಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪ್ರತಿಪಾದಿಸಿದೆ.
ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದ ಎಫ್‌ಎಸ್‌ಎಸ್‌ಎಐ, ಬಿಸ್ಲೆರಿ ಘಟಕದಿಂದ ಸಂಗ್ರಹಿಸಲಾದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ಬ್ರೋಮೇಟ್ ಕಂಡುಬಂದಿರುವುದರಿಂದ ಅದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಅಡಿಯಲ್ಲಿ ಅಸುರಕ್ಷಿತವೆಂದು ಘೋಷಿಸಲಾಗಿದೆ ಎಂದು ತಿಳಿಸಿತ್ತು.
ಇದನ್ನೂ ಓದಿ: ಬಿಸ್ಲೆರಿ ನೀರಿನ ಮಾದರಿಯಲ್ಲಿ ಸಂಭಾವ್ಯ ಕ್ಯಾನ್ಸರ್ ಕಾರಕ ಅಂಶ: ಕಾನೂನು ಸಮರಕ್ಕೆ ಸಜ್ಜಾದ ಎಫ್‌ಎಸ್‌ಎಸ್‌ಎಐ
ಕಂಪನಿಯ ಮೇಲ್ಮನವಿಯ ಮೇರೆಗೆ ಈ ಮಾದರಿಯನ್ನು ರೆಫರಲ್ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಅಲ್ಲಿ ಪಾಲಿನ್ಯೂಕ್ಲಿಯರ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು (PAHs) ಪತ್ತೆಯಾಗಿರುವುದರಿಂದ ಅದು ಅಸುರಕ್ಷಿತವೆಂದು ವರದಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಅನುಮೋದನೆ ನೀಡಲಾಗಿದೆ ಎಂದು ಪ್ರಾಧಿಕಾರ ವಿವರಿಸಿದೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಸ್ಲೆರಿ, 2025ರ ನವೆಂಬರ್ 22ರಂದು ತಾವು ಸಲ್ಲಿಸಿದ ಮೇಲ್ಮನವಿಯ ನಂತರ ರೆಫರಲ್ ಪ್ರಯೋಗಾಲಯದಲ್ಲಿ ಬ್ರೋಮೇಟ್ ಪ್ರಮಾಣ ನಿಗದಿತ ಮಿತಿಯೊಳಗೆ ಇರುವುದು ಕಂಡುಬಂದಿತ್ತು, ಆದರೆ ಪಿಎಎಚ್ ಅಂಶದ ಬಗ್ಗೆ ಉಲ್ಲೇಖಿಸಲಾಗಿತ್ತು ಎಂದು ಹೇಳಿದೆ.
ಎರಡು ವರದಿಗಳ ನಡುವಿನ ವ್ಯತ್ಯಾಸದಿಂದಾಗಿ ಎಫ್‌ಎಸ್‌ಎಸ್‌ಎಐ ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯದಲ್ಲಿ ಅದೇ ಮಾದರಿಯನ್ನು ಪರೀಕ್ಷಿಸಿದಾಗ ಬ್ರೋಮೇಟ್ ಪ್ರಮಾಣವು ನಿಗದಿತ ಮಿತಿಯೊಳಗೆ ಇರುವುದು ದೃಢಪಟ್ಟಿದ್ದು, ಈ ವರದಿಯನ್ನು 2026ರ ಫೆಬ್ರವರಿ 2ರಂದು ಪ್ರಾಧಿಕಾರದ ಪಶ್ಚಿಮ ಪ್ರಾದೇಶಿಕ ಕಚೇರಿಗೆ ಸಲ್ಲಿಸಲಾಗಿತ್ತು ಎಂದು ಕಂಪನಿ ತಿಳಿಸಿದೆ.
ಫೆಬ್ರವರಿಯಲ್ಲಿ ವರದಿ ಸಲ್ಲಿಸಿದ ಬಳಿಕ ಪ್ರಾಧಿಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಈ ಪ್ರಕರಣ ಮುಕ್ತಾಯವಾಗಿದೆ ಎಂದು ಭಾವಿಸಿದ್ದೆವು ಎಂದು ಬಿಸ್ಲೆರಿ ಸ್ಪಷ್ಟಪಡಿಸಿದೆ. ಅಲ್ಲದೆ, ಇಂದಿಗೂ ತಮಗೆ ಇ-ಮೇಲ್ ಅಥವಾ ಹಾರ್ಡ್ ಕಾಪಿ ಮೂಲಕ ಯಾವುದೇ ಅಧಿಕೃತ ನೋಟಿಸ್ ತಲುಪಿಲ್ಲ ಹಾಗೂ ಎಫ್‌ಎಸ್‌ಎಸ್‌ಎಐ ವೆಬ್‌ಸೈಟ್‌ನಲ್ಲೂ ಈ ನೋಟಿಸ್ ಲಭ್ಯವಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.
ತಮ್ಮ 10-ಹಂತದ ಉತ್ಪಾದನಾ ಪ್ರಕ್ರಿಯೆಯಲ್ಲಿ 90ಕ್ಕೂ ಹೆಚ್ಚು ಕಠಿಣ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಸ್ಲೆರಿ ತಿಳಿಸಿದೆ.
ಇದೇ ವೇಳೆ, ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಎಫ್‌ಎಸ್‌ಎಸ್‌ಎಐ ದೇಶಾದ್ಯಂತ ತಪಾಸಣೆಯನ್ನು ತೀವ್ರಗೊಳಿಸಿದ್ದು, ಬಿಸ್ಲೆರಿ ಜೊತೆಗೆ ಇತರ ನಾಲ್ಕು ಆಹಾರ ಸಂಸ್ಥೆಗಳ (ವಸಂತ್ ಮಸಾಲಾ, ಟಿಟ್-ಬಿಟ್ ಫುಡ್ಸ್, ಮೀಮಾಂಸ ಇಂಡಸ್ಟ್ರೀಸ್ ಮತ್ತು ಆಶಾ ಕನ್ಫೆಕ್ಷನರಿ) ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದೆ. ಅಲ್ಲದೆ, ನಿಯಮ ಪಾಲಿಸದ ಎರಡು ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದ್ದು, ಮಾರುಕಟ್ಟೆಯಲ್ಲಿರುವ ಎಲ್ಲಾ ಪ್ಯಾಕೇಜ್ಡ್ ಕುಡಿಯುವ ನೀರಿನ ಕಂಪನಿಗಳ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ.



