ಉಡುಪಿ | ಹೊಂಡ ಗುಂಡಿ ರಸ್ತೆಯಲ್ಲಿ ಸಂಚಾರ ನರಕ; ಸುರಕ್ಷತೆಗಿಲ್ಲ ಆದ್ಯತೆ

Date:

ಅಭಿವೃದ್ಧಿಯ ಸಂಕೇತವಾಗಬೇಕಿದ್ದ ರಸ್ತೆಗಳು ಇಂದು ಉಡುಪಿ ಜಿಲ್ಲೆಯ ಸಾರ್ವಜನಿಕರ ಪಾಲಿಗೆ ಸಂಕಷ್ಟದ ಸಂಕೇತವಾಗಿವೆ. ಮಳೆಗಾಲ ಆರಂಭವಾದರೆ ರಸ್ತೆಗಳು ಕೆಸರುಮಯವಾಗುತ್ತದೆ. ದೊಡ್ಡ ಹೊಂಡ ಗುಂಡಿಗಳು ನಿರ್ಮಾಣವಾಗಿ ರಸ್ತೆ ತುಂಬೆಲ್ಲಾ ನೀರು ನಿಲ್ಲುವುದು, ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿನ ತಾತ್ಕಾಲಿಕ ರಸ್ತೆಗಳು ಕೊಚ್ಚಿಹೋಗುವುದುದರಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.

ಬೈಂದೂರು–ಕೊಲ್ಲೂರು ರಸ್ತೆ, ಕಾರ್ಕಳದ ಕಲ್ಲೊಟ್ಟೆ–ಬಂಡಿಮಠ ರಸ್ತೆ ಹಾಗೂ ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಳರಸ್ತೆಗಳ ಇತ್ತೀಚಿನ ಸ್ಥಿತಿ ಜಿಲ್ಲೆಯ ರಸ್ತೆ ನಿರ್ವಹಣೆಯಲ್ಲಿನ ಲೋಪಗಳಿಗೆ ಸ್ಪಷ್ಟ ಸಾಕ್ಷಿಯಾಗಿದೆ. ಬೈಂದೂರು–ಕೊಲ್ಲೂರು ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದ್ದು, ಸೇತುವೆ ನಿರ್ಮಾಣಕ್ಕಾಗಿ ನಿರ್ಮಿಸಲಾದ ತಾತ್ಕಾಲಿಕ ಬದಲಿ ರಸ್ತೆಗಳು ಮಳೆಗಾಲದಲ್ಲಿ ಸಂಪೂರ್ಣ ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿವೆ.

- Advertisement -

ಗೋಳಿಹೊಳೆ, ಆರೆಶಿರೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಿಲೋಮೀಟರ್‌ಗಟ್ಟಲೆ ರಸ್ತೆ ಕೆಸರಿನಿಂದ ಆವೃತವಾಗಿದ್ದು, ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವಂತಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಇದೇ ರಸ್ತೆಯನ್ನು ಅವಲಂಬಿಸುತ್ತಾರೆ. ಆದರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಬೇಕಾದ ಮೂಲಭೂತ ವ್ಯವಸ್ಥೆಯೇ ಇಲ್ಲದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲ ಮಳೆಯಲ್ಲೇ ತಾತ್ಕಾಲಿಕ ರಸ್ತೆ ಕೊಚ್ಚಿಹೋದರೂ, ಅದರಿಂದ ಯಾವುದೇ ಪಾಠ ಕಲಿಯದ ಆಡಳಿತ ವ್ಯವಸ್ಥೆಯ ಕುರಿತು ಗಂಭೀರ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ಈ ಕಾಮಗಾರಿಯ ಕುರಿತು ಜನಪ್ರತಿನಿಧಿಗಳ ಸಭೆಗಳಲ್ಲಿ ಹಲವು ಬಾರಿ ಚರ್ಚೆಯಾಗಿದ್ದು, ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿಯಿದ್ದರೂ, ನೆಲಮಟ್ಟದಲ್ಲಿ ಯಾವುದೇ ಬದಲಾವಣೆ ಕಾಣಿಸಿಲ್ಲ. ಪರಿಣಾಮವಾಗಿ ಪ್ರತಿದಿನ ನೂರಾರು ಟ್ಯಾಕ್ಸಿಗಳು, ಖಾಸಗಿ ವಾಹನಗಳು ಹಾಗೂ ಸ್ಥಳೀಯರ ವಾಹನಗಳು ಕೆಸರಿನ ನಡುವೆ ಹರಸಾಹಸಪಟ್ಟು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವದ ಮಾರ್ಗವಾಗಿರುವ ಈ ರಸ್ತೆಯ ದುಸ್ಥಿತಿ ಜಿಲ್ಲೆಯ ಪ್ರತಿಷ್ಠೆಗೂ ಧಕ್ಕೆ ತರುತ್ತಿದೆ.

