ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಎಂಬ ಅಪ್ರಕಟಿತ ಆತ್ಮಚರಿತ್ರೆ ಪುಸ್ತಕದ ವಿಷಯದಲ್ಲಿ ತಮ್ಮನ್ನು ಅನಗತ್ಯವಾಗಿ ಎಳೆದು ತರಲಾಯಿತು ಎಂದು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಹೇಳಿದ್ದಾರೆ.
‘ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್‌ಅರ್ಥಿಂಗ್ ಮಿಲಿಟರಿ ಮಿಕ್ಸ್ ಅಂಡ್ ಮಿಸ್ಟರೀಸ್’ ಎಂಬ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನರವಣೆ, ತಮ್ಮ ಆತ್ಮಚರಿತ್ರೆ ಪುಸ್ತಕದ ಸುತ್ತ ನಡೆದ ಬೆಳವಣಿಗೆಯನ್ನು ಪ್ರಸ್ತಾಪಿಸಿದ್ದಲ್ಲದೇ, ನಾನು ಆ ಘಟನೆಯಿಂದ ಹೊರ ಬಂದಿದ್ದು, ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದೇನೆ. ಮೂರನೆಯದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
‘ರಕ್ಷಣಾ ಸಚಿವಾಲಯ ಪುಸ್ತಕವನ್ನು ಪರಿಶೀಲಿಸುವವರೆಗೆ ಅದನ್ನು ತಡೆಹಿಡಿಯುವಂತೆ ಪ್ರಕಾಶಕರಿಗೆ ಸೂಚನೆ ನೀಡಿತ್ತು. ನನ್ನ ಮಟ್ಟಿಗೆ ವಿಷಯ ಅಲ್ಲಿಗೆ ಮುಗಿದು ಹೋಗಿತ್ತು. ನಾನು ಆ ವಿಷಯವನ್ನು ಅಲ್ಲಿಗೆ ಬಿಟ್ಟಿದ್ದೆ. ನನ್ನ ಪಾಇಗೆ ಅದು ಮುಗಿದ ಅಧ್ಯಾಯ. ಆದರೆ, ಅನಗತ್ಯವಾಗಿ ನನ್ನನ್ನು ಉಲ್ಲೇಖಿಸುವುದು, ಪ್ರಕಟವಾಗದ ಪುಸ್ತಕದ ವಿಷಯಕ್ಕೆ ನನ್ನನ್ನು ಎಳೆದು ತಂದು ಸುದ್ದಿಯಾಗುವಂತೆ ಮಾಡಿದ್ದು ಅಗತ್ಯವಿರಲಿಲ್ಲ’ ಎಂದು ನರವಣೆ ‘ಪಿಟಿಐ’ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಮತದಾನದ ಹಕ್ಕನ್ನು ತರಿದು ಹಾಕುವ ಹುನ್ನಾರದ ವಿರುದ್ಧದ ‘ಪ್ರತೀಕಾರ’ವೇ ಮತ ಪ್ರಮಾಣದ ಏರಿಕೆಗೆ ಕಾರಣ?
ಈ ವರ್ಷದ ಆರಂಭದಲ್ಲಿ ನವರಣೆ ಅವರ ‘ಅಪ್ರಕಟಿತ ಆತ್ಮಚರಿತ್ರೆ’ಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಪುಸ್ತಕದ ವಿಚಾರ ರಾಜಕೀಯ ವಲಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸತ್ತಿನಲ್ಲಿ ನರವಣೆ ಅವರ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಉಲ್ಲೇಖಿಸಿದ್ದರು. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ನಿಲುವಿನ ಬಗ್ಗೆ ಪ್ರಸ್ತಾಪಿಸಲಾಗಿತ್ತು ಎಂದು ಹೇಳಲಾಗುವ ವಿಚಾರದ ಸುತ್ತ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು. ಪೆಬ್ರವರಿಯಲ್ಲಿ ಅಪ್ರಕಟಿತ ಪುಸ್ತಕದ ಮಾಹಿತಿಯನ್ನು ಉಲ್ಲೇಖಿಸದಂತೆ ತಡೆಯಲಾಗಿತ್ತು.




