ಪೋಕ್ಸೊ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ 35 ವರ್ಷದ ರೈತನೊಬ್ಬ, ತಾನು ದೌರ್ಜನ್ಯವೆಸಗಿದ್ದ ಸಂತ್ರಸ್ತೆ, ಆಕೆಯ ಕುಟುಂಬದ ಇಬ್ಬರು ಸದಸ್ಯರು ಹಾಗೂ ತನ್ನ ಸ್ವಂತ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಹಾಬಾದ್ ಪಟ್ಟಣದ ಸಮೀಪ ಶುಕ್ರವಾರ ರಾತ್ರಿ ನಡೆದಿದೆ.
ಆರೋಪಿಯು 16 ವರ್ಷದ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ, ಬಾಲಕಿಯ ಕುಟುಂಬಸ್ಥರು ಕಳೆದ ಮೇ ತಿಂಗಳಲ್ಲಿ ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ, ಜೂನ್ ತಿಂಗಳಲ್ಲಿ ಶಹಾಬಾದ್‌ನ ಸ್ಥಳೀಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದನು. ಈ ಅಪರಾಧಕ್ಕೆ ಗರಿಷ್ಠ ಶಿಕ್ಷೆಯ ಪ್ರಮಾಣ 7 ವರ್ಷಗಳಿಗಿಂತ ಕಡಿಮೆ ಇದ್ದ ಕಾರಣ, ನ್ಯಾಯಾಲಯದ ನಿರ್ದೇಶನದ ಮೇರೆಗೆ ಆತನನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಶುಕ್ರವಾರ ರಾತ್ರಿ ಸುಮಾರು 10:45ಕ್ಕೆ ತನ್ನ ಸ್ವಗ್ರಾಮದಿಂದ 6 ಕಿ.ಮೀ ದೂರದಲ್ಲಿರುವ ಶಹಾಬಾದ್ ಪಟ್ಟಣದಲ್ಲಿರುವ ಬಾಲಕಿಯ ಮನೆಗೆ ಆತ ಕಾರಿನಲ್ಲಿ ತೆರಳಿದ್ದಾನೆ. ಬಾಲಕಿಯ 42 ವರ್ಷದ ತಾಯಿ ಬಾಗಿಲು ತೆಗೆಯುತ್ತಿದ್ದಂತೆ ಆಕೆಯ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಬಳಿಕ ಮನೆಗೆ ನುಗ್ಗಿ, ಹಾಸಿಗೆಯಲ್ಲಿ ಮಲಗಿದ್ದ ಬಾಲಕಿಯ 60 ವರ್ಷದ ಅಜ್ಜಿಯನ್ನೂ ಕೊಲೆ ಮಾಡಿದ್ದಾನೆ. ನಂತರ 16 ವರ್ಷದ ಬಾಲಕಿಯನ್ನು ಬಲವಂತವಾಗಿ ತನ್ನ ಕಾರಿಗೆ ಎಳೆದುಕೊಂಡು ಹೋಗಿದ್ದಾನೆ. ಆದರೆ, ಮನೆಯಲ್ಲೇ ಇದ್ದ ಬಾಲಕಿಯ 20 ವರ್ಷದ ಬುದ್ಧಿಮಾಂದ್ಯ ಸಹೋದರಿಗೆ ಆತ ಯಾವುದೇ ಹಾನಿ ಮಾಡಿಲ್ಲ ಎಂದು ಶಹಾಬಾದ್ ಪೊಲೀಸರು ತಿಳಿಸಿದ್ದಾರೆ.
ಬಳಿಕ ತನ್ನ ಗ್ರಾಮದ ಕೆರೆಯ ಬಳಿಗೆ ಬಾಲಕಿಯನ್ನು ಕರೆದೊಯ್ದ ಆರೋಪಿ, ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದು, ಮೃತದೇಹವನ್ನು ಕೆರೆಯ ಏರಿಯ ಬಳಿ ಎಸೆದು ತನ್ನ ಮನೆಯತ್ತ ತೆರಳಿದ್ದಾನೆ.
ಬಾಲಕಿಯ ಹತ್ಯೆಯ ನಂತರ, ರಾತ್ರಿ 11:21ರ ಸುಮಾರಿಗೆ ತನ್ನ ಮನೆಗೆ ಬಂದ ಆರೋಪಿ, ಗಾಢ ನಿದ್ರೆಯಲ್ಲಿದ್ದ ತನ್ನ 31 ವರ್ಷದ ಪತ್ನಿ ಹಾಗೂ 4 ವರ್ಷ ಮತ್ತು 18 ತಿಂಗಳ ಇಬ್ಬರು ಗಂಡು ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೇವಲ 6 ನಿಮಿಷಗಳ ಅಂತರದಲ್ಲಿ ಈ ಕೃತ್ಯವೆಸಗಿ ಮನೆಯಿಂದ ಹೊರಬಂದಿದ್ದಾನೆ.
ಈ ಸರಣಿ ಹತ್ಯೆಗಳ ಬಳಿಕ ಶಹಾಬಾದ್‌ನಲ್ಲಿಯೇ ವಾಸವಿರುವ ತನ್ನ ತಂದೆಗೆ ಕರೆ ಮಾಡಿ ನಡೆದ ಘಟನೆಗಳ ಬಗ್ಗೆ ಹೇಳಿ, ಕಾರಿನಲ್ಲಿ ಪರಾರಿಯಾಗಿದ್ದಾನೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
“ಆರೋಪಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ. ಬಾಲಕಿ, ಆಕೆಯ ಕುಟುಂಬದವರು ಮತ್ತು ತನ್ನ ಸ್ವಂತ ಕುಟುಂಬದವರನ್ನೇ ಈ ರೀತಿ ಸಾಮೂಹಿಕವಾಗಿ ಹತ್ಯೆ ಮಾಡಲು ಆತನನ್ನು ಪ್ರೇರೇಪಿಸಿದ ನಿಖರ ಕಾರಣವೇನೆಂದು ಈ ಹಂತದಲ್ಲಿ ತಿಳಿದುಬಂದಿಲ್ಲ,” ಎಂದು ಫ್ಯೂಚರ್ ಸಿಟಿ ಪೊಲೀಸ್ ಕಮಿಷನರ್ ತರುಣ್ ಜೋಶಿ ಸ್ಪಷ್ಟಪಡಿಸಿದ್ದಾರೆ.