ಕಾರ್ಕಳದ ಕಲ್ಲೊಟ್ಟೆ–ಬಂಡಿಮಠ ರಸ್ತೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಮೃತ್ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆ ಅಗೆದ ನಂತರ ಅದನ್ನು ಸಮರ್ಪಕವಾಗಿ ಮರುನಿರ್ಮಿಸದ ಕಾರಣ ರಸ್ತೆ ಸಂಪೂರ್ಣ ಹಾಳಾಗಿದೆ. ಮಣ್ಣು ಮುಚ್ಚಿ ಬಿಟ್ಟ ಕಾಮಗಾರಿ ಮಳೆಯ ನೀರಿಗೆ ಕುಸಿದು ಎಲ್ಲೆಲ್ಲೂ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಪೈಪ್‌ಲೈನ್‌ಗಳಲ್ಲಿ ಪದೇ ಪದೇ ಸೋರಿಕೆ ಉಂಟಾಗುತ್ತಿರುವುದರಿಂದ ಮತ್ತೆ ಮತ್ತೆ ರಸ್ತೆ ಅಗೆದು ದುರಸ್ತಿ ನಡೆಸಲಾಗುತ್ತಿದ್ದು, ಸಾರ್ವಜನಿಕರಿಗೆ ನಿತ್ಯದ ಸಂಕಷ್ಟ ಎದುರಾಗಿದೆ. ಈ ರಸ್ತೆಯು ಕಾರ್ಕಳದಿಂದ ಉಡುಪಿ ಹಾಗೂ ಹೆಬ್ರಿ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದರೂ, ಈಗ ದ್ವಿಚಕ್ರ ವಾಹನ ಸವಾರರು ಮತ್ತು ಆಟೋ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ರಸ್ತೆ ಮಧ್ಯದ ಗುಂಡಿಗಳಲ್ಲೇ ಬಾಳೆಗಿಡ ಹಾಗೂ ಸಸಿಗಳನ್ನು ನೆಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದು ಕೇವಲ ಪ್ರತಿಭಟನೆಯಲ್ಲ, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜನರ ಅಸಹಾಯಕತೆಯ ಸಂಕೇತವಾಗಿದೆ. ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದ್ದರೂ, ಜನರು ರಸ್ತೆ ಮಧ್ಯೆ ಬಾಳೆಗಿಡ ನೆಡುವ ಪರಿಸ್ಥಿತಿ ಎದುರಾಗಿರುವುದು ವ್ಯವಸ್ಥೆಯ ವೈಫಲ್ಯವನ್ನು ಬಿಂಬಿಸುತ್ತದೆ.

d91f2b8f 9d6c 40fd 8b7b 6c3e79bd05f0

ಉಚ್ಚಿಲ ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಇದೇ ಚಿತ್ರಣ ಕಾಣಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ಹಲವಾರು ಒಳರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಾಘವೇಂದ್ರ ಮಠ ರಸ್ತೆ, ಪೊಲ್ಯ–ಬರ್ಪಾಣಿ ರಸ್ತೆ, ಅಲ್ ಪೊಲ್ಯ ರಸ್ತೆ, ಪೊಲ್ಯ ಮಸೀದಿ ರಸ್ತೆ, ಉಚ್ಚಿಲ ಚರ್ಚ್ ರಸ್ತೆ ಹಾಗೂ ಫಿಶರೀಸ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳು ಮಳೆ ನೀರಿನಿಂದ ತುಂಬಿ ವಾಹನ ಸವಾರರಿಗೆ ಅಪಾಯದ ಬಲೆಯಾಗಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿದಿನ ಜೀವಭಯದಲ್ಲೇ ಸಂಚರಿಸುವಂತಾಗಿದೆ. ಕೆಲವೆಡೆ ಚರಂಡಿಗಳು ಮುಚ್ಚಿಹೋಗಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ರಸ್ತೆ ಮತ್ತಷ್ಟು ಹಾಳಾಗುತ್ತಿದೆ.

ಈ ಮೂರು ಘಟನೆಗಳನ್ನು ಗಮನಿಸಿದರೆ ಸಮಸ್ಯೆ ರಸ್ತೆಗಳದ್ದಷ್ಟೇ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕಾಮಗಾರಿ ಆರಂಭಿಸುವ ಮೊದಲು ವೈಜ್ಞಾನಿಕ ಯೋಜನೆ ರೂಪಿಸದಿರುವುದು, ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು, ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಮರುಸ್ಥಾಪನೆಯಲ್ಲಿ ನಿರ್ಲಕ್ಷ್ಯ ತೋರುವುದು ಹಾಗೂ ಗುತ್ತಿಗೆದಾರರ ಮೇಲಿನ ಮೇಲ್ವಿಚಾರಣೆಯ ಕೊರತೆ ಈ ಸಮಸ್ಯೆಗಳ ಮೂಲ ಕಾರಣಗಳಾಗಿವೆ. ಸಾರ್ವಜನಿಕರು ನೀಡುವ ದೂರುಗಳಿಗೆ ತ್ವರಿತ ಸ್ಪಂದನೆ ಸಿಗದಿರುವುದೂ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆ ಸಮಸ್ಯೆಗಳ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಾಗುತ್ತಿದೆ. ಕೆಲವೆಡೆ ರಸ್ತೆ ಗುಂಡಿಗಳಲ್ಲಿ ಬಾಳೆಗಿಡ ನೆಡಲಾಗುತ್ತಿದೆ, ಮತ್ತೆ ಕೆಲವೆಡೆ ಕೆಸರಿನಲ್ಲೇ ವಾಹನಗಳನ್ನು ತಳ್ಳಿಕೊಂಡು ಸಾಗುವ ಪರಿಸ್ಥಿತಿ ಎದುರಾಗುತ್ತಿದೆ. ಅಪಘಾತಗಳು ಸಂಭವಿಸಿದ ಬಳಿಕ ತಾತ್ಕಾಲಿಕ ದುರಸ್ತಿ ನಡೆಸುವ ಬದಲು, ಅಪಘಾತವೇ ಸಂಭವಿಸದಂತೆ ಮುಂಚಿತವಾಗಿ ಕ್ರಮ ಕೈಗೊಳ್ಳುವ ಆಡಳಿತಾತ್ಮಕ ಇಚ್ಛಾಶಕ್ತಿ ಅಗತ್ಯವಾಗಿದೆ.

64cf5f52 ff1e 4ca7 86fe 6c2933c3daa4

‘ಜಿಲ್ಲಾಧಿಕಾರಿ ಕಚೇರಿ ರಸ್ತೆಯೇ ಹೀಗಿದ್ದರೆ, ಜನಸಾಮಾನ್ಯರ ರಸ್ತೆಗಳ ಗತಿ ಏನು?’

ಈದಿನ.ಕಾಮ್‌ ಜೊತೆ ಮಾತನಾಡಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು, “ನಗರದ ಪ್ರಮುಖ ಮಾರ್ಗವಾಗಿರುವ ಉಡುಪಿ ರೆಸಿಡೆನ್ಸಿ ಹೋಟೆಲ್ ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ ಸುಮಾರು ಮೂರು ತಿಂಗಳ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ಕೇವಲ ಮೂರು ತಿಂಗಳಲ್ಲೇ ರಸ್ತೆ ಹಲವೆಡೆ ಬಿರುಕು ಬಿಟ್ಟಿರುವುದು ಕಳಪೆ ಗುಣಮಟ್ಟದ ಕಾಮಗಾರಿಗೆ ಸ್ಪಷ್ಟ ಸಾಕ್ಷಿಯಾಗಿದೆ” ಎಂದು ಆರೋಪಿಸಿದರು.

“ಸಾರ್ವಜನಿಕರ ತೆರಿಗೆ ಹಣ ಈ ರೀತಿಯಾಗಿ ಪೋಲಾಗುತ್ತಿರುವುದು ಖಂಡನೀಯವಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಗರಸಭೆ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಯವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೇವಲ ತೇಪೆ ಹಾಕುವ ಕಾಮಗಾರಿಗೆ ಅವಕಾಶ ನೀಡದೆ, ಸಂಪೂರ್ಣ ರಸ್ತೆಯನ್ನು ಮರು ಕಾಂಕ್ರೀಟ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕು” ಎಂದು ಅವರು ಒತ್ತಾಯಿಸಿದರು.

ಇದರ ಜೊತೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿಯ ಬಗ್ಗೆಯೂ ಅವರು ಗಮನ ಸೆಳೆದರು. “ಜಿಲ್ಲಾಧಿಕಾರಿ ಕಚೇರಿಗೆ ಹೋಗಲು ಸಾಧ್ಯವಾಗುತ್ತದೆ. ಆದರೆ ಹಿಂದಿರುಗುವ ವೇಳೆ ಬೈಕ್ ಸವಾರರು ರಸ್ತೆಯ ಹೊಂಡಗಳಿಗೆ ಬಿದ್ದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಶನಿವಾರ ಮತ್ತು ಭಾನುವಾರ ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಈ ಹೊಂಡಗಳಿಂದ ಯಾವಾಗ ಎಷ್ಟು ಮಂದಿ ಅಪಘಾತಕ್ಕೀಡಾಗುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.

“ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯೇ ಈ ರೀತಿಯ ದುಸ್ಥಿತಿಯಲ್ಲಿದ್ದರೆ, ಸಾಮಾನ್ಯ ಜನರು ಪ್ರತಿದಿನ ಓಡಾಡುವ ರಸ್ತೆಗಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಬಹುದು. ಜಿಲ್ಲೆಯ ಹಲವೆಡೆ ರಸ್ತೆಗಳು ಹದಗೆಟ್ಟಿದ್ದು, ಇತ್ತೀಚೆಗೆ ಹಾಕಿರುವ ಡಾಂಬರ್ ರಸ್ತೆಗಳೇ ಈಗಾಗಲೇ ಕಿತ್ತು ಹೋಗುತ್ತಿವೆ. ಅವುಗಳನ್ನು ನೋಡಿದರೆ ಇಪ್ಪತ್ತು ವರ್ಷ ಹಳೆಯ ರಸ್ತೆಗಳಂತೆ ಕಾಣುತ್ತಿವೆ. ಇದು ಸಂಪೂರ್ಣ ಕಳಪೆ ಕಾಮಗಾರಿಯ ಪರಿಣಾಮ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ರಸ್ತೆಗಳನ್ನು ಗುಣಮಟ್ಟದಿಂದ ಮರುನಿರ್ಮಿಸದಿದ್ದರೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ನಿತ್ಯಾನಂದ ಒಳಕಾಡು ಎಚ್ಚರಿಕೆ ನೀಡಿದರು.

ರಸ್ತೆ ಎಂಬುದು ಕೇವಲ ಸಂಚಾರದ ಮಾರ್ಗವಲ್ಲ; ಅದು ಜನರ ದೈನಂದಿನ ಬದುಕಿನ ಜೀವನಾಡಿಯಾಗಿದೆ. ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ಜನರ ಬದುಕನ್ನೇ ದುಸ್ತರಗೊಳಿಸುವ ಕಾಮಗಾರಿಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವುದು, ಮಳೆಗಾಲಕ್ಕೂ ಮುನ್ನ ಅಪಾಯದ ಸ್ಥಳಗಳನ್ನು ಗುರುತಿಸಿ ದುರಸ್ತಿ ಕೈಗೊಳ್ಳುವುದು, ಕಾಮಗಾರಿ ನಡೆಸುವ ಗುತ್ತಿಗೆದಾರರ ಹೊಣೆಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಗದಿಪಡಿಸುವುದು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವುದು ಅಗತ್ಯ. ಇಲ್ಲವಾದರೆ, ಪ್ರತಿ ಮಳೆಗಾಲದಲ್ಲೂ ಇದೇ ಸಮಸ್ಯೆಗಳು ಮರುಕಳಿಸುತ್ತಲೇ ಇರುತ್ತವೆ; ಅಭಿವೃದ್ಧಿಯ ಹೆಸರಿನಲ್ಲಿ ಜನರು ಸಂಕಷ್ಟ ಅನುಭವಿಸುತ್ತಲೇ ಇರಬೇಕಾಗುತ್ತದೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೃಷಿ ವಿವಿಯಲ್ಲಿ ವರ್ಗಾವಣೆ ಆದೇಶ: ಉಲ್ಲಂಘನೆ ಆರೋಪ

ಈಶಾನ್ಯ ಶಿಕ್ಷಕರ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಯಚೂರಿನ ಕೃಷಿ ವಿಜ್ಞಾನಗಳ...

ರಾಯಚೂರು | ಹೊನ್ನಕುಣಿ ಕ್ರಾಸ್‌ನಿಂದ ಸಿರಿವಾರದವರೆಗೆ 8 ಸೇತುವೆಗಳ ಕಾಮಗಾರಿ ತಕ್ಷಣ ಆರಂಭಿಸಲು ಒತ್ತಾಯ

ದೇವದುರ್ಗ ತಾಲ್ಲೂಕಿನ ಮನಗೂಳಿ–ಬಿಚ್ಚಾಲಿ–61 ರಾಜ್ಯ ಹೆದ್ದಾರಿಯ ಹೊನ್ನಕುಣಿ ಕ್ರಾಸ್‌ನಿಂದ ಸಿರಿವಾರದವರೆಗೆ ನಿರ್ಮಿಸಬೇಕಿರುವ...

ವಿಜಯನಗರ | SIR ರದ್ಧತಿ, ಜ್ಞಾನೇಶ್ ಕುಮಾರ್ ವಜಾಕ್ಕೆ ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಗದಗ | ಜ್ಞಾನೇಶ್ ಕುಮಾರ್ ವಜಾಗೊಳಿಸಿ, SIR ರದ್ದುಗೊಳಿಸಲು ಆಗ್ರಹಿಸಿ ಎಸ್ ಎಫ್ ಐ ಮನವಿ

ವಿಶೇಷ ತೀವ್ರ  ಮತ ಪರಿಷ್ಕರಣೆ (ಎಸ್ ಐ ಆರ್) ರದ್ದು ಗೊಳಿಸಲು...